ಮಧ್ಯ ಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ನರೇಂದ್ರ ಶಿವಾಜಿ ಪಟೇಲ್ ಪುತ್ರ ಅಭಿಜ್ಞಾನ್ ಓರ್ವ ಪತ್ರಕರ್ತ ಹಾಗೂ ಮೂವರು ಸ್ಥಳೀಯರಿಗೆ ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದವರಲ್ಲಿ ಒಬ್ಬರು ಮಹಿಳೆಯರು ಸೇರಿದ್ದಾರೆ.
ಘಟನೆಯು ಭೋಪಾಲದ ಪ್ರಮುಖ ಪ್ರದೇಶದಲ್ಲಿ ನಡೆದಿದ್ದು, 30 ವರ್ಷದ ಸಚಿವ ನರೇಂದ್ರ ಶಿವಾಜಿ ಪಟೇಲ್ ಅವರ ಪುತ್ರ ಅಭಿಜ್ಞಾನ್ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಅಲ್ಲೂ ಕೂಡ ಹಲ್ಲೆ ನಡೆಸಿದ್ದಾನೆ.
ಸಚಿವರ ಪುತ್ರನಿಂದ ಹಲ್ಲೆಗೊಳಗಾದ ಪತ್ರಕರ್ತ ಹಾಗೂ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡದ ಕಾರಣಕ್ಕಾಗಿ ಠಾಣೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಅಮಾನತ್ತಾದ ನಂತರ ಠಾಣೆಗೆ ಮಧ್ಯರಾತ್ರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಂದ ಸಚಿವರ ಪುತ್ರ ದಾಂಧಲೆ ನಡೆಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ
ನಿನ್ನೆ(ಮಾ.31) ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ದಂಪತಿ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದಾಗ ಕಾರಿನಲ್ಲಿ ಬಂದ ಒಂದು ಗುಂಪು ಬೈಕ್‌ನಲ್ಲಿ ಇದ್ದ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸುತ್ತಿದ್ದರು. ಇದನ್ನು ರಸ್ತೆಯಲ್ಲಿ ನಿಂತಿದ್ದ ಸ್ಥಳೀಯ ಪತ್ರಕರ್ತ ಕೂಡ ನೊಡಿದ್ದಾನೆ.
ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಮಹಿಳೆ ಪ್ರಶ್ನಿಸಿದಾಗ ಆಕೆಯನ್ನು ಸಚಿವರ ಪುತ್ರ ಮನಬಂದಂತೆ ನಿಂದಿಸಿ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಜೊತೆ ಆಕೆಯ ಪತಿ ಹಾಗೂ ಪ್ರಶ್ನಿಸಿದ ಪತ್ರಕರ್ತನ ಮೇಲೂ ಸಚಿವರ ಪುತ್ರ ಹಲ್ಲೆ ಮಾಡಿದ್ದಾನೆ.
ನಾಲ್ವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನಿಡಲು ಹೋದಾಗ ಅವರನ್ನು ಹಿಂಬಾಲಿಸಿದ ಸಚಿವರ ಪುತ್ರ ಹಾಗೂ ಆತನ ಗುಂಪು ಅಲ್ಲಿಯೂ ಹಲ್ಲೆ ನಡೆಸಿದ್ದಾರೆ. ನಂತರ ಪೊಲೀಸರು ಗುಂಪನ್ನು ಹೊರಗಡೆ ಕಳಿಸಿದರು.
ಘಟನೆಯ ನಂತರ ಪೊಲೀಸರು ಸಚಿವರ ಪುತ್ರ ಅಭಿಜ್ಞಾನ್ ಹಾಗೂ ಆತನ ಸಂಗಡಿಗರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಮಂತ್ರಿಯ ಅಮಾನುಷ ಹಲ್ಲೆಯನ್ನು ಖಂಡಿಸಿರುವ ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪತ್ವಾರಿ, ಮದ್ಯಪಾನ ಮಾಡಿ ಮಂತ್ರಿಯ ಮಗ ಹಲ್ಲೆ ನಡೆಸಿರುವುದು ರಾಜ್ಯದಲ್ಲಿ ಅರಾಜಕತೆ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಒತ್ತಡದಿಂದಾಗಿ ಬಿಜೆಪಿಯ ಮಂತ್ರಿಯ ಪುತ್ರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.





