ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ವಂಚನೆ ಎಂದು ಬ್ಯಾಂಕುಗಳ ಒಕ್ಕೂಟ ಘೋಷಿಸಿದ ಕೆಲವೇ ದಿನಗಳ ನಂತರ ಅನಿಲ್ ಅಂಬಾನಿ ವಿರುದ್ಧ ಬ್ಯಾಂಕ್‌ಗಳ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಎಲ್ಲ ಹಿಂದಿನ ಮತ್ತು ಭವಿಷ್ಯದ ಕ್ರಮಗಳಿಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಜತೆಗೆ ಬ್ಯಾಂಕುಗಳು ಕ್ರಮ ಕೈಗೊಂಡಿರುವ ಆಧಾರವೇ ‘ಸ್ಪಷ್ಟವಾಗಿ ಸಂಶಯಾಸ್ಪದ’ವಾಗಿದೆ. ವಿಚಾರಣೆ ಇಲ್ಲದೆ ಅಂತಹ ಕ್ರಮಗಳನ್ನು ಮುಂದುವರಿಸಲು ಅವಕಾಶ ನೀಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರ ಪೀಠವು ಅಭಿಪ್ರಾಯಿಸಿದೆ.
ಇದನ್ನು ಓದಿದ್ದೀರಾ? ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು
ತಮ್ಮ ಬ್ಯಾಂಕ್ ಖಾತೆಗಳನ್ನು ವಂಚನೆ ಖಾತೆ ಎಂದು ವರ್ಗೀಕರಿಸುವ ಬ್ಯಾಂಕ್‌ಗಳ ನಿರ್ಧಾರವನ್ನು ಪ್ರಶ್ನಿಸಿ ಅಂಬಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಲಿಮಿಟೆಡ್ ಮತ್ತು ಬ್ಯಾಂಕ್ ಆಫ್ ಬರೋಡಾ ಈಗಾಗಲೇ ತೆಗೆದುಕೊಂಡ ಎಲ್ಲ ಕ್ರಮಗಳಿಗೆ ತಡೆ ನೀಡಿದೆ. ಅಂದರೆ ಅಂಬಾನಿಗೆ ನೀಡಲಾದ ಶೋಕಾಸ್ ನೋಟಿಸ್‌ಗಳಿಗೂ ತಡೆ ನೀಡಿದಂತಾಗಿದೆ.
ಬಿಡಿಒ ಇಂಡಿಯಾ ಸಿದ್ಧಪಡಿಸಿದ ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋರ್ಟ್ ಹೇಳಿದೆ. ವಂಚನೆ ವರ್ಗೀಕರಣದಿಂದ ಉಂಟಾಗುವ ಪರಿಣಾಮಗಳು ವಾಸ್ತವಿಕವಾಗಿ ತೀವ್ರವಾಗಿರುತ್ತದೆ. ಖಾತೆಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು, ವರ್ಷಗಳವರೆಗೆ ಬ್ಯಾಂಕ್‌ಗೆ ಸಾಲ ನಿರಾಕರಣೆ ಮಾಡುವುದು, ಕ್ರಿಮಿನಲ್ ಎಫ್‌ಐಆರ್‌ಗಳು, ಖ್ಯಾತಿಗೆ ಹಾನಿ ಉಂಟಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಿಸಿದೆ.
ವಿಚಾರಣೆಗೆ ಅನಿಲ್ ಅಂಬಾನಿ ಸಾಕಷ್ಟು ಬಲವಾದ ವಾದವನ್ನು ಮಂಡಿಸಿದ್ದಾರೆ ಎಂದು ಹೇಳುತ್ತಾ ನ್ಯಾಯಾಲಯವು ಮಧ್ಯಂತರ ರಕ್ಷಣೆಯನ್ನು ನೀಡಿದೆ. ಆದರೆ ವಿಚಾರಣೆ ಮುಂದುವರೆಯಲಿದೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು
ರಿಲಯನ್ಸ್ ಕಮ್ಯುನಿಕೇಷನ್ಸ್ (RCom) ಮತ್ತು ಇತರ ಕಂಪನಿಗಳು ಬ್ಯಾಂಕುಗಳಿಂದ ಪಡೆದ ಸುಮಾರು ₹31,580 ಕೋಟಿ ಸಾಲವನ್ನು ಉದ್ದೇಶಿತ ಉದ್ದೇಶಕ್ಕೆ ಬಳಸದೆ, ಇತರ ಗ್ರೂಪ್ ಕಂಪನಿಗಳಿಗೆ ವರ್ಗಾಯಿಸಿವೆ ಎಂದು ಬ್ಯಾಂಕುಗಳು ಆರೋಪಿಸಿವೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಇಡಿ ಅನಿಲ್ ಅಂಬಾನಿ ಗ್ರೂಪ್‌ಗೆ ಸೇರಿದ ಒಟ್ಟು ₹10,117 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ.
ರಿಲಯನ್ಸ್ ಗ್ರೂಪ್ ಹಣಕಾಸು ಅಕ್ರಮ ನಡೆಸಲು ಅವಕಾಶ ನೀಡಿರುವುದೇ ಸರ್ಕಾರ. ಇದು ಸರ್ಕಾರದ ವೈಫಲ್ಯ ಎಂದು ವಿಪಕ್ಷಗಳು ಆರೋಪಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಿಲ್ ಅಬಾನಿಯನ್ನು “ಕ್ರೋನಿ ಕ್ಯಾಪಿಟಲಿಸ್ಟ್” ಎಂದು ಕರೆದಿದ್ದಾರೆ. ರಫೇಲ್ ಒಪ್ಪಂದ ಸೇರಿದಂತೆ ಹಲವು ಪ್ರಮುಖ ವ್ಯವಹಾರಗಳಲ್ಲಿ ಮೋದಿ ಸರ್ಕಾರ ಅನಿಲ್ ಅಂಬಾನಿಗೆ ಆದ್ಯತೆ ನೀಡಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.





