ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್ಯನ್ ಖಾನ್ ನಿರ್ದೇಶನದ ‘ದಿ ಬಾ**ರ್ಡ್ಸ್ ಆಫ್ ಬಾಲಿವುಡ್’ (ಬಾಲಿವುಡ್ ಬಾ**ರ್ಡ್‌ಗಳು) ವೆಬ್ ಸರಣಿಯು ಹಿಂದಿ ಸಿನಿಮಾರಂಗದಲ್ಲಿ ವಿವಾದ ಹುಟ್ಟುಹಾಕಿದೆ. ಸರಣಿಯ ವಿರುದ್ಧ ಐಆರ್‌ಎಸ್ ಅಧಿಕಾರಿ ಮತ್ತು ಮಾಜಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಆಕ್ರೋಶಗೊಂಡಿದ್ದಾರೆ. ಸರಣಿಯನ್ನು ನಿರ್ಮಾಣ ಮಾಡಿರುವ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ನೆಟ್‌ಫ್ಲಿಕ್ಸ್ ಹಾಗೂ ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
‘ಬಾ**ರ್ಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯು ಮಾನನಷ್ಟ ವಿಷಯವನ್ನು ಹೊಂದಿದೆ. ಮಾತ್ರವಲ್ಲದೆ, ‘ಸತ್ಯಮೇವ ಜಯತೆ’ ಎಂಬುದನ್ನು ಹೇಳುವಾಗ ‘ಆಶ್ಲೀಲವಾಗಿ ಸನ್ಹೆ’ ಮಾಡುವುದನ್ನು ಒಳಗೊಂಡಿದೆ ಎಂದು ವಾಂಖೆಡೆ ಆರೋಪಿಸಿದ್ದಾರೆ.
ವಾಂಖೆಡೆ ಅವರು ವೆಬ್ ಸೀರಿಸ್ ತಂಡದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 2 ಕೋಟಿ ರೂ. ಪರಿಹಾರ ಕೋರಿದ್ದಾರೆ. ಜೊತೆಗೆ, ಸರಣಿಯ ಪ್ರಸಾರ ಮತ್ತು ವಿತರಣೆಯನ್ನು ನಿಲ್ಲಿಸುವಂತೆ ಹಾಗೂ ಸರಣಿಯನ್ನು ಮಾನನಷ್ಟಕರವೆಂದು ಅಧಿಕೃತವಾಗಿ ಘೋಷಿಸಲು ಮನವಿ ಮಾಡಿದ್ದಾರೆ.
“ವೆಬ್ ಸರಣಿಯಲ್ಲಿರುವ ವಿಷಯವು ತನ್ನ ವೈಯಕ್ತಿಕ ಖ್ಯಾತಿಯನ್ನು ಹಾನಿಗೊಳಿಸಿದೆ. ಮಾತ್ರವಲ್ಲದೆ, ಮಾದಕವಸ್ತು ಕಾನೂನುಗಳನ್ನು ಜಾರಿಗೊಳಿಸುವ ಕೆಲಸದಲ್ಲಿ ತೊಡಗಿರುವ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಸಹ ಕುಗ್ಗಿಸಿದೆ” ಎಂದು ವಾಂಖೆಡೆ ಆರೋಪಿಸಿದ್ದಾರೆ.
- ಸರಣಿಯನ್ನು ನಿರ್ಮಾಣ ಮಾಡಿರುವ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪತ್ನಿ ಗೌರಿ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’, ಸರಣಿಯ ನಿರ್ದೇಶಕ ಆರ್ಯನ್ ಖಾನ್, ಸರಣಿಯ ಪ್ರಸಾರ ಹಕ್ಕು ಪಡೆದಿರುವ ನೆಟ್‌ಫ್ಲಿಕ್ಸ್ ಹಾಗೂ ಇತರರ ವಿರುದ್ಧ ವಾಂಖೆಡೆ ಪ್ರಕರಣ ದಾಖಲಿಸಿದ್ದಾರೆ.
- ಸರಣಿಯಲ್ಲಿ ‘ಸುಳ್ಳು, ದುರುದ್ದೇಶಪೂರಿತ ಹಾಗೂ ಮಾನನಷ್ಟಕರ’ ಚಿತ್ರಣವಿದೆ. ಸರಣಿಯು ಮಾದಕವಸ್ತು ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಸಂಸ್ಥೆಗಳ ಕುರಿತು ನಕಾರಾತ್ಮಕ ಚಿತ್ರಣವನ್ನು ನೀಡುತ್ತದೆ. ಇದರಿಂದಾಗಿ ಕಾನೂನು ಜಾರಿ ಸಂಸ್ಥೆಗಳ ಮೇಲೆ ಸಾರ್ವಜನಿಕ ವಿಶ್ವಾಸ ಕುಸಿಯುತ್ತದೆ ಎಂದು ವಾಂಖೆಡೆ ವಾದಿಸಿದ್ದಾರೆ.
- ಸರಣಿಯು ರಾಷ್ಟ್ರೀಯ ಲಾಂಛನದ ಭಾಗವಾಗಿರುವ ‘ಸತ್ಯಮೇವ ಜಯತೆ’ಯನ್ನು ಪಠಿಸುವಾಗ ಮಧ್ಯದ ಬೆರಳಿನ ಸನ್ಹೆ ಮಾಡುವುದನ್ನು ತೋರಿಸಿದೆ. ಇದು ‘ರಾಷ್ಟ್ರೀಯ ಲಾಂಛನಗಳಿಗೆ ಅವಮಾನ ತಡೆಗಟ್ಟುವಿಕೆ ಕಾಯ್ದೆ-1971’ಅನ್ನು ಉಲ್ಲಂಘಿಸುತ್ತದೆ. ಅಲ್ಲದೆ, ಅಶ್ಲೀಲ ವಿಷಯದ ಮೂಲಕ ರಾಷ್ಟ್ರೀಯ ಭಾವನೆಯನ್ನು ಕೆರಳಿಸುವುದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ.
- ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡಿರುವ ಕಾರಣಕ್ಕಾಗಿ ವಾಂಖೆಡೆ ಅವರು ಸರಣಿಯ ನಿರ್ಮಾಣ ತಂಡದಿಂದ 2 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ. ಆ ಮೊತ್ತವನ್ನು ಕ್ಯಾನ್ಸರ್ ರೋಗಿಗಳಿಗಾಗಿ ‘ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ’ಗೆ ದೇಣಿಗೆ ನೀಡಲು ಉದ್ದೇಶಿಸಿರುವುದಾಗಿ ಹೇಳಿಕೊಂಡಿದ್ದಾರೆ.




