2020ರ ವಿಧಾನಸಭಾ ಚುನಾವಣೆಗಳಲ್ಲಿ ಮಹಾಘಟಬಂಧನ್ ಮತ್ತು ಎನ್‌ಡಿಎ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಮಹಾಮೈತ್ರಿಯ ಸೋಲಿನ ಪ್ರಮುಖ ಕಾರಣಗಳಲ್ಲೊಂದು ಎಐಎಂಐಎಂ ಆಡಿದ ಆಟವೇ. ಮುಸಲ್ಮಾನರೇ ನಿರ್ಣಾಯಕ ಆಗಿದ್ದ ಐದು ಕ್ಷೇತ್ರಗಳನ್ನು ಗೆದ್ದುಕೊಂಡರೂ ಬಿಹಾರದಲ್ಲಿ ಚಲಾಯಿಸಲಾದ ಒಟ್ಟು ಮತಗಳ ಶೇ.1.3ರಷ್ಟನ್ನು ಮಾತ್ರ ಪಡೆದಿತ್ತು ಓವೈಸಿ ಪಕ್ಷ.
ಬಿಹಾರ ವಿಧಾನಸಭಾ ಚುನಾವಣೆಗೆ ನಾಳೆ ನಡೆಯಲಿರುವ ಅಂತಿಮ ಚರಣದ ಮತದಾನವು 122 ಸೀಟುಗಳಿಗೆ ಮಹಾಮೈತ್ರಿ ಮತ್ತು ಎನ್‌ಡಿಎ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿದೆ.
ರಾಷ್ಟ್ರೀಯ ಜನತಾದಳ ನೇತೃತ್ವದ ಮಹಾಘಟಬಂಧನದ ತಳಹದಿಯೇ ಆಗಿ ಪರಿಣಮಿಸಿರುವ ಮುಸ್ಲಿಮ್ ಮತ್ತು ಯಾದವ್ ಬೆಂಬಲದ ಪ್ರಮುಖ ನೆಲೆ ಸೀಮಾಂಚಲ ಅಥವಾ ಪೂರ್ವೀ ಬಿಹಾರ. ಪೂರ್ಣಿಯಾ, ಕಟೀಹಾರ, ಅರಾಡಿಯ, ಕಿಶನ್ ಗಂಜ್ ಜಿಲ್ಲೆಗಳ ಸೀಮೆ. ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಅಂಟಿಕೊಂಡಿರುವ ಕಾರಣ ಸಂವೇದನಾಶೀಲವೆಂದು ಪರಿಗಣಿಸಲಾದ ಪ್ರದೇಶ. ಪಾರಂಪರಿಕವಾಗಿ ಕಾಂಗ್ರೆಸ್ ಮತ್ತು ಆರ್.ಜೆ.ಡಿ.ಯ ಭದ್ರಕೋಟೆ. ಆದರೆ ಈ ಯಾದವ-ಮುಸಲ್ಮಾನ ಚುನಾವಣಾ ಸಮೀಕರಣ 2020ರಲ್ಲಿ ಧ್ವಸ್ತವಾಗಿತ್ತು.
ರಾಜಕೀಯ ವಿಶ್ಲೇಷಕರ ಪ್ರಕಾರ ಸೀಮಾಂಚಲದ 24 ಸೀಟುಗಳಲ್ಲಿನ ಸೋಲು ಗೆಲುವು ಬಿಹಾರದ ಅಧಿಕಾರಸೂತ್ರ ಯಾರ ಕೈ ಸೇರುತ್ತದೆ ಅಥವಾ ಯಾರ ಕೈತಪ್ಪುತ್ತದೆ ಎಂಬುದನ್ನು ತೀರ್ಮಾನಿಸುವಷ್ಟು ಶಕ್ತಿಯುತ. ಅಧಿಕಾರ ಹಿಡಿಯಬೇಕಿದ್ದರೆ ಮಹಾಮೈತ್ರಿ ಇಲ್ಲಿ 18-20 ಸೀಟುಗಳನ್ನು ಗೆಲ್ಲಲೇಬೇಕಿದೆ.
24 ವಿಧಾನಸಭಾ ಕ್ಷೇತ್ರಗಳಿರುವ ಸೀಮೆಯಿದು. ಬಿಹಾರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮುಸ್ಲಿಮ್ ಜನಸಂಖ್ಯೆಯಿರುವ (ಶೇ.67.8) ಜಿಲ್ಲೆ ಕಿಶನ್ ಗಂಜ್. ಈ ದಿಕ್ಕಿನಲ್ಲಿ ಕಟೀಹಾರದ್ದು ಎರಡನೆಯ ಸ್ಥಾನ (ಶೇ.44.47). ಅರಾಡಿಯಾ (ಶೇ.42.95), ಪೂರ್ಣಿಯಾ (ಶೇ.38.46). ಆದರೆ ಎನ್.ಡಿ.ಎ. ಇತ್ತೀಚಿನ ವರ್ಷಗಳಲ್ಲಿ ಈ ಸೀಮೆಯನ್ನೂ ಭೇದಿಸಿದೆ. ಯಾದವೇತರ ಬಲಿಷ್ಠ ಜಾತಿಗಳ ಹಿಂದೂಗಳಿಂದ ಹಿಡಿದು, ಮಹಾದಲಿತ ಮೂಸಾಹರ್ ಜಾತಿಯನ್ನೂ ಮುಟ್ಟಿದೆ. ಈ ಕಾರಣದಿಂದಾಗಿ ಪೈಪೋಟಿ ಬಿರುಸಾಗಿದ್ದು, ಮಹಾಘಟಬಂಧನ ಎಂದಿನಂತೆ ಆರಾಮಾಗಿ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಇಲ್ಲ.
ಸೀಮಾಂಚಲದ ಮುಸಲ್ಮಾನ ನೆಲೆಗಳಿಗೆ ಕಳೆದ ಚುನಾವಣೆಗಳಲ್ಲಿ ಹೈದರಾಬಾದಿನ ಓವೈಸಿ ಅವರ ಎಐಎಂಐಎಂ ಲಗ್ಗೆ ಹಾಕಿತ್ತು. ಎಂಟು ಮಂದಿ ಉಮೇದುವಾರರನ್ನು ಸೀಮಾಂಚಲದಲ್ಲೇ ಹೂಡಿತ್ತು. ಐದು ಸೀಟುಗಳನ್ನು ಗೆದ್ದು ಅಚ್ಚರಿ ಮೂಡಿಸಿತ್ತು. ಈ ಜಿಲ್ಲೆಗಳಿಂದ ಮಹಾಘಟಬಂಧನವನ್ನು ಕೇವಲ ಏಳು ಸೀಟುಗಳಿಗೆ ಕಟ್ಟಿ ಹಾಕಿತ್ತು. ಎನ್ ಡಿ ಎ 12 ಸೀಟುಗಳನ್ನು ಗೆಲ್ಲಲು ದಾರಿ ಮಾಡಿಕೊಟ್ಟಿತ್ತು. ಈ ಸಲ ಬಿಹಾರದಲ್ಲಿ ಒಟ್ಟು 28 ಸೀಟುಗಳಲ್ಲಿ ಸ್ಪರ್ಧಿಸಿದೆ. ಈ ಪೈಕಿ ಸೀಮಾಂಚಲದ 11 ಕ್ಷೇತ್ರಗಳೂ ಸೇರಿವೆ. ಕಿಶನ್ ಗಂಜ್, ಜೋಕಿಹಾಟ್, ಅಮೌರ್ ಹಾಗೂ ಬಾಯಸಿ ಕ್ಷೇತ್ರಗಳಲ್ಲಿ ಓವೈಸಿ ಪಕ್ಷ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದೆ. ಅರ್ಥಾತ್ ಮುಸ್ಲಿಮ್ ಮತಗಳು ಹಂಚಿ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ.
ಆದರೆ ಮುಸಲ್ಮಾನ ಮತದಾರರು ಈ ಸಲ ಓವೈಸಿ ಪಕ್ಷದಿಂದ ದೂರ ಸರಿದು ಮಹಾಘಟಬಂಧನ್ ಕಡೆಗೆ ಹೊರಳಿರುವ ಸೂಚನೆಗಳಿವೆ. ಮಹಾಘಟಬಂಧನ್, ಎನ್.ಡಿ.ಎ ಹಾಗೂ ಓವೈಸಿ ಪಕ್ಷ ಮುಸಲ್ಮಾನ ಹುರಿಯಾಳುಗಳನ್ನೇ ಹೂಡಿದೆ. ಓವೈಸಿ ವಿದ್ಯಾವಂತರು. ಆದರೆ ಬಿಹಾರದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಮಹಾಘಟಬಂಧನಕ್ಕೇ ನಮ್ಮ ಮತ ಎಂಬುದು ಬಹುತೇಕ ಮುಸಲ್ಮಾನರ ನಿಲುವು. ಆದರೆ ಜೋಕಿಹಾಟ್ ನಂತಹ ಕ್ಷೇತ್ರದಲ್ಲಿ ಮುಸಲ್ಮಾನರು ಕಾಂಗ್ರೆಸ್, ಎಐಎಂಐಎಂ, ಜೆ.ಡಿ.ಯು ಹಾಗೂ ಪ್ರಶಾಂತ್ ಕಿಶೋರ್ ಅವರ ಜನಸುರಾಜ್ ನಡುವೆ ಹಂಚಿ ಹೋಗಿರುವುದೂ ಉಂಟು.
2020ರ ವಿಧಾನಸಭಾ ಚುನಾವಣೆಗಳಲ್ಲಿ ಮಹಾಘಟಬಂಧನ್ ಮತ್ತು ಎನ್‌ಡಿಎ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಮಹಾಮೈತ್ರಿಯ ಸೋಲಿನ ಪ್ರಮುಖ ಕಾರಣಗಳಲ್ಲೊಂದು ಎಐಎಂಐಎಂ ಆಡಿದ ಆಟವೇ. ಮುಸಲ್ಮಾನರೇ ನಿರ್ಣಾಯಕ ಆಗಿದ್ದ ಐದು ಕ್ಷೇತ್ರಗಳನ್ನು ಗೆದ್ದುಕೊಂಡರೂ ಬಿಹಾರದಲ್ಲಿ ಚಲಾಯಿಸಲಾದ ಒಟ್ಟು ಮತಗಳ ಶೇ.1.3ರಷ್ಟನ್ನು ಮಾತ್ರ ಪಡೆದಿತ್ತು ಓವೈಸಿ ಪಕ್ಷ.
ಕಳೆದ ಚುನಾವಣೆಗಳಲ್ಲಿ ಓವೈಸಿ ಪಕ್ಷದಿಂದ ಗೆದ್ದಿದ್ದ ಬಹುತೇಕ ಶಾಸಕರು ಮತ್ತು ಸ್ಪರ್ಧಿಸಿದ್ದ ಹುರಿಯಾಳುಗಳು ಈ ಸಲ ಪಕ್ಷವನ್ನು ತೊರೆದು ಎದುರಾಳಿಗಳ ಶಿಬಿರಕ್ಕೆ ಜಿಗಿದಿದ್ದಾರೆ. ಐವರು ಶಾಸಕರ ಪೈಕಿ ನಾಲ್ವರು ಆರ್.ಜೆ.ಡಿ. ಸೇರಿದ್ದಾರೆ. ಕಳೆದ ಚುನಾವಣೆಯ ಸಾಧನೆಯನ್ನು ಈ ಸಲವೂ ಕೈವಶ ಮಾಡಿಕೊಳ್ಳಲು ಶ್ರಮಿಸಿದೆ ಎಐಎಂಐಎಂ. ಕಾಂಗ್ರೆಸ್ ಮತ್ತು ಆರ್ ಜೆ ಡಿ ಪಕ್ಷಗಳು ಮುಸಲ್ಮಾನರನ್ನು ಕೇವಲ ವೋಟ್ ಬ್ಯಾಂಕುಗಳಂತೆ ನಡೆಸಿಕೊಂಡಿವೆಯೆಂಬ ಸಿಟ್ಟು ಮುಸ್ಲಿಮ್ ಯುವಜನರಲ್ಲಿದೆ. ಈ ಸಿಟ್ಟನ್ನೇ ಸೀಟುಗಳನ್ನಾಗಿ ಪರಿವರ್ತಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ ಓವೈಸಿ.
ಇದನ್ನೂ ಓದಿ ತೇಜಸ್ವಿ vs ತೇಜ್ ಪ್ರತಾಪ್: ಲಾಲೂ ಮಕ್ಕಳ ಜಗಳದಿಂದ ಯಾರಿಗೆ ಲಾಭ?
ಮುಸಲ್ಮಾನ ಮತಗಳು ಹಂಚಿ ಹೋಗುವ ವಿದ್ಯಮಾನದ ಮೇಲೆ ತನ್ನ ಗೆಲುವಿನ ಮೆಟ್ಟಿಲುಗಳನ್ನು ಕಟ್ಟತೊಡಗಿದೆ ಎನ್.ಡಿ.ಎ. ಬಹುಸಂಖ್ಯಾತರನ್ನು ಒಂದು ಮಾಡಲು ಶ್ರಮಿಸಿದೆ. ಬಾಂಗ್ಲಾದೇಶಿ ನುಸುಳುಕೋರ ಸಮಸ್ಯೆಯನ್ನು ಎತ್ತಿ ಹೇಳುತ್ತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಗೃಹಮಂತ್ರಿ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ಮೋದಿ ಅವರ ಭಾಷಣಗಳು ಹಿಂದೂ ಮುಸ್ಲಿಮ್ ಧೃವೀಕರಣಕ್ಕೇ ಒತ್ತು ನೀಡಿವೆ. ಧೃವೀಕರಣ ಯಶಸ್ವಿಯಾದರೆ, ಎನ್ ಡಿ ಎ ಗೆ ಲಾಭ ನಿಶ್ಚಿತ. ಇಲ್ಲಿ ಗೆಲ್ಲುವುದಕ್ಕಿಂತ ಮಹಾಮೈತ್ರಿಗೆ ನಷ್ಟ ಉಂಟು ಮಾಡುವುದೇ ಎನ್.ಡಿ.ಎ. ಗುರಿ. ಕಳೆದ ಚುನಾವಣೆಯಲ್ಲಿ ಈ ಕೇವಲ ಆರು ಸೀಟುಗಳನ್ನು ಗೆದ್ದಿತ್ತು ಎನ್.ಡಿ.ಎ. ಈ ಸಲ ಓವೈಸಿ ಮತ್ತು ಧೃವೀಕರಣದ ಎರಡು ಕಾರಣಗಳಿಂದಾಗಿ ಹತ್ತು ಸೀಟುಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇತ್ತ ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ಬಿಡುವಿಲ್ಲದ ಪ್ರಚಾರ ನಡೆಸಿದ್ದಾರೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು




