ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೇ ಹಂತದ ಮತದಾನವು ಮಂಗಳವಾರ (ನ.11) ನಡೆಯಲಿದೆ. ಮತದಾರರನ್ನು ಮನ ಗೆಲ್ಲಲು ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಪರವಾಗಿ ಪ್ರಮುಖ ನಾಯಕರು ಭಾನುವಾರ ರಾಜ್ಯದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು.
122 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. 1.74 ಕೋಟಿ ಮಹಿಳಾ ಮತದಾರರನ್ನು ಒಳಗೊಂಡು ಒಟ್ಟು 3.70 ಕೋಟಿ ಮತದಾರರು ಕೊನೆಯ ಹಂತದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು.
ಬಿಹಾರ ವಿಧಾನಸಭಾ ಚುನಾವಣೆಯ ಎರಡೂ ಹಂತಗಳಲ್ಲಿ ರಾಹುಲ್ ಗಾಂಧಿ ಅವರು ಒಟ್ಟು 15 ಚುನಾವಣಾ ಭಾಷಣಗಳನ್ನು ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಬಿಹಾರದಲ್ಲೇ ಬೀಡು ಬಿಟ್ಟಿರುವ ಅಮಿತ್ ಶಾ ಅವರು ಭಾನುವಾರ ಸಸರಾಮ್ ಹಾಗೂ ಅರ್ವಾಲ್‌ಗಳಲ್ಲಿ ಬಿಜೆಪಿ ರ‍್ಯಾಲಿಗಳಲ್ಲಿ ಪಾಲ್ಗೊಂಡರು.
ಸತತ ಐದನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಯತ್ತ ಕಣ್ಣಿಟ್ಟಿರುವ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಕೂಡಾ ಸದ್ದಿಲ್ಲದೆ ಚುನಾವಣಾ ಪ್ರಚಾರ ನಡೆಸಿದರು.
ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ವ್ಯಾಪಕವಾಗಿ ಚುನಾವಣಾ ಪ್ರಚಾರ ಕೈಗೊಂಡರು.
ನೂತನ ಪಕ್ಷ ಜನ ಸೂರಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಅವರು ಕೂಡಾ ರ‍್ಯಾಲಿಗಳನ್ನು ನಡೆಸಿದ್ದಲ್ಲದೆ, ಮನೆಮನೆಗೆ ತೆರಳಿ ಮತಯಾಚಿಸಿದ್ದರು.
ಈ ಹಂತದ ಕ್ಷೇತ್ರಗಳು ಯಾದವ, ಕುರ್ಮಿ, ಭೂಮಿಹಾರ್ ಮತ್ತು ರಾಜಪೂತ ಸಮುದಾಯಗಳ ಬಲವಾದ ಪ್ರಭಾವವಿರುವ ಪ್ರದೇಶಗಳನ್ನು ಒಳಗೊಂಡಿದೆ. ಹಾಗೆಯೇ ಈ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರು ಶೇ. 17, ಎಸ್‌ಸಿ/ಎಸ್‌ಟಿ ಮತದಾರರು ಶೇ. 20 ರಷ್ಟು ಒಳಗೊಂಡಿದ್ದು, ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
ಬಿಹಾರ ಚುನಾವಣೆಯ ಮೊದಲ ಹಂತದಲ್ಲಿ 121 ಕ್ಷೇತ್ರಗಳಲ್ಲಿ ನವೆಂಬರ್ 6ರಂದು ಮತದಾನ ನಡೆದಿತ್ತು. ಚುನಾವಣಾ ಆಯೋಗದ ಅಂತಿಮ ಅಂಕಿಅಂಶಗಳ ಪ್ರಕಾರ, ಮೊದಲ ಹಂತದಲ್ಲಿ 65.08 ಶೇಕಡಾ ಮತದಾರರು ಮತ ಚಲಾಯಿಸಿದ್ದರು. ಇದು ಬಿಹಾರದ ಇತಿಹಾಸದಲ್ಲೇ ಅತಿ ಹೆಚ್ಚು ಮತದಾನವಾಗಿದೆ.
ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಚುನಾವಣೆಯ ಫಲಿತಾಂಶ ನವೆಂಬರ್ 14ರಂದು ಪ್ರಕಟಗೊಳ್ಳಲಿದೆ.
- 7.4 ಕೋಟಿ: ಒಟ್ಟು ಮತದಾರರು
- 3.7 ಕೋಟಿ: 11ರಂದು ಮತ ಚಲಾಯಿಸಲಿರುವ ಮತದಾರರು
- 122: ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಸಂಖ್ಯೆ
- 1,302: 2ನೇ ಹಂತದಲ್ಲಿ ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ
ಪಕ್ಷವಾರು ಸ್ಪರ್ಧಿಗಳ ವಿವರ
- ಆರ್‌ಜೆಡಿ; 70
- ಬಿಜೆಪಿ; 52
- ಜೆಡಿಯು; 45
- ಕಾಂಗ್ರೆಸ್; 37





