ಅಂತರ್ಜಾತಿ ವಿವಾಹ | ಕುಟುಂಬಗಳಿಗೆ ಬಹಿಷ್ಕಾರ: ಬಿಜೆಪಿ ಆಡಳಿತದ ರಾಜ್ಯ ಯಾವ ಕಾಲಮಾನದಲ್ಲಿದೆ?

Date:

ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿಯೂ ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆಯನ್ನು ಜಾರಿಗೊಳಿಸಬಹುದಲ್ಲವೇ? ಸರ್ಕಾರ ಹಿಂಜರಿಯುತ್ತಿರುವುದೇಕೆ? ಬಿಜೆಪಿ ಆಡಳಿತದ ರಾಜ್ಯ ಯಾವ ಕಾಲಮಾನದಲ್ಲಿದೆ? ಕಾಲಮಾನದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವುದಲ್ಲವೇ?

ದೇಶದಲ್ಲಿ ಅಂತರ್ಜಾತಿ ವಿವಾಹ ಪ್ರಮಾಣಗಳು ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಶಿಕ್ಷಣ, ನಗರೀಕರಣ ಮತ್ತು ಸರ್ಕಾರದ ಪ್ರೋತ್ಸಾಹದಾಯಕ ಕ್ರಮಗಳೇ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಅಂತರ್ಜಾತಿ ವಿವಾಹಗಳಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಶೇ.33ರಷ್ಟು ಹೆಚ್ಚಳವಾಗಿದೆ. 2024-25ನೇ ಸಾಲಿನಲ್ಲಿ ಈ ಸಂಖ್ಯೆಯು 5,136ಕ್ಕೆ ತಲುಪಿದೆ. ಆದರೆ ಈ ರೀತಿ ಮದುವೆಯಾದವರಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿರುವ ಹಿನ್ನೆಲೆ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2025’ ಜಾರಿ ಮಾಡಲಾಗಿದೆ. ಕಾಲಮಾನಕ್ಕೆ ತಕ್ಕುದಾಗಿ ಸಾಮಾಜಿಕ ಸುಧಾರಣೆಗಳೂ ಆಗುತ್ತಿದೆ. ಆದರೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಮಾತ್ರ ಕಾಲಮಾನದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವಂತಿದೆ. ಅಂತರ್ಜಾತಿ ವಿವಾಹವಾದರೆ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ ಎಂದು ಗ್ರಾಮ ಪಂಚಾಯತಿಯೇ ಘೋಷಿಸಿದೆ!

ಆರು ತಿಂಗಳ ಅವಧಿಯಲ್ಲಿ ಅಂತರ್ಜಾತಿ ವಿವಾಹ, ಪ್ರೇಮ ವಿವಾಹಗಳು ಅಧಿಕವಾಗಿದೆ. ಇನ್ನು ಮುಂದೆ ಕುಟುಂಬದ ಒಪ್ಪಿಗೆ ಇಲ್ಲದ ಪ್ರೇಮ ವಿವಾಹಗಳು ನಡೆದರೆ, ಅವರ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ ಎಂದು ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಪಂಚೇವಾ ಗ್ರಾಮ ಪಂಚಾಯತಿಯು ಘೋಷಿಸಿದೆ. ಆರ್ಥಿಕ ನಿರ್ಬಂಧ ಹೇರುವುದಾಗಿಯೂ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟಕ್ಕೂ ಮಧ್ಯಪ್ರದೇಶಲ್ಲಿ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ಕಾನೂನುಬಾಹಿರ ಸಾಮಾಜಿಕ ಬಹಿಷ್ಕಾರವನ್ನು ಗ್ರಾಮಪಂಚಾಯತ್‌ಗಳೇ ಜಾರಿ ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ನಡೆದಿದೆ. ಅದು ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಮಾತ್ರವಲ್ಲ ದಲಿತ ವ್ಯಕ್ತಿಯಿಂದ ಪ್ರಸಾದ ಸ್ವೀಕರಿಸಿದ್ದಕ್ಕೆ, ದಲಿತರ ಮನೆಯಲ್ಲಿ ಊಟ ಮಾಡಿದ್ದಕ್ಕೆ – ಹೀಗೆ ಕೆಲ ಜನರು ಅಸ್ಪೃಶ್ಯತೆಯಿಂದ ದೂರ ಬರುವಾಗ ಆಡಳಿತವೇ ಅಸ್ಪೃಶ್ಯತೆಯತ್ತ ನೂಕುತ್ತಿದೆ.

ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ಅಂತರ್ಜಾತಿ ವಿವಾಹವಾಗಿದ್ದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂತರ್ಜಾತಿ ವಿವಾಹ ಮತ್ತು ಪ್ರೇಮ ವಿವಾಹಕ್ಕೆ ಕುಟುಂಬಸ್ಥರು ಒಪ್ಪದ ಕಾರಣ ಕಳೆದ ಆರು ತಿಂಗಳ ಅವಧಿಯಲ್ಲಿ ರತ್ಲಂ ಜಿಲ್ಲೆಯ ಪಂಚೇವಾ ಗ್ರಾಮದಲ್ಲಿ ಒಟ್ಟು ಸುಮಾರು 8 ಜೋಡಿಗಳು ಮನೆ ತೊರೆದು ಹೋಗಿ ಮದುವೆಯಾಗಿದ್ದಾರೆ. ಈ ವಿಚಾರದಲ್ಲಿ ಗ್ರಾಮದ ಹಿರಿಯರು ಮತ್ತು ನಿವಾಸಿಗಳು ಜನವರಿ 23ರಂದು ಗ್ರಾಮ ಪಂಚಾಯತ್ ಸಭೆ ಸೇರಿ ಈ ಜೋಡಿಗೆ ಮತ್ತು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಘೋಷಿಸಿದೆ. ಕ್ಷೌರಿಕರು, ಪುರೋಹಿತರು ಈ ಕುಟುಂಬಗಳಿಗೆ ಸೇವೆ ನೀಡಬಾರದು, ಹಾಲು ಅಥವಾ ಯಾವುದೇ ದಿನಸಿ ವಸ್ತುಗಳನ್ನು ಕೊಡಬಾರದು, ಕೃಷಿ ಭೂಮಿಯನ್ನು ಗುತ್ತಿಗೆಗೆ ನೀಡಬಾರದು ಅಥವಾ ಪಡೆಯಬಾರದು, ಮದುವೆ ಅಥವಾ ಯಾವುದೇ ಧಾರ್ಮಿಕ ಸಮಾರಂಭಗಳಿಗೆ ಆಹ್ವಾನಿಸಬಾರದು ಎಂದು ಹೇಳಿದ್ದಾರೆ. ಸದ್ಯ ಈ ವಿಚಾರದಲ್ಲಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ, ನಿರ್ಧಾರವನ್ನು ಕಾನೂನುಬಾಹಿರ ಎಂದಿದ್ದಾರೆ.

2025ರಲ್ಲಿಯೂ ಮಧ್ಯಪ್ರದೇಶದಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ. ಬುಂದೇಲ್‌ಖಂಡ್ ಮತ್ತು ಮಾಲ್ವಾ ಪ್ರಾಂತ್ಯಗಳಲ್ಲಿ ಅಧಿಕವಾಗಿ ಬುಡಕಟ್ಟು ಮತ್ತು ದಲಿತ ಸಮುದಾಯದ ಯುವಕರು ಮೇಲ್ವರ್ಗದ ಯುವತಿಯರನ್ನು ವಿವಾಹವಾದಾಗ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಘಟನೆಗಳು ನಡೆದಿವೆ. ಯುವತಿ ಬೇರೆ ಜಾತಿಯ ಯುವಕನನ್ನು ಮದುವೆಯಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿದ ಘಟನೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಗರ್ರಾ ಗ್ರಾಮದಲ್ಲಿ ನಡೆದಿತ್ತು. ಸಮುದಾಯಕ್ಕೆ ಮರಳಿ ಸೇರಬೇಕಾದರೆ 31,000 ರೂ. ನಗದು ಮತ್ತು ಒಂದು ಕುರಿಯನ್ನೂ ದಂಡವಾಗಿ ವಿಧಿಸಲಾಗಿತ್ತು. ವಿವಾಹದಲ್ಲಿ ಭಾಗಿಯಾದವರಿಗೆ ತಲಾ 11 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿತ್ತು. ಇದಾಗುತ್ತಿದ್ದಂತೆ ಕುಟುಂಬ ದಂಡ ತೆರಲು ನಿರಾಕರಿಸಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿತ್ತು. ಕೊನೆಗೆ ಸಾಮಾಜಿಕ ಕಾರ್ಯಕರ್ತೆ ಫಿರೋಜಾ ಖಾನ್ ಮಧ್ಯಸ್ಥಿಕೆಯಿಂದ ಒಪ್ಪಂದ ನಡೆದಿತ್ತು.

ಹಾಗೆಯೆ ಬೈತೂಲ್ ಜಿಲ್ಲೆ, ಭಯಾವಾಡಿ ಗ್ರಾಮದಲ್ಲಿ ನಾಲ್ಕಾರು ಜೋಡಿಗಳು ಅಂತರ್ಜಾತಿ ಪ್ರೇಮ ವಿವಾಹ ಮಾಡಿಕೊಂಡ ಕಾರಣ ಗ್ರಾಮದ ಹಿರಿಯರು ಜಾತಿ ಪಂಚಾಯತ್ ನಡೆಸಿ ಸಾಮಾಜಿಕ ಬಹಿಷ್ಕಾರ ಹೇರಿದ್ದರು. ಈ ಜೋಡಿಯ ಕುಟುಂಬಗಳನ್ನು ಗ್ರಾಮದ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹೊರಗಿಡಲಾಗಿತ್ತು. 30,000 ರಿಂದ 2 ಲಕ್ಷ ರೂಪಾಯಿವರೆಗೆ ದಂಡವನ್ನೂ ವಿಧಿಸಲಾಗಿತ್ತು. ಕೊನೆಗೆ ಅಂತರ್ಜಾತಿ ಪ್ರೇಮ ವಿವಾಹವಾದ ಜೋಡಿಗಳು ಪೊಲೀಸರಿಗೆ ದೂರು ನೀಡಿದ್ದರು.

ಇನ್ನು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಇಲ್ಲಿ ಅಂತರ್ಜಾತಿ ಮಾತ್ರವಲ್ಲ ಅಂತರ್ಧರ್ಮೀಯ ವಿವಾಹಗಳು ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಿವೆ. 2025ರ ಜೂನ್‌ನಲ್ಲಿ ಝಾನ್ಸಿ ಜಿಲ್ಲೆಯ ಬಚೇಡಾ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಕುಟುಂಬಕ್ಕೆ ಗ್ರಾಮ ಪಂಚಾಯತ್ 20 ಲಕ್ಷ ರೂಪಾಯಿ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ಹಾಕಿತ್ತು. ಹಾಗೆಯೇ ಬಹಿಷ್ಕಾರಕ್ಕೊಳಗಾದ ಕುಟುಂಬದೊಂದಿಗೆ ಮಾತನಾಡುವ ಯಾವುದೇ ಗ್ರಾಮಸ್ಥರಿಗೆ 50,000 ರೂಪಾಯಿ ದಂಡ ವಿಧಿಸುವುದಾಗಿ ಪಂಚಾಯತ್ ಆದೇಶಿಸಿತ್ತು. ಕುಟುಂಬ ದೂರು ನೀಡಿದ್ದರೂ ಪೊಲೀಸರು ಮಾತ್ರ ದೂರು ದಾಖಲಿಸಿರಲಿಲ್ಲ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಧ್ಯಪ್ರವೇಶದ ಬಳಿಕ ಎಫ್‌ಐಆರ್ ದಾಖಲಿಸಿದ್ದರು.

ಇದನ್ನು ಓದಿದ್ದೀರಾ? ಪ್ರೇಮ ವಿವಾಹ: ಕುಟುಂಬಗಳಿಗೆ ಬಹಿಷ್ಕಾರ ಹಾಕುವುದಾಗಿ ಗ್ರಾಮ ಪಂಚಾಯತಿ ಬೆದರಿಕೆ

ಗುಜರಾತ್‌ನಲ್ಲಿ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ‘ಖಾಪ್’ ಮಾದರಿಯ ಪಂಚಾಯತ್‌ಗಳು ಅಘೋಷಿತವಾಗಿ ಕಾರ್ಯನಿರ್ವಹಿಸುತ್ತವೆ. ಈ ಪಂಚಾಯತ್‌ಗಳು ಅಂತರ್ಜಾತಿ ವಿವಾಹವಾದ ಕುಟುಂಬಗಳಿಗೆ ₹50,000 ದಿಂದ ₹5 ಲಕ್ಷದವರೆಗೆ ದಂಡ ವಿಧಿಸುವ ಅಥವಾ ಕುಟುಂಬವನ್ನು ಬಹಿಷ್ಕರಿಸುವ ಕಾರ್ಯವನ್ನು ಮಾಡುತ್ತಿದೆ. ಹರಿಯಾಣದಲ್ಲಿಯೂ ಖಾಪ್ ಪಂಚಾಯತ್ ಸಾಮಾಜಿಕ ಬಹಿಷ್ಕಾರ ಹಾಕುತ್ತಿದೆ.

ಆದರೆ ಇದು ಬರೀ ಸಾಮಾಜಿಕ ಬಹಿಷ್ಕಾರಕ್ಕೆ ಸೀಮಿತವಾಗಿಲ್ಲ. ಮರ್ಯಾದೆ ಹತ್ಯೆಯೂ ನಡೆಯುತ್ತಿದೆ. ಅಂತರ್ಜಾತಿ ಅಥವಾ ಅಂತರ್ಧರ್ಮೀಯ ವಿವಾಹವಾದ ಕಾರಣಕ್ಕೆ ಆ ಜೋಡಿಯನ್ನು ಕೊಲ್ಲುವ ಘಟನೆಗಳು ಹೆಚ್ಚು ವರದಿಯಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮತ್ತು ಇತ್ತೀಚಿನ ವರದಿಗಳ ಪ್ರಕಾರ (2025-26) ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಈ ಮರ್ಯಾದೆ ಹತ್ಯೆಗಳು ನಡೆಯುತ್ತಿದೆ. ಈ ಪೈಕಿ ಬಹುತೇಕ ರಾಜ್ಯಗಳು ಅಭಿವೃದ್ಧಿ ಕೂಗು ಹಾಕುವ ಬಿಜೆಪಿ ಆಡಳಿತವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲೂ ಇಂತಹ ಘಟನೆಗಳು ವರದಿಯಾಗುತ್ತಿದೆ. ಅಧಿಕೃತವಾಗಿ NCRB ದಾಖಲೆಗಳಲ್ಲಿ ವರ್ಷಕ್ಕೆ ಸರಾಸರಿ 25 ರಿಂದ 50 ಪ್ರಕರಣಗಳು ಮಾತ್ರ ‘ಮರ್ಯಾದೆ ಹತ್ಯೆ’ ಎಂದು ದಾಖಲಾಗುತ್ತವೆ. ಆದರೆ ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ 1,000ಕ್ಕೂ ಹೆಚ್ಚು ‘ಮರ್ಯಾದೆ ಹತ್ಯೆ’ ನಡೆಯುತ್ತವೆ. ಆದರೆ ಅದನ್ನು ‘ಆತ್ಮಹತ್ಯೆ’ ಅಥವಾ ‘ಅಪಘಾತ’ ಎಂದು ಹೇಳಿ ಮುಚ್ಚಿಹಾಕಲಾಗುತ್ತಿದೆ.

ಅದರಲ್ಲೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಇಂತಹ ಪ್ರಕರಣಗಳು ಅಧಿಕವಾಗಿದೆ ಎಂದು ವರದಿಗಳು ಹೇಳುತ್ತವೆ. ಹಾಗಿದ್ದಾಗ ದೇಶವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸಾಮಾಜಿಕವಾಗಿ ಅಭಿವೃದ್ಧಿ ಮಾಡುವುದು ಯಾವಾಗ ಎಂಬ ಪ್ರಶ್ನೆ ನೆಟ್ಟಿಗರದ್ದು. ಕರ್ನಾಟಕದಲ್ಲಿ ಸಾಮಾಹಿಕ ಬಹಿಷ್ಕಾರ ಪ್ರಕರಣಗಳು ಕಂಡುಬರುತ್ತಿದ್ದಂತೆ ಸರ್ಕಾರ ‘ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆ’ ಜಾರಿ ಮಾಡಿದೆ. ಖ್ಯಾತ ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಅವರ ಹೋರಾಟದ ಫಲವಾಗಿ ಅವರ ಹತ್ಯೆಯ ನಂತರ ಮಹಾರಾಷ್ಟ್ರದಲ್ಲಿ 2016ರಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರವೇ ‘ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆ’ಯನ್ನು ಜಾರಿಗೆ ತಂದಿದೆ. ಹಾಗಿರುವಾಗ ಇತರೆ ರಾಜ್ಯಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ಕಾಯ್ದೆ ಜಾರಿಗೆ ತರಲು ಸರ್ಕಾರ ಹಿಂಜರಿಯುವುದೇಕೆ? ಬಿಜೆಪಿ ಆಡಳಿತದ ರಾಜ್ಯ ಯಾವ ಕಾಲಮಾನದಲ್ಲಿದೆ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...