ಪತ್ರಕರ್ತನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯ ಪ್ರೇಮ್ ನಗರದಲ್ಲಿ ನಡೆದಿದೆ.
‘ದೈನಿಕ್ ಜಾಗರಣ್’ ಎಂಬ ಹಿಂದಿ ದೈನಿಕದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ವಿಮಲ್ ಕುಮಾರ್ ಯಾದವ್ ಹತ್ಯೆಯಾದವರು.
ಇಂದು(ಆಗಸ್ಟ್ 18) ಬೆಳಗ್ಗೆ 5 ಗಂಟೆಗೆ ಬಿಹಾರದ ಅರಾರಿಯಾ ಜಿಲ್ಲೆಯ ಪ್ರೇಮ್ ನಗರದಲ್ಲಿರುವ ವಿಮಲ್ ಕುಮಾರ್ ಯಾದವ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಣಿಗಂಜ್ ಜಿಲ್ಲೆಯ ನಿವಾಸಿಯಾಗಿರುವ ವಿಮಲ್ ಕುಮಾರ್ ಅವರು ಅರಾರಿಯಾದಲ್ಲಿ ವಾಸವಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ವಿಮಲ್ ಅವರನ್ನು ಮೊದಲು ಮನೆಯಿಂದ ಹೊರಗೆ ಕರೆದಿದ್ದಾರೆ. ಅವರು ಹೊರಗೆ ಬರದಿದ್ದಾಗ ಮನೆಗೆ ನುಗ್ಗಿ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ವಿಮಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಮಲ್ ಅವರಿಗೆ 15 ವರ್ಷದ ಪುತ್ರ ಮತ್ತು 13 ವರ್ಷದ ಪುತ್ರಿಯಿದ್ದಾಳೆ.
ಈ ಸುದ್ದಿ ಓದಿದ್ದೀರಾ? ವಿದೇಶಿ ವೈದ್ಯ ಎಂದು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ 22 ಮಹಿಳೆಯರಿಗೆ 4.5 ಕೋಟಿ ರೂ. ವಂಚನೆ
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಮ್ಮ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಾರಿಯಾ ಸದರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
2019ರಲ್ಲಿ ವಿಮಲ್ ಕುಮಾರ್ ಅವರ ಸಹೋದರನನ್ನೂ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿಮಲ್ ಒಬ್ಬರೇ ಸಾಕ್ಷಿಯಾಗಿದ್ದರು. ಸದ್ಯ ವಿಮಲ್ ಕುಮಾರ್ ಹತ್ಯೆಗೆ ಇದೇ ಕಾರಣ ಎನ್ನಲಾಗುತ್ತಿದೆ. ತನಿಖೆಯ ನಂತರವಷ್ಟೇ ಕೊಲೆಯ ಹಿಂದಿನ ನಿಜವಾದ ಕಾರಣ ಬಯಲಾಗಲಿದೆ ಎನ್ನುತ್ತಿದ್ದಾರೆ ಪೊಲೀಸರು.





