ದೆಹಲಿಯಲ್ಲಿ ನಡೆಯಲಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ–2026’ರಲ್ಲಿ ಮೈಕ್ರೋಸಾಫ್ಟ್ ಸಹ–ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪಾಲ್ಗೊಳ್ಳುವುದು ಖಚಿತವಾಗಿದೆ. ಅವರು ಶೃಂಗಸಭೆಗೆ ಗೈರಾಗಲಿದ್ದಾರೆ ಎಂಬ ಊಹಾಪೋಹಗಳನ್ನು ಗೇಟ್ಸ್ ಫೌಂಡೇಶನ್‌ನ ವಕ್ತಾರರು ಮಂಗಳವಾರ ತಳ್ಳಿಹಾಕಿದ್ದು, ಗೇಟ್ಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಗದಿಯಂತೆ ತಮ್ಮ ಪ್ರಧಾನ ಭಾಷಣವನ್ನು ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ, ಶೃಂಗಸಭೆಯ ಆನ್‌ಲೈನ್ ಪಟ್ಟಿಯಿಂದ ಗೇಟ್ಸ್ ಅವರ ಹೆಸರು ನಾಪತ್ತೆಯಾಗಿದ್ದರಿಂದ ಅವರು ಕಾರ್ಯಕ್ರಮಕ್ಕೆ ಗೈರಾಗಬಹುದು ಎಂದು ಮೂಲಗಳು ತಿಳಿಸಿದ್ದವು. ಇದು ತೀವ್ರ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ, ಈ ಎಲ್ಲ ವರದಿಗಳನ್ನು ನಿರಾಕರಿಸಿರುವ ವಕ್ತಾರರು, “ಗೇಟ್ಸ್ ಫೌಂಡೇಶನ್‌ನ ಅಧ್ಯಕ್ಷರಾದ ಬಿಲ್ ಗೇಟ್ಸ್ ಅವರು ಎಐ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ” ಎಂದು ಅಧಿಕೃತವಾಗಿ ಘೋಷಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಫೆಬ್ರುವರಿ 19 ಮತ್ತು 20ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಈ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಆಡಳಿತ, ಜಾಗತಿಕ ಸಹಕಾರ ಮತ್ತು ಆವಿಷ್ಕಾರದ ಕುರಿತು ನಡೆಯುವ ಈ ಮಹತ್ವದ ಸಮಾವೇಶದಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳ ನೀತಿ ನಿರೂಪಕರು ಭಾಗವಹಿಸುತ್ತಿದ್ದಾರೆ. ಆಲ್ಫಾಬೆಟ್‌ನ ಸುಂದರ್ ಪಿಚೈ ಮತ್ತು ಓಪನ್‌ಎಐನ ಸ್ಯಾಮ್ ಆಲ್ಟ್‌ಮನ್ ಅವರಂತಹ ಜಾಗತಿಕ ತಂತ್ರಜ್ಞಾನ ದಿಗ್ಗಜರು ಕೂಡ ಪಾಲ್ಗೊಳ್ಳಲಿದ್ದಾರೆ.
ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ. ಈ ಹಿಂದೆಯೇ ಗೇಟ್ಸ್ ಅವರು ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳನ್ನು “ಸಂಪೂರ್ಣ ಅಸಂಬದ್ಧ ಮತ್ತು ಸುಳ್ಳು” ಎಂದು ತಳ್ಳಿಹಾಕಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.





