ದೀರ್ಘಕಾಲದ ಅನಿಶ್ಚಿತತೆ ಮತ್ತು ರಾಷ್ಟ್ರಪತಿ ಆಳ್ವಿಕೆಯ ನಂತರ ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಯುವ್ನಮ್ ಖೇಮ್‌ಚಂದ್ ಸಿಂಗ್ (Yumnam Khemchand Singh) ಅವರು ಆಯ್ಕೆಯಾಗಿದ್ದಾರೆ.
ಕಳೆದ ಮೇ 2023ರಿಂದ ಮಣಿಪುರದಲ್ಲಿ ಆರಂಭವಾದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿತ್ತು. ಈ ಹಿನ್ನೆಲೆಯಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯಿಂದಾಗಿ, ಅಂದಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಸರ್ಕಾರ ಪತನಗೊಂಡ ನಂತರ, ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಉಳಿದಿತ್ತು.
ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಸಂವಿಧಾನದ 356ನೇ ವಿಧಿಯನ್ವಯ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿತ್ತು. ಇದೀಗ ನೂತನ ಸಿಎಂ ಆಯ್ಕೆಯೊಂದಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಮೇ 3, 2023 ರಂದು ಮಣಿಪುರದಲ್ಲಿ ಆರಂಭವಾದ ಭೀಕರ ಜನಾಂಗೀಯ ಗಲಭೆಯಲ್ಲಿ ಈವರೆಗೆ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಶಾಂತಿ ಸ್ಥಾಪನೆಗೆ ಕೇಂದ್ರ ಸೇನಾಪಡೆಗಳನ್ನು ನಿಯೋಜಿಸಿದ್ದರೂ, ಪೂರ್ಣ ಪ್ರಮಾಣದ ಸಹಜ ಸ್ಥಿತಿ ಮರಳಿರಲಿಲ್ಲ.
ಸಿಂಗ್‌ಜಮೇ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮತ್ತು ಈ ಹಿಂದೆ ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ಯುವ್ನಮ್ ಖೇಮ್‌ಚಂದ್ ಸಿಂಗ್ ಅವರಿಗೆ ಅಪಾರ ರಾಜಕೀಯ ಅನುಭವವಿದೆ. ಆದರೆ, ಪ್ರಸ್ತುತ ಹರಿದು ಹಂಚಿಹೋಗಿರುವ ಮಣಿಪುರದ ಜನಜೀವನವನ್ನು ಒಂದುಗೂಡಿಸುವುದು, ಸಂಘರ್ಷದಲ್ಲಿರುವ ಸಮುದಾಯಗಳ ನಡುವೆ ಶಾಂತಿ ಮಾತುಕತೆ ನಡೆಸುವುದು ಮತ್ತು ರಾಜ್ಯದ ಆರ್ಥಿಕತೆಯನ್ನು ಸರಿದಾರಿಗೆ ತರುವುದು ಅವರ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.
ರಾಜ್ಯಪಾಲರು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.





