2015ರಲ್ಲಿ ಪ್ರಾರಂಭವಾದ, ಅಂದಿನಿಂದ ಈವರೆಗೆ ಮೂರು ಬಾರಿ ಸ್ಥಗಿತಗೊಂಡು, ಮರು ಆರಂಭಗೊಂಡಿರುವ ‘ಸ್ಕಿಲ್ ಇಂಡಿಯಾ ಮಿಷನ್’ನ ಪ್ರಮುಖ ಯೋಜನೆಯಾದ ‘ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ’ (ಪಿಎಂಕೆವಿವೈ)ಯು ತನ್ನ ಗುರಿ ಸಾಧಿಸುವಲ್ಲಿ ವಿಫಲವಾಗಿದೆ. ಭಾರತೀಯ ಯುವಜನರನ್ನು ಒಳಗೊಳ್ಳುವಲ್ಲಿ ಮತ್ತು ಕೌಶಲ್ಯ ವೃದ್ಧಿಗೊಳಿಸುವಲ್ಲಿ ಹಿಂದುಳಿದಿದೆ. ಮಾತ್ರವಲ್ಲದೆ, ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಡಿಸೆಂಬರ್ 18ರಂದು ಬಿಡುಗಡೆಯಾದ ವರದಿಯು ಭಾರತೀಯನ್ನು ದಿಗ್ಭ್ರಮೆಗೊಳಿಸಿದೆ. ಯೋಜನೆಯಲ್ಲಿನ ಭ್ರಷ್ಟಾಚಾರ ಮತ್ತು ವೈಫಲ್ಯವನ್ನು ತೆರೆದಿಟ್ಟಿದೆ.
ಯುಪಿಎ ಸರ್ಕಾರ ಅವಧಿಯಲ್ಲಿದ್ದ ‘ರಾಷ್ಟ್ರೀಯ ಕೌಶಲ್ಯ ಯೋಜನೆ’ಯನ್ನು ‘ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ’ (ಎನ್‌ಎಸ್‌ಡಿಸಿ) ನಿರ್ವಹಿಸುತ್ತಿತ್ತು. ಆಯೋಜನೆಯು ಕಳಪೆ ಸಾಧನೆ ಮಾಡಿದೆ ಎಂಬ ಕಾರಣಕ್ಕಾಗಿ, ಮೋದಿ ಸರ್ಕಾರವು ಯೋಜನೆಯ ಹೆಸರನ್ನು 2015ರಲ್ಲಿ ಬದಲಿಸಿತು. ‘ಸ್ಕಿಲ್ ಇಂಡಿಯಾ’ ಹೆಸರಿನಲ್ಲಿ ಮರು ಆರಂಭಿಸಿತು. ಯೋಜನೆಯು 2022ರ ವೇಳೆಗೆ 50 ಕೋಟಿ ಯುವಜನರಿಗೆ ತರಬೇತಿ ನೀಡಿ, ಅವರನ್ನು ಕೌಶಲ್ಯಭರಿತರನ್ನಾಗಿ ಮಾಡುವ ಉದ್ದೇಶ ಹೊಂದಿದೆ ಎಂದು ಮೋದಿ ಘೋಷಿಸಿದ್ದರು. ಆದರೆ, ಮರುನಾಮಕರಣಗೊಂಡ ಯೋಜನೆಯೂ ತನ್ನ ಗುರಿ-ಉದ್ದೇಶಗಳನ್ನು ಸಾಧಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಎಜಿ ವರದಿ ವಿವರಿಸಿದೆ.
ಯೋಜನೆ ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ ಕೇವಲ ಕೇವಲ 1.32 ಕೋಟಿ ಯುವಜನರಿಗೆ ಮಾತ್ರವೇ ತರಬೇತಿ ನೀಡಲಾಗಿದೆ. ಅದರಲ್ಲಿ, 1,1 ಕೋಟಿ ಯುವಜನರಿಗೆ ಮಾತ್ರ ಪ್ರಮಾಣಪತ್ರ ನೀಡಲಾಗಿದೆ. ಇನ್ನು, ತರಬೇತಿಯ ಬಳಿಕ ಉದ್ಯೋಗಗಳಿಗೆ ನಿಯೋಜನೆಗೊಂಡವರ ಸಂಖ್ಯೆಯಂತೂ ತೀರಾ ವಿರಳ. ಅಲ್ಲದೆ, ತರಬೇತಿ ಪಡೆದ ಮತ್ತು ಪ್ರಮಾಣಪತ್ರ ಪಡೆದವರ ಸಂಖ್ಯೆಯೂ ಕೂಡ ವಿಶ್ವಾಸಾರ್ಹವಾಗಿಲ್ಲ ಎಂದು ಸಿಎಜಿ ಅನುಮಾನಿಸಿದೆ.
ಸ್ಕಿಲ್ ಇಂಡಿಯಾದ ಮೊದಲ ಎರಡು ಹಂತಗಳನ್ನು 2015-2020ರ ನಡುವೆ ನಡೆಸಲಾಗಿತ್ತು. ಮೂರನೇ ಹಂತವು 2020-2022 ಹಾಗೂ ನಾಲ್ಕನೇ ಹಂತವು 2022ರ ಮಾರ್ಚ್‌ನಲ್ಲಿ ಆರಂಭವಾಯಿತು. ಸಿಎಜಿ ವರದಿಯು 2022ರವರೆಗಿನ ಮೊದಲ ಮೂರು ಹಂತಗಳನ್ನು ವಿಶ್ಲೇಷಿಸಿದೆ. ಯೋಜನೆಯಡಿ ತರಬೇತಿ ಪಡೆದ ಪ್ರಮಾಣೀಕೃತ ಅಭ್ಯರ್ಥಿಗಳು ನೇರ ನಗದು ವರ್ಗಾವಣೆ (DBT) ಮೂಲಕ 500 ರೂ.ಗಳ ಬಹುಮಾನ ಪಡೆಯುತ್ತಾರೆ.
ಸ್ಕಿಲ್ ಇಂಡಿಯಾ ಯೋಜನೆಯಡಿ ತರಬೇತಿ ಪಡೆದು, ದೃಢೀಕರಣಿಸಲಾದ ಅಭ್ಯರ್ಥಿಗಳು, ವೆಚ್ಚ ಹಾಗೂ ಹಲವು ಆಯಾಮಗಳಲ್ಲಿ ಸಿಎಜಿ ಪರಿಶೀಲನೆ ನಡೆಸಿದ್ದು, ನಾನಾ ರೀತಿಯ ಅಕ್ರಮ, ಭ್ರಷ್ಟಾಚಾರ ನಡೆದಿರುವುದನ್ನು ಕಂಡುಕೊಂಡಿದೆ. ವರದಿ ಪ್ರಮುಖ 15 ಅಂಶಗಳು ಹೀಗಿವೆ;
1. ಸೂಕ್ಷ್ಮ ಮಟ್ಟದ ‘ಸ್ಕಿಲ್ ಗ್ಯಾಪ್’ (ಕೌಶಲ್ಯ ಅಂತರ – ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ಮತ್ತು ಆಕಾಂಕ್ಷಿಯು ಹೊಂದಿರುವ ಕೌಶಲ್ಯ ನಡುವಿನ ಅಂತರ) ಮಾಹಿತಿಯ ಕೊರತೆ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಯೋಜನೆಯ ದೀರ್ಘಕಾಲೀನ ಅನುಷ್ಠಾನದ ತಂತ್ರ ಮತ್ತು ಯೋಜನೆಯ ಅಭಾವ ಎದ್ದು ಕಾಣುತ್ತದೆ. ಜೊತೆಗೆ, ವಲಯವಾರು ಮತ್ತು ರಾಜ್ಯವಾರು ತರಬೇತಿ ನೀಡಲಾಗಿದೆ ಎಂಬ ಸಂಖ್ಯೆಗೂ, ‘ಸ್ಕಿಲ್ ಗ್ಯಾಪ್’ ಅಧ್ಯಯನಗಳಿಗೂ ಹೊಂದಾಣಿಕೆಯೇ ಇಲ್ಲ.
2. 2022ರಲ್ಲಿ ಮೂರು ಹಂತಗಳು ಪೂರ್ಣಗೊಂಡ ನಂತರವೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಮ್ಮುಖತೆ ‘ಪರಿಣಾಮಕಾರಿಯಾಗಿರಲಿಲ್ಲ’.
3. ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (NCVET) ಮೂಲಕ ಜಾರಿಗೆ ತರಬೇಕಾದ ‘ಕೌಶಲ್ಯ ಗುಣಮಟ್ಟದ ಭರವಸೆ ಮತ್ತು ನಿಯಂತ್ರಣ’ಕ್ಕಾಗಿ ಉನ್ನತ ಮಟ್ಟದ ಮಾರ್ಗಸೂಚಿ (ಫ್ರೇಮ್‌ವರ್ಕ್) ಇನ್ನೂ ರಚನೆಯ ಹಂತದಲ್ಲಿಯೇ ಇದೆ. ಇದು ಈವರೆಗೆ ಸೀಮಿತ ನಿಯಂತ್ರಣಾ ಪಾತ್ರಗಳನ್ನು ಮಾತ್ರವೇ ನಿರ್ವಹಿಸಿದೆ.
4. ತರಬೇತಿಯ ಛಾಯಾಚಿತ್ರ/ವಿಡಿಯೋ ಪುರಾವೆಗಳು, ಶಿಕ್ಷಣ/ಕೆಲಸದ ಅನುಭವದ ದಾಖಲೆಗಳಂತಹ ನಿರ್ಣಾಯಕ ದತ್ತಾಂಶ/ಮಾಹಿತಿಯನ್ನು ಇಟ್ಟುಕೊಳ್ಳಲಾಗಿಲ್ಲ. ಇದರ ಜೊತೆಗೆ, ತರಬೇತುದಾರರು, ಮೌಲ್ಯಮಾಪಕರು ಹಾಗೂ ಅಭ್ಯರ್ಥಿಗಳ ಎಲೆಕ್ಟ್ರಾನಿಕ್ ಗುರುತು, ಸಂಪರ್ಕ ಹಾಗೂ ಖಾತೆ ವಿವರಗಳನ್ನೂ ನಿರ್ವಹಿಸಲಾಗಿಲ್ಲ.
5. ವಯಸ್ಸು, ಶಿಕ್ಷಣ, ಕೆಲಸದ ಅನುಭವದಂತಹ ನಿಗದಿತ ನಿರ್ದಿಷ್ಟ ಮಾನದಂಡಗಳನ್ನು ನಿರ್ಲಕ್ಷಿಸಿ ದಾಖಲಾತಿಗಳನ್ನು ಮಾಡಲಾಗಿದೆ. ಅಲ್ಲದೆ, ಉದ್ದೇಶಿತ ಫಲಾನುಭವಿಗಳನ್ನು (ಅಂದರೆ, ನಿರುದ್ಯೋಗಿ ಯುವಜನರು ಮತ್ತು ಶಾಲಾ/ಕಾಲೇಜು ಬಿಟ್ಟವರು) ಪರಿಶೀಲಿಸುವ ಕಾರ್ಯವಿಧಾನವೂ ಲಭ್ಯವಿಲ್ಲ.
6. STT/SP ಅಡಿಯಲ್ಲಿ ದಾಖಲಾದ 56.14 ಲಕ್ಷ ಅಭ್ಯರ್ಥಿಗಳಲ್ಲಿ, ಕೇವಲ 23.18 ಲಕ್ಷ (41%) ಅಭ್ಯರ್ಥಿಗಳ ಮಾಹಿತಿ ಮಾತ್ರವೇ ಲಭ್ಯವಿದೆ. ಕೇರಳದಲ್ಲಿ, ತರಬೇತಿ ಪಡೆದ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನಿಯೋಜಿಸಲಾಗಿದೆ ಎಂಬುದಕ್ಕೆ ಪುರಾವೆಯಾಗಿ ‘ನಕಲಿ ನಿಯೋಜನೆ ದಾಖಲೆ’ಗಳನ್ನು ಸಿದ್ದಪಡಿಸಲಾಗಿದೆ. ಮತ್ತೊಂದೆಡೆ, ಉತ್ತರ ಪ್ರದೇಶದಲ್ಲಿ, 12,616 ಅಭ್ಯರ್ಥಿಗಳು ಉದ್ಯೋಗಗಳಿಗೆ ನಿಯೋಜನೆ ಪಡೆದಿದ್ದಾರೆ ಎಂದು ಸ್ಕಿಲ್ ಇಂಡಿಯಾ ಪೋರ್ಟಲ್ ಹೇಳಿದ್ದರೂ, ರಾಜ್ಯ ಸಂಸ್ಥೆಗಳಲ್ಲಿ ಯಾವುದೇ ಮಾಹಿತಿ-ದಾಖಲೆಗಳಿಲ್ಲ.
7. RPL-BICEನಲ್ಲಿ (ಕೌಶಲ್ಯ ಮೌಲ್ಯಮಾಪನ ಮತ್ತು ದೃಢೀಕರಣ ನೀಡುವ ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು) ಏಜೆನ್ಸಿಗಳ ಆಯ್ಕೆ, ಪ್ರಸ್ತಾವನೆಯ ಪರಿಶೀಲನೆ, ಅನುಷ್ಠಾನ ಹಾಗೂ ಮೇಲ್ವಿಚಾರಣಾ ಪ್ರಕ್ರಿಯೆಯಲ್ಲಿ ‘ಹಲವಾರು ಅಕ್ರಮ’ಗಳು ಕಂಡುಬಂದಿವೆ. NSDC ಒದಗಿಸಿದ ಮತ್ತು ಮೇಲ್ವಿಚಾರಣೆ ಮಾಡಿದ ತರಬೇತಿಗೆ ಸಂಬಂಧಿಸಿದ ದಾಖಲೆಗಳು ‘ವಿಶ್ವಾಸಾರ್ಹವಾಗಿಲ್ಲ’.
8. 33 ವಲಯ ಕೌಶಲ್ಯ ಮಂಡಳಿಗಳು (SSC) ಪ್ರಮಾಣೀಕರಣದಲ್ಲಿ (RPL-BICE) ಭಾಗವಹಿಸಿದ್ದರೂ, ಒಟ್ಟಾರೆ ದೃಢೀಕರಣಗಳಲ್ಲಿ 34.93%ರಷ್ಟು ಪ್ರಮಾಣಪತ್ರಗಳನ್ನು ಮಾಧ್ಯಮ, ಮನರಂಜನೆ ಹಾಗೂ ಹಸಿರು ಉದ್ಯೋಗ ವಲಯದಿಂದ ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವಾಲಯವು (MSDE) ಮಾಧ್ಯಮ ಮತ್ತು ಇತರ ಎಸ್‌ಎಸ್‌ಸಿಗಳು ತಮ್ಮಲ್ಲಿ ಅಭ್ಯರ್ಥಿಗಳಿಗೆ ಸಣ್ಣ ಉದ್ಯೋಗದಾತರಿಂದ ಪ್ರಮಾಣಪತ್ರಗಳನ್ನು ಕೊಡಿಸಿವೆ. ಬಿಹಾರದ 10 ತರಬೇತಿ ಕೇಂದ್ರಗಳಲ್ಲಿ ಮೂರು ಮತ್ತು ಒಡಿಶಾದ 17 ತರಬೇತಿ ಕೇಂದ್ರಗಳಲ್ಲಿ ಒಂದನ್ನು ಸಮೀಕ್ಷೆಯ ಸಮಯದಲ್ಲಿ ಸಂಪೂರ್ಣವಾಗಿ ಮುಚ್ಚಲಾಗಿದೆ.
9. ರಶೀದಿ ಮತ್ತು ಪಾವತಿ ನಿಯಮಗಳನ್ನು ಉಲ್ಲಂಘಿಸಿ ಹಣವನ್ನು ಬಿಡುಗಡೆ ಮಾಡಲಾಗಿದೆ.
10. RPL (ಪೂರ್ವ ಕಲಿಕೆಯ ಗುರುತಿಸುವಿಕೆ)ನಲ್ಲಿ, ಆಧಾರ್-ಸಂಯೋಜಿತ ಹಾಜರಾತಿ ವ್ಯವಸ್ಥೆಯನ್ನು (AEBAS) ‘ಅನುಸರಿಸಲಾಗಿಲ್ಲ’. ತರಬೇತಿ ಕೇಂದ್ರಗಳಲ್ಲಿ (TCs) ಸುಮಾರು 24 ಕೇಂದ್ರಗಳು ಬಯೋಮೆಟ್ರಿಕ್ ಸಾಧನಗಳನ್ನು ಹೊಂದಿಲ್ಲ ಅಥವಾ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಸಿಎಜಿ ಕಂಡುಕೊಂಡಿದೆ.
11. ‘ವಿಭಿನ್ನ ತರಬೇತಿಗಳಿಗೆ’ ಪುರಾವೆಯಾಗಿ ಒಂದೇ ಛಾಯಾಚಿತ್ರಗಳನ್ನು ಪ್ರಸ್ತುತಪಡಿಸಲಾಗಿದೆ.
12. ತರಬೇತಿಯಿಂದ RPLಗೆ ಆದ್ಯತೆಯನ್ನು ಬದಲಾಯಿಸಲಾಗಿದೆ. ಅಲ್ಲದೆ, ಹಂತ 2 (2016-20)ರಲ್ಲಿ ನೀಡಲಾದ ದೃಢೀಕರಣ ಪತ್ರಗಳನ್ನು ಸ್ವೀಕರಿಸಿದ ಅಭ್ಯರ್ಥಿಗಳಿಗೆ DBT ಮೂಲಕ 500 ರೂ. ಪಾವತಿ ಮಾಡುವಲ್ಲಿ ಭಾರಿ ಅಕ್ರಮಗಳು ಕಂಡುಬಂದಿವೆ. ಹಣ ವರ್ಗಾವಣೆಗೊಂಡ ಬಹುತೇಕ ಬ್ಯಾಂಕ್ ಖಾತೆಗಳು ನಕಲಿ ಎಂಬುದನ್ನು ಸಿಎಜಿ ವರದಿ ಕಂಡುಹಿಡಿದಿದೆ.
13. ಸ್ಕಿಲ್ ಇಂಡಿಯಾ ಪೋರ್ಟಲ್ (SIP) ನಲ್ಲಿ ನೋಂದಾಯಿಸುವಾಗ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಹಾಗೂ ಇಮೇಲ್‌ನಂತಹ ಸಂಪರ್ಕ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದ್ದರೂ, ಹಂತ 2.0 ಮತ್ತು 3.0ರ ಸಮಯದಲ್ಲಿ, ಸುಮಾರು 94.3% (ಒಟ್ಟು 95.9 ಲಕ್ಷದಲ್ಲಿ 90.7 ಲಕ್ಷ) ಬ್ಯಾಂಕ್ ಖಾತೆಗಳು ಮೇಲಿನ ಯಾವುದೇ ವಿವರಗಳನ್ನು ಹೊಂದಿರಲಿಲ್ಲ. ಉಳಿದ 52,381 ಖಾತೆಗಳಲ್ಲಿ 12,122 ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಎರಡು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಪುನರಾವರ್ತಿಸಲಾಗಿದೆ. ಅಂತಹ ಖಾತೆಗಳಲ್ಲಿ ಕೇವಲ ವಿವರ, ಹೆಸರುಗಳು, ವಿಳಾಸ ಅಥವಾ ವಿಶೇಷ ಅಕ್ಷರಗಳಂತಹ ಸ್ಪಷ್ಟ ತಪ್ಪು/ತಿದ್ದುಪಡಿ ಮಾಡಿರುವುದು ಕಂಡುಬಂದಿದೆ.
14. ಆನ್‌ಲೈನ್ ಸಮೀಕ್ಷೆಗಳ ಮೂಲಕ ಪರಿಶೀಲಿಸಿದಾಗ, 36.5%ರಷ್ಟು ಇಮೇಲ್‌ಗಳು ಸಕ್ರಿಯವಾಗಿಲ್ಲ ಅಥವಾ ‘ವಿತರಣಾ ವೈಫಲ್ಯ’ (delivery failure) ಎಂದು ತೋರಿಸಿವೆ. ಅಂದರೆ, ಇಲ್ಲದ ಇಮೇಲ್ ವಿಳಾಸಗಳನ್ನು ನಮೂದಿಸಲಾಗಿದೆ. ಉಳಿದಂತೆ, ಇಮೇಲ್‌ಗಳು ತಲುಪಿದವರಲ್ಲಿ ಕೇವಲ 3.95% ಮಂದಿ ಮಾತ್ರವೇ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿಯೂ, 76.6% ಪ್ರತಿಕ್ರಿಯೆಗಳು ಒಂದೇ ಇಮೇಲ್ ಐಡಿಗೆ ಸಂಬಂಧಿಸಿದ ಅಥವಾ ಸಂಬಂಧಪಟ್ಟ ಟಿಪಿ/ಟಿಸಿಗೆ ಸೇರಿದ ಇಮೇಲ್ ಐಡಿಗಳಿಂದ ಬಂದಿವೆ ಎಂಬುದನ್ನು ವರದಿ ಗಮನಿಸಿದೆ.
15. ತರಬೇತಿ, ದೃಢೀಕರಣ ಹಾಗೂ ನಿಯೋಜನೆಯ ಬಗ್ಗೆ ಎಂಎಸ್‌ಡಿಇ ಪುರಾವೆಗಳು/ಸಮರ್ಥನೆಗಳು ಸಂಪೂರ್ಣವಾಗಿ ಕಾಲ್ಪನಿಕವಾಗಿವೆ. ಕೆಲವೇ ಕೆಲವು ಮಾತ್ರ ನಿಜವಾಗಿಯೂ ಕೌಶಲ್ಯ ತರಬೇತಿ ಪಡೆದವರ ದಾಖಲೆಗಳಿವೆ. ನೇರ ನಗದು ವರ್ಗಾವಣೆ ಪಾವತಿಗಳನ್ನು ಮಾಡಿದ ಪ್ರಮಾಣೀಕೃತ ಅಭ್ಯರ್ಥಿಗಳ ಬ್ಯಾಂಕ್ ಖಾತೆಗಳಲ್ಲಿ ಬರೋಬ್ಬರಿ 94.53%ರಷ್ಟು ನಕಲಿಯಾಗಿರಲು ಹೇಗೆ ಸಾಧ್ಯ ಎಂದು ಸಿಜೆಇ ಪ್ರಶ್ನಿಸಿದೆ.
2022ರ ಮಾರ್ಚ್‌ನಿಂದ ಆರಂಭವಾಗಿರುವ ನಾಲ್ಕನೇ ಹಂತದಲ್ಲಿ ಇಂತಹ ಸಮಸ್ಯೆಗಳು ಇಲ್ಲದಂತೆ ಎಲ್ಲವನ್ನೂ ಕ್ರಮಬದ್ಧಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿಕೊಂಡಿದೆ ಎಂದು ಸಿಎಜಿ ತಿಳಿಸಿದೆ. ಆದಾಗ್ಯೂ, ನಾಲ್ಕನೇ ಹಂತದಲ್ಲಾದ ಧೋಖಾಗಳು ಅದರ ಪರಿಶೀಲನೆ ವೇಳೆ ಗೊತ್ತಾಗಲಿದೆ ಎಂದು ಹೇಳಲಾಗಿದೆ.
ಈ ಲೇಖನ ಓದಿದ್ದೀರಾ?: ವಾರಕ್ಕೆ 80 ತಾಸು ದುಡಿಯುತ್ತಿರುವ ಮಹಿಳೆಯರು! AI ಬಂದರೂ ನಾರಿಗಿಲ್ಲ ವೇತನರಹಿತ ಕೆಲಸದಿಂದ ಮುಕ್ತಿ
ಯೋಜನೆಯ ಅನುಷ್ಠಾನವನ್ನು ಈ ಹಿಂದೆಯೇ ಕ್ರಮಬದ್ಧಗೊಳಿಸಬೇಕಿತ್ತು. ಈಗಾಗಲೇ, ಯೋಜನೆಗಾಗಿ ನಿಗದಿ ಪಡಿಸಲಾದ 14,450 ಕೋಟಿ ರೂ.ಗಳಲ್ಲಿ 10,192 ಕೋಟಿ ರೂ. ಬಿಡುಗಡೆಯಾಗಿದ್ದು, 9,261 ಕೋಟಿ ರೂ. ಖರ್ಚು ಮಾಡಲಾಗಿದೆ. ಅಲ್ಲದೆ, 2025ರ ಫೆಬ್ರವರಿಯಲ್ಲಿ ಯೋಜನೆಯ ಪುನರ್‌ರಚನೆಗಾಗಿ ಕೇಂದ್ರ ಸಚಿವ ಸಂಪುಟವು 8,800 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ. ಈಗ, ಸಚಿವಾಲಯ ಎಚ್ಚುತ್ತುಕೊಳ್ಳುತ್ತಿರುವುದು ತೀರಾ ವಿಳಂಬ ಮತ್ತು ಕಳವಳಕಾರಿ ಎಂದು ಸಿಎಜಿ ಹೇಳಿದೆ.
ಯೋಜನೆ ಮತ್ತು ಬೃಹತ್ ವೆಚ್ಚವು ಯಾರನ್ನಾದರೂ ಕೌಶಲ್ಯಪೂರ್ಣರನ್ನಾಗಿ ಮಾಡಿದೆಯೇ?
2017ರಲ್ಲಿ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ವರದಿಯು “2015ರಿಂದ 2017ರವರೆಗೆ ಭಾರತದ ಒಟ್ಟು ಯುವಜನರಲ್ಲಿ ಕೇವಲ 4.69%ರಷ್ಟು ಜನರು ಮಾತ್ರ ಔಪಚಾರಿಕ ಕೌಶಲ್ಯ ತರಬೇತಿ ಪಡೆದಿದ್ದಾರೆ” ಎಂದು ಹೇಳಿತ್ತು. 2023-24ರ ಆರ್ಥಿಕ ಸಮೀಕ್ಷೆಯು, “15-29 ವರ್ಷ ವಯಸ್ಸಿನವರಲ್ಲಿ ಕೇವಲ 4.4%ರಷ್ಟು ಜನರು ಮಾತ್ರವೇ ಔಪಚಾರಿಕ ವೃತ್ತಿ/ತಾಂತ್ರಿಕ ತರಬೇತಿ ಹೊಂದಿದ್ದಾರೆ” ಎಂದು ಹೇಳಿದೆ.
ಸಿಎಜಿ ಪತ್ತೆಹಚ್ಚಿರುವ ವೈಫಲ್ಯಗಳು ಯುಪಿಎ ಯುಗದ ವೈಫಲ್ಯಗಳಿಗಿಂತ ಭಿನ್ನವಾಗಿಲ್ಲ. ಬಹುಶಃ, ಸ್ಕಿಲ್ ಇಂಡಿಯಾದ ಸಂಪೂರ್ಣ ವೈಫಲ್ಯದಿಂದಾಗಿ, ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳ ಪರಿಪೂರ್ಣ ಮತ್ತು ಪಾರದರ್ಶಕ ಡೇಟಾವನ್ನು ಸಚಿವಾಲಯ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.
2017ರಲ್ಲಿ, ಶಾರದಾ ಪ್ರಸಾದ್ ಸಮಿತಿಯು ತನ್ನ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಆ ವರದಿ ಸಾರ್ವಜನಿಕವಾಗಿ ಲಭ್ಯವಿಲ್ಲ. ವರದಿಯಲ್ಲಿ, “ಉದ್ಯಮದ ನಿಖರವಾದ ಕೌಶಲ್ಯ ಅಗತ್ಯಗಳನ್ನು ಪೂರೈಸುವ ಮತ್ತು ಯುವಜನರಿಗೆ ಯೋಗ್ಯ ವೇತನದೊಂದಿಗೆ ಉದ್ಯೋಗ ಒದಗಿಸುವ ಅವಳಿ ಉದ್ದೇಶಗಳನ್ನು ಯೋಜನೆಯು ಪೂರೈಸಿಲ್ಲ. ಬದಲಾಗಿ, ಖಾಸಗಿ ವಲಯಕ್ಕೆ ಲಾಭ ಮಾಡಿಕೊಡಲು 2,500 ಕೋಟಿ ರೂ. ಸಾರ್ವಜನಿಕ ಹಣವನ್ನು ಖರ್ಚು ಮಾಡಲಾಗಿದೆ” ಎಂದು ದೂರಿತ್ತು.
ಕಳೆದ ಕೆಲವು ವರ್ಷಗಳಲ್ಲಿ, ದೆಹಲಿ-ಎನ್‌ಸಿಆರ್‌ನಲ್ಲಿಯೂ ಸಹ ಉದ್ಯೋಗದಾತರು ಕೌಶಲ್ಯಪೂರ್ಣ ಅಥವಾ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಗೆ ಯೋಗ್ಯ ವೇತನ ಪಾವತಿಸಲು ಸಿದ್ಧರಿಲ್ಲ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಯೋಜನೆಯಡಿ ತರಬೇತಿ ಪಡೆದವರಿಗೆ ನೀಡಲಾಗುವ ಆರಂಭಿಕ ವೇತನ ಮತ್ತು ಇತರರಿಗೆ ದೊರೆಯುವ ಆರಂಭಿಕ ವೇತನದಲ್ಲಿ ಭಾರೀ ವ್ಯತ್ಯಾಸಗಳು ಕಂಡುಬಂದಿವೆ. ಇದು, ಇದು ಕೌಶಲ್ಯ ಯೋಜನೆಗಳಲ್ಲಿ ಯುವಜನರ ಆಸಕ್ತಿಯನ್ನು ಕಡಿತಗೊಳಿಸಿದೆ ಎಂದು ವರದಿಗಳಾಗಿವೆ.
ಖಾಸಗಿ ವಲಯಕ್ಕೆ ಕೇಂದ್ರದ ಯೋಜನೆ
2025ರ ಮೇ 17ರಂದು, ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು “ಕೇಂದ್ರ ಸರ್ಕಾರವು ಕೌಶಲ್ಯ ಸಂಸ್ಥೆಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಚಿಂತಿಸಬೇಕು” ಎಂದು ಸೂಚಿಸಿದ್ದಾರೆ. ಈಗಾಗಲೇ, ಹಳ್ಳಿ ಹಿಡಿದಿರುವ ಈ ಯೋಜನೆಯು ಖಾಸಗಿ ವಲಯದ ಪಾಲಾದರೆ, ಕೇಂದ್ರದ ಉದ್ದೇಶಿತ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
2008ರಲ್ಲಿ ಯುಪಿಎ ಸರ್ಕಾರವು ಎನ್‌ಎಸ್‌ಡಿಸಿಯನ್ನು ಆರಂಭಿಸಿದಾಗ, ಯೋಜನೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿತ್ತು. ಕೇಂದ್ರ ಸರ್ಕಾರವು 49% ಬಂಡವಾಳ ಮತ್ತು ಖಾಸಗಿ ಉದ್ಯಮಗಳು 51%ರಷ್ಟು ಹಣವನ್ನು ವಿನಿಯೋಗಿಸುತ್ತಿದ್ದವು. ಯೋಜನೆ ವಿಫಲವಾಗಲು ಇದೂ ಒಂದು ಕಾರಣ ಎಂದಿದ್ದ ಮೋದಿ ಸರ್ಕಾರ, 2015ರಲ್ಲಿ ‘ಸ್ಕಿಲ್ ಇಂಡಿಯಾ’ ಆರಂಭಿಸಿತು. ಯೋಜನೆಯ ಪರಿಪೂರ್ಣ ಹಣವನ್ನು ಸರ್ಕಾರವೇ ಭರಿಸಲು ಸಿಎಸ್‌ಸಿಎಂಅನ್ನು ಸ್ಥಾಪಿಸಿತು. ಇದರಲ್ಲಿ 75% ಹಣವು ಎನ್‌ಎಸ್‌ಡಿಸಿ ಮತ್ತು ಉಳಿದ 25% ಹಣವು ಕೇಂದ್ರ ಪ್ರಾಯೋಜಿತ, ರಾಜ್ಯಗಳು ನಿರ್ವಹಿಸುವ ಸಿಎಸ್‌ಎಸ್‌ಎಂ ಒದಗಿಸುತ್ತವೆ ಎಂದು ಹೇಳಲಾಗಿತ್ತು. ಆದರೆ, ಈಗ ಯೋಜನೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಸರ್ಕಾರ ಚಿಂತನೆ ನಡೆಸಿದೆ.




