ಹೆಚ್‌ಐವಿ ಸೋಂಕಿತ ಎಂಬ ಕಾರಣಕ್ಕೆ ಬಿಎಸ್‌ಎಫ್ ಯೋಧನನ್ನು ವಜಾಗೊಳಿಸಿದ್ದ ಗಡಿ ಭದ್ರತಾ ಪಡೆಯ ಕ್ರಮವನ್ನು ದೆಹಲಿ ಹೈಕೋರ್ಟ್ ಟೀಕಿಸಿದೆ. ವಜಾ ಆದೇಶವನ್ನು ರದ್ದುಗೊಳಿಸಿದೆ.
ಬಿಎಸ್‌ಎಫ್ ಯೋಧನೊಬ್ಬರು ಹೆಚ್‌ಐವಿ ಸೋಂಕಿಗೆ ತುತ್ತಾಗಿರುವುದು 2017ರ ಜುಲೈನಲ್ಲಿ ದೃಢಪಟ್ಟಿತ್ತು. ಇದೇ ಕಾರಣಕ್ಕಾಗಿ ಅವರನ್ನು ಸೇವೆಯಿಂದ ವಜಾಗೊಳಿಸಿ 2019ರ ಏಪ್ರಿಲ್ 9ರಂದು ಆದೇಶಿಸಲಾಗಿತ್ತು. ತಮ್ಮ ವಜಾವನ್ನು ಪ್ರಶ್ನಿಸಿ ಯೋಧ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ಪೀಠವು, ವಜಾ ಆದೇಶವನ್ನು ರದ್ದುಗೊಳಿಸಿದೆ. ಯೋಧನನ್ನು ಸೇನೆಗೆ ಮರು ನೇಮಕ ಮಾಡಿಕೊಳ್ಳುವಂತೆ ಸೇನೆಗೆ ತಾಕೀತು ಮಾಡಿದೆ.
“ಅರ್ಜಿದಾರರು ಸೇನೆಯಲ್ಲಿ ಮುಂದುವರೆಯುವ ಹಕ್ಕು ಹೊಂದಿದ್ದಾರೆ. ಒಂದು ವೇಳೆ, ಅವರ ವೈದ್ಯಕೀಯ ಸ್ಥಿತಿ ಹದಗೆಟ್ಟಿದ್ದು, ಅವರು ಮೂಲತಃ ನೇಮಕಗೊಂಡಿದ್ದ ಕಾನ್‌ಸ್ಟೆಬಲ್ (ಸಾಮಾನ್ಯ ಕರ್ತವ್ಯ) ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದಾದರೆ, ಅವರಿಗೆ ಸೂಕ್ತವಾದ ಯಾವುದೇ ಸಮಾನ ಹುದ್ದೆಯಲ್ಲಿ ಪರ್ಯಾಯ ನೇಮಕಾತಿಯನ್ನು ನೀಡಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಅವರು ಎಚ್‌ಐವಿ ಯಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನು ಹೊರತುಪಡಿಸಿ, ಅವರನ್ನು ವಜಾಗೊಳಿಸಲು ಯಾವುದೇ ಆಧಾರಗಳಿಲ್ಲ. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ (ಆರ್‌ಪಿಡಬ್ಲ್ಯೂಡಿ) ಕಾಯ್ದೆ-2016ರ ಅಡಿಯಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅಂಗವಿಕಲ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡಲು ಯಾವುದೇ ಸರ್ಕಾರಿ ಸಂಸ್ಥೆಗೆ ಅವಕಾಶವಿಲ್ಲ” ಎಂದು ಹೇಳಿದೆ.




