ಅಸ್ಸಾಂನಲ್ಲಿರುವ ಬಿಜೆಪಿ ವಾಸ್ತವವಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ, ಕೇಸರಿ ಪಕ್ಷದ ಲೇಬಲ್ ಹೊಂದಿರುವ ಕಾಂಗ್ರೆಸ್ ಆಗಿದೆ ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆ ಮಾಜುಲಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. “ಮುಂಬರುವ ವಿಧಾನಸಭಾ ಚುನಾವಣೆಯು ಮಾಜಿ ಮುಖ್ಯಮಂತ್ರಿ ದಿವಂಗತ ತರುಣ್ ಗೊಗೊಯ್ ನೇತೃತ್ವದ ಕಾಂಗ್ರೆಸ್ ಮತ್ತು ‘ಶರ್ಮಾ ನೇತೃತ್ವದ ಕಾಂಗ್ರೆಸ್’ (ಬಿಜೆಪಿ) ನಡುವಿನ ಸ್ಪರ್ಧೆಯಾಗಲಿದೆ” ಎಂದು ಹೇಳಿದ್ದಾರೆ.
ತರುಣ್ ಗೊಗೊಯ್ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ 2015ರಲ್ಲಿ ಶರ್ಮಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ತಮ್ಮೊಂದಿಗೆ ಅನೇಕ ಆಪ್ತರನ್ನು ಕರೆದೊಯ್ದಿದ್ದರು. ಇತ್ತೀಚೆಗೆ ಲೋಕಸಭಾ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಮತ್ತು ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿಯಲ್ಲಿರುವ ಪ್ರಬಲ ನಾಯಕರೆದಲ್ಲರೂ ಕಾಂಗ್ರೆಸ್‌ನವರೇ ಆಗಿದ್ದಾರೆ. ಆದ್ದರಿಂಲೇ, ಗೊಗೊಯ್ ಅವರು ಬಿಜೆಪಿಯಲ್ಲಿ ಲೇವಡಿ ಮಾಡಿದ್ದಾರೆ.
“ನಮ್ಮ ಮುಂದೆ ನಿಂತಿರುವುದು ಕೇವಲ ಬಿಜೆಪಿ ಟ್ಯಾಗ್ ಹೊತ್ತಿರುವ ಶರ್ಮಾ ನೇತೃತ್ವದ ಕಾಂಗ್ರೆಸ್. ತರುಣ್ ಗೊಗೊಯ್ ಅವರ ಅವಧಿಯಲ್ಲಿ ತಪ್ಪು ಮಾಡಿದ ನಾಯಕರು ಈಗ ಬಿಜೆಪಿಯಲ್ಲಿದ್ದಾರೆ. ಈಗ ಅವರೆಲ್ಲರೂ ಬಿಜೆಪಿಯಲ್ಲಿದ್ದುಕೊಂಡು ತಮ್ಮ ಮತ್ತು ತಮ್ಮ ಕುಟುಂಬದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಗೊಗೊಯ್ ಆರೋಪಿಸಿದ್ದಾರೆ.
“ನಾವು ತರುಣ್ ಗೊಗೊಯ್ ಅವರ ಆದರ್ಶಗಳಿಂದ ಪ್ರೇರಿತವಾದ ಕಾಂಗ್ರೆಸ್ಅನ್ನು ಪ್ರತಿನಿಧಿಸುತ್ತಿದ್ದೇವೆ. ಅಸ್ಸಾಂನ ಜನತೆ ಶರ್ಮಾ ನೇತೃತ್ವದ ಕಾಂಗ್ರೆಸ್ ಬೇಕೇ ಅಥವಾ ತರುಣ್ ಗೊಗೊಯ್ ಅವರ ಆದರ್ಶಗಳನ್ನು ಹೊಂದಿರುವ ಕಾಂಗ್ರೆಸ್ ಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್-ಕತಾರ್ ಅನಿಲ ಘಟಕಗಳಿಗೆ ಹತ್ತಿದ ಕಿಚ್ಚು: ಭಾರತಕ್ಕೂ ತಟ್ಟಲಿದೆಯಾ ಬಿಸಿ?
“ಈ ಚುನಾವಣೆಯು ಒಂದು ಪಕ್ಷವಾಗಿ ಬಿಜೆಪಿಯೊಂದಿಗಿನ ಹೋರಾಟವಲ್ಲ, ಬದಲಾಗಿ ಶರ್ಮಾ ನೇತೃತ್ವದ ‘ಹಳೆಯ ಕಾಂಗ್ರೆಸ್’ ಮತ್ತು ತರುಣ್ ಗೊಗೊಯ್ ಅವರಿಂದ ಪ್ರೇರಿತವಾದ ‘ಹೊಸ ಕಾಂಗ್ರೆಸ್’ ನಡುವಿನ ಸ್ಪರ್ಧೆಯಾಗಿದೆ. ಈ ಬಾರಿ ನಾವು ಹೊಸ ಮುಖಗಳನ್ನು ಕಣಕ್ಕಿಳಿಸುತ್ತಿದ್ದೇವೆ. ವಿರೋಧ ಪಕ್ಷಗಳ ನಡುವೆ ಒಗ್ಗಟ್ಟಿದೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವ ಆಶಾವಾದವನ್ನು ಹೆಚ್ಚಿಸಿದೆ” ಎಂದು ಅವರು ಹೇಳಿದ್ದಾರೆ.
ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ತ್ಯಾಗ ಮತ್ತು ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಮೈತ್ರಿಕೂಟವು ಬಲಗೊಂಡಿದ್ದು, ರಾಜ್ಯದಲ್ಲಿ ಹೊಸ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್, ರೈಜೋರ್ ದಳ, ಅಸ್ಸಾಂ ಜಾತೀಯ ಪರಿಷದ್ (AJP), ಸಿಪಿಐ(ಎಂ), ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ (APHLC) ಮತ್ತು ಸಿಪಿಐ(ಎಂಎಲ್) ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.
ಕಾಂಗ್ರೆಸ್ ತನ್ನ ಸಂಪೂರ್ಣ 94 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ, ರೈಜೋರ್ ದಳ 13, ಎಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಸಿಪಿಐ(ಎಂ) ಮತ್ತು ಎಪಿಹೆಚ್‌ಎಲ್‌ಸಿ ತಲಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
126 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.




