10 ವರ್ಷಗಳ ಹಿಂದೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರನ್ನು ಕೊಂದಿದ್ದ ಕುಟುಂಬವೊಂದರ 13 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಹರಾನ್‌ಪುರ ನ್ಯಾಯಾಲಯವು ಆದೇಶ ಹೊರಡಿಸಿದೆ.
ಉತ್ತರ ಪ್ರದೇಶದ ಸಹರಾನ್‌ಪುರದ ನಿವಾಸಿಗಳಾಗಿದ್ದ ಯಾಸಿನ್ ಮತ್ತು ತಾಸಿನ್ ಎಂಬ ಸಹೋದರರು ಮತ್ತು ಪ್ರಮುಖ ಅಪರಾಧಿ ಮುನಾವರ್ ಕುಟುಂಬದ ನಡುವೆ 20 ಬಿಫಾ ಜಮೀನಿನ ವಿಚಾರವಾಗಿ ಗಲಾಟೆ ನಡೆದಿತ್ತು. 2016ರ ನವೆಂಬರ್ 12ರಂದು ಯಾಸಿನ್ ಮತ್ತು ತಾಸಿನ್ ಅವರನ್ನು ಮುನಾವರ್ ಕುಟುಂಬವು ಹತ್ಯೆಗೈದಿತ್ತು ಎಂದು ಆರೋಪಿಸಲಾಗಿದೆ.
ಯಾಸಿನ್ ಅವರ ಪುತ್ರ ಇಸ್ರಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮುನಾವರ್ ಸೇರಿದಂತೆ ಆತನ ಕುಟುಂಬದ 13 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಹರಾನ್‌ಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಕಾಸ್ ಗುಪ್ತಾ ಅವರು ಅಪರಾಧಿಗಳಾದ ಮುನಾವರ್, ಮುಸ್ತಫಾ, ಸನಾವರ್, ಸ್ಟಾಕೀಮ್, ಶೌಕೀನ್ ಮತ್ತು ಮೊಹ್ಸಿನ್, ಅನ್ವರ್, ಇಸ್ಲಾಂ, ಗುಲ್ಜಾರ್, ಜಮ್ಶೆಡ್, ಪರ್ವೇಜ್, ಅನ್ವರ್ ಹಾಗೂ ಶಕೀಬ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ, 10.73 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.




