ಎಐ ಶೃಂಗಸಭೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳನ್ನು ಸ್ಥಳೀಯ ಪೊಲೀಸರ ಅನುಮತಿ ಇಲ್ಲದೆಯೇ ಬಂಧಿಸಿ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ಹಿಮಾಚಲ ಪ್ರದೇಶ ಪೊಲೀಸರು ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ರಾಜ್ಯಗಳ ಪೊಲೀಸರ ನಡುವೆ ಜಟಾಪಟಿಯೂ ನಡೆದಿದೆ. ದೆಹಲಿ ಪೊಲೀಸರನ್ನು ಹಿಮಾಚಲ ಪೊಲೀಸರ ಬಂಧಿಸಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯ ವೇಳೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದ ಯುವ ಕಾರ್ಯಕರ್ತರ ಬಂಧನ ನಡೆದಿದೆ. ಆದರೆ ಸದ್ಯ ಈ ಪ್ರಕರಣ ದೆಹಲಿ ಪೊಲೀಸರು ಮತ್ತು ಹಿಮಾಚಲ ಪ್ರದೇಶ ಪೊಲೀಸರ ನಡುವಿನ ಕಾಳಗವಾಗಿ ಮಾರ್ಪಟ್ಟಿದೆ. ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಈ ವಿಚಾರದಲ್ಲಿ ಮಧ್ಯರಾತ್ರಿಯಲ್ಲಿ ಹೈಡ್ರಾಮಾ ನಡೆದು ಕೆಲ ಗಂಟೆಗಳ ಕಾಲ ದೆಹಲಿ ಪೊಲೀಸರನ್ನು ಹಿಮಾಚಲ ಪ್ರದೇಶ ಪೊಲೀಸರು ಬಂಧನದಲ್ಲಿ ಇರಿಸಿದ್ದಾರೆ.
ದೆಹಲಿಯಲ್ಲಿ ನಡೆದ AI ಶೃಂಗಸಭೆಯ ವೇಳೆ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದು, “PM is compromised” (ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ) ಎಂಬ ಬರಹವಿದ್ದ ಟೀ-ಶರ್ಟ್‌ಗಳನ್ನು ಪ್ರದರ್ಶಿಸಿದ್ದರು. ಆದರೆ ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ. ದಂಗೆ ಎದ್ದ ಆರೋಪ, ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಬೆನ್ನಲ್ಲೇ ಹೈಡ್ರಾಮಾ: ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲು!
ಕಾಂಗ್ರೆಸ್ ಈ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ. ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಹೇಳಿದರೆ, ಬಿಜೆಪಿ ಈ ಪ್ರತಿಭಟನೆಯು ದೇಶದ ವರ್ಚಸ್ಸಿಗೆ ಧಕ್ಕೆ ತರುವ ‘ದೇಶದ್ರೋಹದ ಕೆಲಸ’ ಎಂದು ಟೀಕಿಸಿದೆ. ಸದ್ಯ ಈ ಪ್ರಕರಣದ ವಿಚಾರಣೆ, ತನಿಖೆ ನಡೆಯುತ್ತಿದೆ. ಅದರ ಭಾಗವಾಗಿಯೇ ಇತ್ತೀಚೆಗೆ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಹಿಮಾಚಲದ ರೋಹ್ರುವಿನಲ್ಲಿ ವಶಕ್ಕೆ ಪಡೆದಿದ್ದರು. ಇವರನ್ನು ದೆಹಲಿಗೆ ಕರೆದೊಯ್ಯುವ ವೇಳೆ ಶಿಮ್ಲಾ ಸಮೀಪದ ಶೋಗಿ ಗಡಿಯಲ್ಲಿ ಹಿಮಾಚಲ ಪೊಲೀಸರು ದೆಹಲಿ ಪೊಲೀಸ್ ವಾಹನಗಳನ್ನು ತಡೆದಿದ್ದಾರೆ.
ಅನುಮತಿ ಇಲ್ಲದೆಯೇ ಬಂಧಿಸಿ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ಹಿಮಾಚಲ ಪೊಲೀಸರು ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ರಾಜ್ಯಗಳ ಪೊಲೀಸರ ನಡುವೆ ಜಟಾಪಟಿಯೂ ನಡೆದಿದೆ. ಕೊನೆಗೆ ಹಿಮಾಚಲ ಪೊಲೀಸರು ತಡರಾತ್ರಿ 1:30ರ ಸುಮಾರಿಗೆ ಆರೋಪಿಗಳನ್ನು ಮತ್ತು ದೆಹಲಿ ಪೊಲೀಸರನ್ನು ಎಸಿಜೆಎಂ ಏಕಾಂಶ್ ಕಪಿಲ್ ಅವರ ನಿವಾಸಕ್ಕೆ ಕರೆದೊಯ್ದಿದ್ದಾರೆ. ನ್ಯಾಯಾಲಯವು ದೆಹಲಿ ಪೊಲೀಸರಿಗೆ ಟ್ರಾನ್ಸಿಟ್ ರಿಮಾಂಡ್ (Transit Remand) ಮಂಜೂರು ಮಾಡಿದೆ. ಅಂದರೆ ಆರೋಪಿಗಳನ್ನು ಒಂದು ರಾಜ್ಯದಲ್ಲಿ ಬಂಧಿಸಿ, ಅಪರಾಧ ನಡೆದ ಬೇರೆ ರಾಜ್ಯದ ನ್ಯಾಯಾಲಯಕ್ಕೆ ಹಾಜರುಪಡಿಸಲು ದೆಹಲಿ ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್‌ನಿಂದ ತಾತ್ಕಾಲಿಕ ಅನುಮತಿ ಪಡೆದಿದ್ದಾರೆ. ಆದರೆ ಅದಾದ ಬಳಿಕವೂ ಅಪಹರಣ ಪ್ರಕರಣದ ವಿಚಾರಣೆಗಾಗಿ ಕೆಲ ದೆಹಲಿ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ಉಳಿಯುವಂತಾಗಿದೆ.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸದ್ಯ AI ಶೃಂಗಸಭೆಯ ಪ್ರತಿಭಟನೆ ಪ್ರಕರಣವು ದೆಹಲಿ vs ಹಿಮಾಚಲ ಪ್ರದೇಶ ಪೊಲೀಸ್ ನಡುವಿನ ವಾಗ್ವಾದವಾಗಿ ಬದಲಾಗಿದೆ. ಅಷ್ಟಕ್ಕೂ ಒಂದು ರಾಜ್ಯದ ಪೊಲೀಸರು ಮತ್ತೊಂದು ರಾಜ್ಯದ ಪೊಲೀಸರನ್ನು ಬಂಧಿಸಬಹುದೇ? ನಮ್ಮ ಕಾನೂನು ಏನು ಹೇಳುತ್ತದೆ?
ಒಂದು ರಾಜ್ಯದ ಪೊಲೀಸರು ಮತ್ತೊಂದು ರಾಜ್ಯದ ಪೊಲೀಸರನ್ನು ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಇದು ಕೆಲವು ಕಟ್ಟುನಿಟ್ಟಾದ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಹೊಂದಿದೆ. ಭಾರತೀಯ ಸಂವಿಧಾನದ ಪ್ರಕಾರ ‘ಪೊಲೀಸ್’ ರಾಜ್ಯ ಪಟ್ಟಿಗೆ (State List) ಸೇರಿರುವುದರಿಂದ, ಪ್ರತಿ ರಾಜ್ಯದ ಪೊಲೀಸರ ಅಧಿಕಾರ ವ್ಯಾಪ್ತಿ ಆಯಾ ರಾಜ್ಯಕ್ಕೆ ಸೀಮಿತವಾಗಿರುತ್ತದೆ.
ಅಷ್ಟಕ್ಕೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ಪೊಲೀಸ್ ಅಧಿಕಾರಿ ಅಪರಾಧ ಕೃತ್ಯದಲ್ಲಿ ತೊಡಗಿದ್ದರೆ ಅಥವಾ ಪೊಲೀಸ್ ಅಧಿಕಾರಿ ವಿರುದ್ಧ ಗಂಭೀರ ಆರೋಪಗಳಿದ್ದರೆ, ಮತ್ತೊಂದು ರಾಜ್ಯದ ಪೊಲೀಸರು ಬಂಧಿಸಬಹುದು. ಪೊಲೀಸರು ಎಂಬ ಕಾರಣಕ್ಕೆ ಬಂಧನದಿಂದ ಮುಕ್ತಿ ಪಡೆಯುವ ಯಾವುದೇ ‘ವಿನಾಯಿತಿ’ ಕಾನೂನಿನಲ್ಲಿ ಇಲ್ಲ. ಆದರೆ ಬಂಧನ ಮಾಡಬೇಕಾದರೆ ಕೆಲವು ಮಾರ್ಗಸೂಚಿಗಳೂ ಇವೆ.
ಸೆಕ್ಷನ್ 48 (CrPC) / ಸೆಕ್ಷನ್ 48 (BNSS) ಪ್ರಕಾರ ವಾರಂಟ್ ಇಲ್ಲದೆ ಬಂಧಿಸಲು ಅಧಿಕಾರ ಹೊಂದಿರುವ ಪೊಲೀಸ್ ಅಧಿಕಾರಿ, ಆರೋಪಿಯು ತಪ್ಪಿಸಿಕೊಂಡು ಹೋದರೆ ಅವನನ್ನು ಹಿಡಿಯಲು ಭಾರತದ ಯಾವುದೇ ಮೂಲೆಗಾದರೂ ಹೋಗಬಹುದು. ಆದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಮಾನ್ಯವಾಗಿ, ಒಂದು ರಾಜ್ಯದ ಪೊಲೀಸರು ಮತ್ತೊಂದು ರಾಜ್ಯಕ್ಕೆ ಹೋಗುವಾಗ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ನಿಯಮ. ಆದರೆ, ಆರೋಪಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದರೆ ಅಥವಾ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದರೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸಬಹುದು.
ಹಾಗೆಯೇ ಮತ್ತೊಂದು ರಾಜ್ಯದಲ್ಲಿ ಬಂಧಿಸಿದ 24 ಗಂಟೆಗಳ ಒಳಗೆ ಆರೋಪಿಯನ್ನು ಅಲ್ಲಿನ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ತಮ್ಮ ರಾಜ್ಯಕ್ಕೆ ಕರೆದೊಯ್ಯಲು ನ್ಯಾಯಾಲಯದಿಂದ ‘ಟ್ರಾನ್ಸಿಟ್ ರಿಮಾಂಡ್’ ಪಡೆಯುವುದು ಕಡ್ಡಾಯವಾಗಿದೆ. ಇತರ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರನ್ನು ಬಂಧಿಸುವುದಾದರೆ ಬಂಧಿಸಲು ಹೋದ ತಂಡವು ತಮ್ಮ ಗುರುತಿನ ಚೀಟಿ ಮತ್ತು ಸಮವಸ್ತ್ರವನ್ನು (ಅಗತ್ಯವಿದ್ದರೆ) ಹೊಂದಿರಬೇಕು. ಬಂಧನದ ಕಾರಣವನ್ನು ಲಿಖಿತವಾಗಿ ದಾಖಲಿಸಬೇಕು. ಬಂಧಿತ ವ್ಯಕ್ತಿಗೆ ತನ್ನ ವಕೀಲರನ್ನು ಅಥವಾ ಸಂಬಂಧಿಕರನ್ನು ಸಂಪರ್ಕಿಸಲು ಅವಕಾಶ ನೀಡಬೇಕು. ಆದರೆ ಸಾಮಾನ್ಯವಾಗಿಯೇ ಒಂದು ರಾಜ್ಯದ ಪೊಲೀಸರನ್ನು ಮತ್ತೊಂದು ರಾಜ್ಯದ ಪೊಲೀಸರು ಬಂಧಿಸಲು ಹೋದಾಗ ರಾಜಕೀಯ ಅಥವಾ ಆಡಳಿತಾತ್ಮಕ ಸಂಘರ್ಷಗಳು ಉಂಟಾಗುತ್ತವೆ. ಇಂತಹ ಸಮಯದಲ್ಲಿ ಸ್ಥಳೀಯ ಪೊಲೀಸರು ಸಹಕರಿಸದಿದ್ದರೆ ಅಥವಾ ಅಡ್ಡಿಪಡಿಸಿದರೆ, ಅದು ಕಾನೂನುಬಾಹಿರವಾಗುತ್ತದೆ.
ಇದೀಗ ದೆಹಲಿ ಪೊಲೀಸರು ಮತ್ತು ಹಿಮಾಚಲ ಪ್ರದೇಶ ಪೊಲೀಸರ ನಡುವೆ ವಾಗ್ವಾದಕ್ಕೆ, ಅಪಹರಣ ಪ್ರಕರಣ ದಾಖಲು, ಬಂಧನ ಮೊದಲಾದ ಹೈಡ್ರಾಮಾಕ್ಕೆ ಕಾರಣವಾಗಿದ್ದೂ ಈ ಕಡ್ಡಾಯ ನಿಯಮಗಳೇ. ಕಾನೂನು ಪ್ರಕಾರ ಒಂದು ರಾಜ್ಯದ ಪೊಲೀಸರು ಮತ್ತೊಂದು ರಾಜ್ಯಕ್ಕೆ ಹೋಗಿ ಯಾರನ್ನಾದರೂ ಬಂಧಿಸುವಾಗ ಸ್ಥಳೀಯ ಠಾಣೆಯ ಡೈರಿಯಲ್ಲಿ ನಮೂದಿಸಬೇಕು, ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದರೆ, ಅವರನ್ನು ‘ಅನಾಮಧೇಯ ಗುಂಪು’ ಎಂದು ಪರಿಗಣಿತಬಹುದಾಗಿದೆ ಮತ್ತು ಈ ಬಂಧನವನ್ನು ‘ಅಪಹರಣ’ ಎಂದು ಪರಿಗಣಿಸಲೂ ಬಹುದು. ಬಂಧಿಸಿದ ನಂತರ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೆ ನೇರವಾಗಿ ರಾಜ್ಯದ ಗಡಿ ದಾಟಿಸಲು ಪ್ರಯತ್ನಿಸಿದರೆ ಅದು ಕಾನೂನುಬಾಹಿರ. ಸ್ಥಳೀಯ ಪೊಲೀಸರು ಇತರೆ ರಾಜ್ಯದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ವಶಕ್ಕೆ ಪಡೆಯುವ ಅಧಿಕಾರವನ್ನೂ ಹೊಂದಿರುತ್ತಾರೆ. ಹಿಮಾಚಲ ಪ್ರದೇಶ ಪೊಲೀಸರು ಈ ಕಾನೂನನ್ನೇ ದೆಹಲಿ ಪೊಲೀಸರ ಮೇಲೆ ಪ್ರಯೋಗಿಸಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




