ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬದ ಸಂಭ್ರಮಾಚರಣೆಯ ವೇಳೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಭಾಗಿಯಾದ ಇಬ್ಬರು ಉಗ್ರರ ಪೈಕಿ, ಪ್ರಮುಖ ಆರೋಪಿ ಹೈದರಾಬಾದ್ ಮೂಲದವನು ಎಂಬ ಆಘಾತಕಾರಿ ಸತ್ಯವನ್ನು ತೆಲಂಗಾಣ ಪೊಲೀಸರು ಮಂಗಳವಾರ ಖಚಿತಪಡಿಸಿದ್ದಾರೆ.
ಈ ದಾಳಿಯಲ್ಲಿ 15 ಮಂದಿ ಬಲಿಯಾಗಿದ್ದು, ಪ್ರತಿದಾಳಿಯಲ್ಲಿ ಹತ್ಯೆಯಾದ ಸಾಜಿದ್ ಅಕ್ರಮ್ (50) ಹೈದರಾಬಾದ್‌ನ ಮೆಹದೀಪಟ್ಟಣಂ ನಿವಾಸಿ ಎಂದು ಗುರುತಿಸಲಾಗಿದೆ. ಆತನೊಂದಿಗೆ ದಾಳಿಯಲ್ಲಿ ಭಾಗಿಯಾಗಿ ಗಾಯಗೊಂಡಿರುವ ಆತನ ಪುತ್ರ ನವೀದ್ ಅಕ್ರಮ್ (24), ಆಸ್ಟ್ರೇಲಿಯಾದಲ್ಲಿಯೇ ಜನಿಸಿದ ಆಸ್ಟ್ರೇಲಿಯನ್ ಪ್ರಜೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಯಾರು ಈ ಸಾಜಿದ್?
ಸಾಜಿದ್ ಅಕ್ರಮ್ ಹೈದರಾಬಾದ್‌ನಲ್ಲಿ ಬಿ.ಕಾಂ ಪದವಿ ಪೂರೈಸಿದ್ದ. ಬಳಿಕ ಉದ್ಯೋಗ ನಮಿತ್ತ 1998ರ ನವೆಂಬರ್‌ನಲ್ಲಿ ವಿದ್ಯಾರ್ಥಿ ವೀಸಾದಡಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಅಲ್ಲಿಯೇ ಯುರೋಪಿಯನ್ ಮೂಲದ ಮಹಿಳೆಯನ್ನು ವಿವಾಹವಾಗಿ ಕಾಯಂ ಆಗಿ ನೆಲೆಸಿದ್ದ. ಈತನಿಗೆ ನವೀದ್ ಎಂಬ ಮಗ ಮತ್ತು ಒಬ್ಬ ಮಗಳಿದ್ದಾರೆ. ಸಾಜಿದ್ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ, ಆತನ ಮಕ್ಕಳು ಆಸ್ಟ್ರೇಲಿಯಾದ ಪೌರತ್ವ ಹೊಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ
ಊರಿನ ನಂಟು ಕಡಿದುಕೊಂಡಿದ್ದ
‘ಸಾಜಿದ್ ಕಳೆದ 27 ವರ್ಷಗಳಲ್ಲಿ ಕೇವಲ ಆರು ಬಾರಿ ಮಾತ್ರ ಭಾರತಕ್ಕೆ ಭೇಟಿ ನೀಡಿದ್ದ. ಆಸ್ತಿ ವಿಲೇವಾರಿ ಮತ್ತು ಪೋಷಕರನ್ನು ನೋಡುವ ಸಲುವಾಗಿ ಆತ ಹೈದರಾಬಾದ್‌ಗೆ ಬರುತ್ತಿದ್ದನೇ ಹೊರತು, ಇಲ್ಲಿನ ಸ್ಥಳೀಯರೊಂದಿಗೆ ಅಥವಾ ಸ್ನೇಹಿತರೊಂದಿಗೆ ಹೆಚ್ಚಿನ ಒಡನಾಟ ಹೊಂದಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ ಸಂಪರ್ಕ ಇಲ್ಲ
‘ಆರೋಪಿಗಳಿಬ್ಬರ ಉಗ್ರಗಾಮಿ ಮನಸ್ಥಿತಿಗೆ ಹೈದರಾಬಾದ್ ಅಥವಾ ತೆಲಂಗಾಣದ ಯಾವುದೇ ಸ್ಥಳೀಯ ಪ್ರಭಾವ ಕಾರಣವಲ್ಲ. ಸಾಜಿದ್ ಭಾರತ ಬಿಡುವ ಮುನ್ನ ಆತನ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರಲಿಲ್ಲ. ಕುಟುಂಬಸ್ಥರಿಗೂ ಆತನ ಉಗ್ರ ಚಟುವಟಿಕೆಗಳ ಬಗ್ಗೆ ಮಾಹಿತಿ ಇರಲಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ಯಹೂದಿಗಳ ‘ಹನುಕ್ಕಾ’ ಹಬ್ಬದ ಆಚರಣೆ ನಡೆಯುತ್ತಿದ್ದ ವೇಳೆ ನುಗ್ಗಿದ ತಂದೆ–ಮಗ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.





