ಮುಸ್ಲಿಂ ಮಹಿಳೆಯರು ನಮಾಜ್ ಮಾಡಿದ ಸ್ಥಳವನ್ನು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ನೇತೃತ್ವದ ಹಿಂದುತ್ವವಾದಿ ಗುಂಪು ಶುದ್ದೀಕರಣದ ಹೆಸರಿನಲ್ಲಿ ಗೋಮೂತ್ರ ಸಿಂಪಡಿಸಿ ತೊಳೆದು ಕೋಮುದ್ವೇಷದ ವಿಕೃತಿ ಮರೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಬಳಿಯ ಶನಿವಾರ್ ವಾಡ್ ಕೋಟೆಯಲ್ಲಿ ಘಟನೆ ನಡೆದಿದೆ. ಬಿಜೆಪಿ ಸಂಸದೆ ಮತ್ತು ಆಕೆಯ ಗುಂಪು ಎಸಗಿದ ಕೃತ್ಯದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜಕೀಯ ವಿವಾದವೂ ಭುಗಿಲೆದ್ದಿದೆ.
ಶನಿವಾರ್ ವಾಡ್ ಕೋಟೆಯಲ್ಲಿ ಮುಸ್ಲಿಂ ಮಹಿಳೆಯರು ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೇ, ಸ್ಥಳಕ್ಕೆ ಬಂದಿದ ಬಿಜೆಪಿ ಸಂಸದೆ ಮೇಧಾ ನೇತೃತ್ವದ ಗುಂಪು ಮಹಿಳೆಯರು ನಮಾಜ್ ಮಾಡಿದ್ದ ಜಾಗವನ್ನು ಗೋಮೂತ್ರದಿಂದ ಸ್ವಚ್ಚಗೊಳಿಸಿದ್ದಾರೆ. ಅಲ್ಲದೆ, ಅದೇ ಜಾಗದಲ್ಲಿ ಶಿವವಂದನೆ ಮಾಡಿದ್ದಾರೆ.
ಮರಾಠಾ ಸಾಮ್ರಾಜ್ಯದ ಸಂಕೇತವಾಗಿರುವ ಐತಿಹಾಸಿಕ ಪುಣೆ ಕೋಟೆಯಲ್ಲಿ ನಡೆದ ಘಟನೆ ಪುಣೆಯ ಪ್ರತಿಯೊಬ್ಬ ಹಿಂದುವಿಗೂ ಆಕ್ರೋಶದ ವಿಷಯವಾಗಿದೆ ಎಂದು ಮೇಧಾ ಕುಲಕರ್ಣಿ ವಾದಿಸಿದ್ದಾರೆ.
“ಕೋಟೆಯಲ್ಲಿ ನಮಾಜ್ ಮಾಡಿದ್ದು ದುರದೃಷ್ಟಕರ. ಶನಿವಾರ್ ವಾಡಾ ಸ್ಥಳವು ನಮಾಜ್ ಮಾಡಲು ಸೂಕ್ತ ಸ್ಥಳವಲ್ಲ. ಆಡಳಿತವು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾವು ಶನಿವಾರ್ ವಾಡಾದಲ್ಲಿ ಶಿವವಂದನೆ ಮಾಡಿ ಸ್ಥಳವನ್ನು ಶುದ್ಧೀಕರಿಸಿದ್ದೇವೆ. ನಾವು ಕೇಸರಿ ಧ್ವಜವನ್ನು ಹಾರಿಸಲು ಪ್ರಯತ್ನಿಸಿದೆವು. ಆದರೆ ಅಧಿಕಾರಿಗಳು ನಮ್ಮನ್ನು ತಡೆದರು. ಈ ಜನರು ಯಾವುದೇ ಸ್ಥಳದಲ್ಲಿ ನಮಾಜ್ ಮಾಡಿ ನಂತರ ಅದನ್ನು ವಕ್ಫ್ ಆಸ್ತಿಗೆ ಸೇರಿಸುತ್ತಾರೆ. ಹಿಂದು ಸಮುದಾಯವು ಜಾಗರೂಕವಾಗಿದೆ” ಎಂದು ಮೇಧಾ ಹೇಳಿದ್ದಾರೆ.
शनिवार वाड्यात नमाज पठण चालणार नाही, हिंदू समाज आता जागृत झाला आहे ! 🚩🚩
— Dr. Medha Kulkarni (@Medha_kulkarni) October 19, 2025
🚩चलो शनिवार वाडा! 🚩
रविवार, 19 ऑक्टोबर 2025
📍 शनिवार वाडा, कसबा पोलीस चौकीसमोर
🕓 सायंकाळी 4 वाजता
—
🔥 पुण्याचे वैभव – शनिवार वाडा
ऐतिहासिक वारसा स्थळ की गैर हिंदू प्रार्थना स्थळ?
सारसबाग येथे… pic.twitter.com/EObcXMZ6Rt
ಬಿಜೆಪಿ ಸಂಸದೆ ಮಾಡಿದ ಶುದ್ದೀಕರಣ ಕೃತ್ಯವನನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಎನ್‌ಸಿಪಿ (ಶರದ್ ಬಣ) ವಕ್ತಾರೆ ರೂಪಾಲಿ ಪಾಟೀಲ್ ಥೋಂಬ್ರೆ, “ಬಿಜೆಪಿ ಸಂಸದೆ ಮತ್ತು ಆಕೆಯ ಗುಂಪು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸಿದೆ. ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು. ಪುಣೆಯಲ್ಲಿ ಎರಡೂ ಸಮುದಾಯಗಳು ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಈ ಸಾಮರಸ್ಯವನ್ನು ಕದಡಲು ಬಿಜೆಪಿಗರು ಹಿಂದು ಮತ್ತು ಮುಸ್ಲಿಂ ಎಂಬ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
AIMIM ವಕ್ತಾರ ವಾರಿಸ್ ಪಠಾಣ್, “ಬಿಜೆಪಿ ಭಾರತದ ಜಾತ್ಯತೀತತೆ ಮತ್ತು ಬಹುತ್ವವನ್ನು ನಾಶಪಡಿಸುತ್ತಿದೆ. ದ್ವೇಷವನ್ನು ಮಾತ್ರ ಹರಡುತ್ತಿದೆ. ಜುಮ್ಮಾದಲ್ಲಿ ಒಂದೇ ಸ್ಥಳದಲ್ಲಿ 3-4 ಮುಸ್ಲಿಂ ಮಹಿಳೆಯರು ನಮಾಜ್ ಮಾಡಿದರೆ, ಅದರಿಂದ ಯಾವ ತೊಂದರೆ ಉಂಟಾಯಿತು? ರೈಲುಗಳಲ್ಲಿ ಅಥವಾ ವಿಮಾನ ನಿಲ್ದಾಣಗಳಲ್ಲಿ ಹಿಂದುಗಳು ಗರ್ಬಾ ಮಾಡುವಾಗ ನಾವು ಎಂದಿಗೂ ಆಕ್ಷೇಪಿಸುವುದಿಲ್ಲ. ಪುರಾತನ ಸ್ಮಾರಕಗಳು ಎಲ್ಲರಿಗೂ ಸೇರಿದ ಆಸ್ತಿ. 3 ನಿಮಿಷದ ನಮಾಜ್ಅನ್ನು ನಿಮಗೆ ಸಹಿಸಲಾಗುತ್ತಿಲ್ಲ. ಆದರೆ, ಸಂವಿಧಾನದ 25ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತದೆ. ನೀವು ಎಷ್ಟು ದ್ವೇಷವನ್ನು ಹರಡುತ್ತೀರಿ? ದ್ವೇಷವನ್ನು ಹೊಂದಿರುವ ನಿಮ್ಮ ಮನಸ್ಸನ್ನು ಮೊದಲು ನೀವು ಶುದ್ಧೀಕರಿಸಬೇಕು” ಎಂದು ಕಿಡಿಕಾರಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಸರ್ವೇ (ASI) ಅಧಿಕಾರಿಯೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಕೋಟೆಯಲ್ಲಿ ನಮಾಜ್ ಮಾಡಿದ ಮಹಿಳೆಯರ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಕೋಟೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.




