ಮೊಬೈಲ್ ತಯಾರಕರು ಫೋನ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಅನ್ನು ಕಡ್ಡಾಯವಾಗಿ ಪೂರ್ವಾನ್ವಯಿತಗೊಳಿಸಬೇಕು ಎಂಬ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ. ಗೌಪ್ಯತೆ ಆತಂಕ ಮತ್ತು ವ್ಯಾಪಕ ಟೀಕೆಗಳ ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಲೋಕಸಭೆಯಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಜನರ ಸಲಹೆ-ಅಭಿಪ್ರಾಯಗಳ ಆಧಾರದ ಮೇಲೆ ಸಂಚಾರ್ ಸಾಥಿ ವೇದಿಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸಂಸತ್ತಿಗೆ ತಿಳಿಸಿದರು.
“ಸಂಚಾರ್ ಸಾಥಿ ಆ್ಯಪ್ ಮೂಲಕ ಗೂಢಚಾರಿಕೆ ಸಾಧ್ಯವೇ ಇಲ್ಲ, ಇನ್ನು ಮುಂದೆಯೂ ಎಂದಿಗೂ ಸಾಧ್ಯವಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ ಸಚಿವರು, ಈ ಆ್ಯಪ್ ಬಳಕೆದಾರರ ನೋಂದಣಿ ಇಲ್ಲದೆ ಕೆಲಸ ಮಾಡುವುದಿಲ್ಲ ಹಾಗೂ ಪ್ರತಿಯೊಬ್ಬ ಪ್ರಜೆಗೂ ಅದನ್ನು ಬಳಸಬೇಕೆ ಅಥವಾ ಯಾವಾಗ ಬೇಕಾದರೂ ಅಳಿಸಿಹಾಕಬೇಕೆ ಎಂಬ ಪೂರ್ಣ ಆಯ್ಕೆಯಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ಸಂಚಾರ್ ಸಾಥಿ ಯೋಜನೆಯ ಏಕೈಕ ಉದ್ದೇಶ ದೇಶದ ಪ್ರತಿಯೊಬ್ಬ ಮೊಬೈಲ್ ಬಳಕೆದಾರನನ್ನು ರಕ್ಷಿಸುವುದು ಎಂದು ಒತ್ತಿ ಹೇಳಿದ ಸಿಂಧಿಯಾ ಅವರು, ಪ್ರಜಾಪ್ರಭುತ್ವದಲ್ಲಿ ಅಂತಿಮ ಅಧಿಕಾರ ಪ್ರಜೆಗಳಲ್ಲಿಯೇ ಇದೆ, ಜನರ ಸಲಹೆ-ಅಭಿಪ್ರಾಯಗಳಿಗೆ ಅನುಗುಣವಾಗಿ ನಿಯಮಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಯಾವಾಗಲೂ ಸಿದ್ಧ ಎಂದು ತಿಳಿಸಿದರು.
ಕಳವಾದ ಫೋನ್ ಪತ್ತೆ ಮಾಡುವುದು ಮತ್ತು ದೂರಸಂಪರ್ಕ ವಂಚನೆ ತಡೆಯುವುದು ಎಂಬ ಸೈಬರ್ ಸುರಕ್ಷತಾ ಸಾಧನವಾಗಿ ಸರ್ಕಾರ ಪರಿಚಯಿಸಿದ್ದ ಈ ಆ್ಯಪ್ ಕುರಿತು ಗೌಪ್ಯತೆ, ದತ್ತಾಂಶ ದುರುಪಯೋಗದ ಆತಂಕ ಹಾಗೂ ಇಂತಹ ಕಡ್ಡಾಯ ಆದೇಶದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ವಿಪಕ್ಷಗಳು ಆತಂಕ ವ್ಯಕ್ತಪಡಿಸಿದ್ದವು.





