ಇಬ್ಬರು ಸಹೋದರರನ್ನು ಕತ್ತಿ, ಕೊಡಲಿ ಹಾಗೂ ದೊಣ್ಣೆಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಜನಾಕ್ರೋಶ ಮತ್ತು ಭೀತಿಗೆ ಕಾರಣವಾಗಿದೆ.
ಶಹದೋಲ್‌ನ ಬಲ್ಬಹರಾ ಗ್ರಾಮದಲ್ಲಿ ಅಕ್ಟೋಬರ್ 21ರಂದು ತಡರಾತ್ರಿ ಘಟನೆ ನಡೆದಿದೆ. ಮೂವರು ಸಹೋದರರು ಕುಳಿತಿದ್ದ ಆಟೋ ಪಾರ್ಟ್ಸ್ ಅಂಗಡಿಗೆ ಪ್ರಮುಖ ಆರೋಪಿ ಅನುರಾಗ್ ಶರ್ಮಾ ಮತ್ತು ಆತನ ಗುಂಪು ನುಗ್ಗಿದ್ದು, ಏಕಾಏಕಿ ಹಲ್ಲೆ ನಡೆಸಿದ್ದು, ಇಬ್ಬರನ್ನು ಬರ್ಬರವಾಗಿ ಕೊಂದಿದೆ ಎಂದು ವರದಿಯಾಗಿದೆ.
“ಸುಮಾರು 10 ಮಂದಿ ದಾಳಿಕೋರರ ಗುಂಪು ಕತ್ತಿ, ಕೊಡಲಿ ಮತ್ತು ದೊಣ್ಣೆಗಳಿಂದ ಶಸ್ತ್ರಸಜ್ಜಿತರಾಗಿ ಅಂಗಡಿಗೆ ನುಗ್ಗಿದರು. ಅಂಗಡಿಯ ಬಾಗಿಲು ಮುರಿದು ಸಹೋದರರನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದರು” ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ದಾಳಿಕೋರರು ಸಂತ್ರಸ್ತರ ಕೈಕಾಲುಗಳನ್ನು ಮುರಿದಿರುವುದು ಕಂಡುಬಂದಿದೆ.
ಸಂತ್ರಸ್ತ ಸಹೋದರರಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರನ್ನು ಶಹದೋಲ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಎರಡನೇ ಸಹೋದರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. 3ನೇ ಸಹೋದರ ಸತೀಶ್ ಪರಿಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಮ್ಮ ಮೇಲೆ ದಾಳಿಕೋರರು ದಾಳಿ ನಡೆಸಲು ಆರಂಭಿಸಿದಾಗ ಸಂತ್ರಸ್ತರು ನಿರಂತರವಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ, ಗಂಟೆಗಟ್ಟಲೆ ದಾಳಿಗಳು ನಡೆದಿರೂ, ಪೊಲೀಸರು ಸ್ಥಳಕ್ಕೆ ಧಾವಿಸಲಿಲ್ಲ. ನೆರವಿಗೆ ಬರಲಿಲ್ಲ ಎಂದು ಸಂತ್ರಸ್ತರ ಕುಟುಂಬಸ್ಥರು ಆರೋಪಿಸಿದ್ದಾರೆ. ಕೇಶವಿ ಪೊಲೀಸ್ ಹೊರಠಾಣೆಯ ಉಸ್ತುವಾರಿ ಆಶಿಶ್ ಝಾರಿಯಾ ಅವರ ಮೇಲೆ ನಿರ್ಲಕ್ಷ್ಯ ಮತ್ತು ಪಿತೂರಿ ಆರೋಪ ಮಾಡಲಾಗಿದೆ.
ಈ ಲೇಖನ ಓದಿದ್ದೀರಾ?: ತೆರಿಗೆ ಹಂಚಿಕೆ | ಕರ್ನಾಟಕಕ್ಕೆ ಮತ್ತೆ ಕಾದಿದೆಯಾ ಭಾರೀ ಅನ್ಯಾಯ? ಕೇಂದ್ರದ ಸಮರ್ಥನೆಗೆ ರಾಜ್ಯ ಬಿಜೆಪಿ ಸಿದ್ದ
ಕರ್ತವ್ಯಲೋಪ ಎಸಗಿದ ಪೊಲೀಸರು ಹಾಗೂ ಕೃತ್ಯ ಎಸಗಿದ ಆರೋಪಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದುಃಖಿತ ಕುಟುಂಬ, ಸಂಬಂಧಿಕರು ಹಾಗೂ ಗ್ರಾಮಸ್ಥರು ಅಕ್ಟೋಬರ್ 22 ರಂದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಕೇಶವಿ ಹೊರಠಾಣೆ ಉಸ್ತುವಾರಿ ಆಶಿಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಇಲ್ಲಿಯವರೆಗೆ ಪ್ರಮುಖ ಆರೋಪಿ ಅನುರಾಗ್ ಶರ್ಮಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶರ್ಮಾ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇತರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸಂತ್ರಸ್ತ ಸಹೋದರರು ಮತ್ತು ಆರೋಪಿಗಳ ನಡುವೆ ಹಳೆಯ ಭೂ ವಿವಾದವಿತ್ತು. ಅದೇ ಕಾರಣಕ್ಕೆ, ಆರೋಪಿಗಳು ಈ ಕ್ರೌರ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.




