ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ನೀಡಲಾಗಿದ್ದ ಆದೇಶವನ್ನು ನಿರ್ಲಕ್ಷಿಸಿದ ಮುಂಬೈನ ಅಧಿಕಾರಿಗಳನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ನೀವು ಕೂಡಾ ಇದೇ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದೀರಿ, ನೀವು ಅನ್ಯಲೋಕದಲ್ಲಿ (Alien World) ಇರುವುದಲ್ಲ” ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಸುಮನ್ ಶ್ಯಾಮ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು, ನ್ಯಾಯಾಲಯದ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ ಮತ್ತು ಕ್ಷೀಣಿಸುತ್ತಿರುವ ವಾಯು ಗುಣಮಟ್ಟ ಸೂಚ್ಯಂಕ (AQI) ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳದ ಮುಂಬೈ ಮತ್ತು ನವಿ ಮುಂಬೈ ಎರಡೂ ನಗರ ಆಯುಕ್ತರ ವೇತನವನ್ನು ನಿಲ್ಲಿಸುವುದಾಗಿ ಎಚ್ಚರಿಸಿದೆ.
ಇದನ್ನು ಓದಿದ್ದೀರಾ? ವಾಯುಮಾಲಿನ್ಯ | ದೆಹಲಿಯಲ್ಲ ದೇಶದ ‘ಟಾಪ್ 5’ ಅತಿ ಕಲುಷಿತ ನಗರಗಳಿವು!
2023ರಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಸಂಬಂಧಿಸಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡು ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ನೀಡಿತ್ತು. ಆದರೆ ಆದೇಶ ಪಾಲಿಸದ ಅಧಿಕಾರಿಗಳನ್ನು ಈಗ ತರಾಟೆಗೆ ತೆಗೆದುಕೊಂಡಿದೆ.
ಇನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವಕೀಲ ಎಸ್ ಯು ಕಾಮ್ದಾರ್, “ಹಲವು ನಿರ್ಮಾಣ ಸಂಸ್ಥೆಗಳಿಗೆ ಕೆಲಸ ನಿಲ್ಲಸಲು ನೋಟಿಸ್‌ಗಳನ್ನು ನೀಡಲಾಗಿದೆ. ವಾಯು ಗುಣಮಟ್ಟದ ನಿಗಾ ಅಗತ್ಯವಿರುವ 600 ಸ್ಥಳಗಳಲ್ಲಿ, ಸುಮಾರು 400 ಸ್ಥಳಗಳಲ್ಲಿ ಅದಕ್ಕೆ ಬೇಕಾದ ಅಗತ್ಯ ಸಾಧನಗಳನ್ನು ಸ್ಥಾಪಿಸಲಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಆದರೆ ಈ ಸಮರ್ಥನೆಯನ್ನು ಒಪ್ಪದ ಹೈಕೋರ್ಟ್, “ಈ ಎಲ್ಲಾ ಮಾಲಿನ್ಯ ವಿರೋಧಿ ಕ್ರಮಗಳನ್ನು ನ್ಯಾಯಾಲಯದ ಆದೇಶದ ಬಳಿಕ ತೆಗೆದುಕೊಳ್ಳಲಾಗಿದೆ. ನೀವು ಇಷ್ಟು ವರ್ಷ ಏನು ಮಾಡುತ್ತಿದ್ದೀರಿ? ಪ್ರತಿ ಬಾರಿಯೂ ಪರಿಸ್ಥಿತಿಯನ್ನು ಅವಲೋಕಿಸಲು ನಾವು ಬರಲಾಗದು. ಪುರಸಭೆಯನ್ನು ನಡೆಸುವುದು ನ್ಯಾಯಾಲಯದ ಕೆಲಸವಲ್ಲ” ಎಂದು ಒತ್ತಿ ಹೇಳಿದೆ. ಹಾಗೆಯೇ ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಿದೆ.





