ಬೃಹನ್ಮುಂಬೈ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರಿತು ತಾವ್ಡೆ, ಶಿವಸೇನೆ ನಾಯಕ ಸಂಜಯ್ ಘಾಡಿ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಖ್ಯಾಬಲದ ಕೊರತೆಯ ಹಿನ್ನಲೆಯಲ್ಲಿ ಶಿವಸೇನೆ ಯುಬಿಟಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ ಬಳಿಕ ಅವಿರೋಧ ಆಯ್ಕೆ ಘೋಷಣೆಯಾಗಿದ್ದು, ಇದರಿಂದಾಗಿ ಏಷ್ಯಾದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲಿನ ಠಾಕ್ರೆ ಕುಟುಂಬದ 25 ವರ್ಷಗಳ ನಿಯಂತ್ರಣ ಕೊನೆಗೊಂಡಂತಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಕ್ಸಲ್ ನಿಗ್ರಹದ ನೆಪದಲ್ಲಿ ಪ್ರಕೃತಿ ಸಂಪತ್ತಿನ ಲೂಟಿಗಿಳಿಯಿತೇ ಸರ್ಕಾರ?
ಘಾಟ್ಕೋಪರ್ ಪಶ್ಚಿಮದಿಂದ ಮೂರು ಅವಧಿಗೆ ಕಾರ್ಪೊರೇಟರ್ ಆಗಿದ್ದ 53 ವರ್ಷದ ತಾವ್ಡೆ, ತಳಮಟ್ಟದ ರಾಜಕೀಯ, ನಾಗರಿಕ ಆಡಳಿತ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಒಂದು ದಶಕಕ್ಕೂ ಹೆಚ್ಚು ಅನುಭವ ಹೊಂದಿದ್ದಾರೆ. ಕಳೆದ ತಿಂಗಳು ಜನವರಿ 15 ರಂದು ನಡೆದ ನಾಗರಿಕ ಚುನಾವಣೆಯಲ್ಲಿ, ತಾವ್ಡೆ 132 ನೇ ವಾರ್ಡ್ನಿಂದ ಗೆಲುವು ಸಾಧಿಸಿದರು. ಈ ಹಿಂದೆ ತಾವ್ಡೆ ಕಾರ್ಪೊರೇಟರ್ ಅಷ್ಟೆ ಅಲ್ಲದೇ, ಮುಂಬೈ ಮಹಾನಗರ ಪಾಲಿಕೆಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳ ಅವಶ್ಯಕತೆ ಇತ್ತು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದೆ, ಮಹಾಯುತಿ ಮೈತ್ರಿಕೂಟ 118 ವಾರ್ಡ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಲ್ಕು ದಶಕಗಳಿಂದ ಬಿಎಂಸಿಯನ್ನು ಆಳಿದ್ದ ಠಾಕ್ರೆ ಬಣವು 65 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ.





