ಮಹಾರಾಷ್ಟ್ರ ರಾಜಕೀಯದಲ್ಲಿ ಠಾಕ್ರೆ ಕುಟುಂಬದ ಪ್ರಭಾವ ಇಂದಿಗೂ ಕಡಿಮೆಯಾಗಿಲ್ಲ. ನಾವು ಮನಸ್ಸು ಮಾಡಿದರೆ ಕೇವಲ 10 ನಿಮಿಷಗಳಲ್ಲಿ ಇಡೀ ಮುಂಬೈ ಮಹಾನಗರವನ್ನೇ ಬಂದ್ ಮಾಡಬಲ್ಲೆವು ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ಆದರೆ ರಾವತ್ ಅವರ ಈ ಹೇಳಿಕೆಯನ್ನು ತಳ್ಳಿಹಾಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್, ‘ಬಾಳಾಸಾಹೇಬರ ಕಾಲದಲ್ಲಿ ಮುಂಬೈ ಬಂದ್ ಮಾಡುವ ತಾಕತ್ತು ಶಿವಸೇನೆಗಿತ್ತು, ಆದರೆ ಈಗಿನವರಿಂದ ಅದು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಮುಂಬರುವ 2026ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೂ ಮುನ್ನ, ಸುಮಾರು 20 ವರ್ಷಗಳ ನಂತರ ಠಾಕ್ರೆ ಸಹೋದರರಾದ (ದಾಯಾದಿಗಳು) ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗುವ ಸೂಚನೆಗಳು ಸಿಗುತ್ತಿರುವ ಬೆನ್ನಲ್ಲೇ ಈ ವಾಕ್ಸಮರ ನಡೆದಿದೆ.
ಠಾಕ್ರೆಗಳನ್ನು ಮುಗಿಸಲು ಸಾಧ್ಯವಿಲ್ಲ:
ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜಯ್ ರಾವತ್, ಇತ್ತೀಚಿನ ಚುನಾವಣಾ ಹಿನ್ನಡೆಗಳ ಹೊರತಾಗಿಯೂ ರಾಜ್ಯ ರಾಜಕಾರಣದಲ್ಲಿ ಠಾಕ್ರೆ ಕುಟುಂಬಕ್ಕಿರುವ ಹಿಡಿತವನ್ನು ಸಮರ್ಥಿಸಿಕೊಂಡರು. “ಠಾಕ್ರೆಗಳನ್ನು ರಾಜಕೀಯವಾಗಿ ಎಂದಿಗೂ ಮುಗಿಸಲು ಸಾಧ್ಯವಿಲ್ಲ. ಮುಂಬೈ ಮೇಲೆ ನಮಗೆ ಈಗಲೂ ಹಿಡಿತವಿದ್ದು, ಹತ್ತು ನಿಮಿಷದಲ್ಲಿ ನಗರದ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಶಕ್ತಿ ನಮಗಿದೆ,” ಎಂದು ಅವರು ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಫಡ್ನವೀಸ್ ತಿರುಗೇಟು:
ರಾವತ್ ಅವರ ಹೇಳಿಕೆಗೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಫಡ್ನವೀಸ್, ಇದೊಂದು ‘ಟೊಳ್ಳು ಬೆದರಿಕೆ’ ಎಂದು ವ್ಯಂಗ್ಯವಾಡಿದರು. “ಏಕನಾಥ್ ಶಿಂಧೆ ಅವರನ್ನು ಮುಂಬೈಗೆ ಕಾಲಿಡಲು ಬಿಡುವುದಿಲ್ಲ ಎಂದು ಇವರು ಹೇಳುತ್ತಿದ್ದರು. ಆದರೆ ಶಿಂಧೆ 50 ಶಾಸಕರೊಂದಿಗೆ ಬಂದು, ರಾಜಭವನಕ್ಕೆ ತೆರಳಿ ಸರ್ಕಾರವನ್ನೇ ರಚಿಸಿದರು. ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರು ಬದುಕಿದ್ದಾಗ ಮುಂಬೈ ಬಂದ್ ಮಾಡುವ ಶಕ್ತಿ ಪಕ್ಷಕ್ಕಿತ್ತು. ಆದರೆ ಈಗಿನ ನಾಯಕರಿಗೆ ಆ ಸಾಮರ್ಥ್ಯವಿಲ್ಲ,” ಎಂದು ಫಡ್ನವೀಸ್ ಹೇಳಿದರು.
ಸಹೋದರರ ಸವಾಲ್ ಮತ್ತು ಹೊಂದಾಣಿಕೆ:
ಉದ್ಧವ್ ಮತ್ತು ರಾಜ್ ಠಾಕ್ರೆ ಅವರ ಒಂದಾಗಿರುವ ಕುರಿತು ಮಾತನಾಡಿದ ರಾವತ್, ಹಿಂದೆ ಕಾಂಗ್ರೆಸ್ ಜೊತೆಗೂ ಶಿವಸೇನೆ ಕೈಜೋಡಿಸಿತ್ತು. ಸಿದ್ಧಾಂತಗಳು ಬೇರೆ ಇರಬಹುದು, ಆದರೆ ದೇಶದ ಹಿತದೃಷ್ಟಿಯಿಂದ ಹಾಗೂ ದ್ವೇಷದ ರಾಜಕಾರಣವನ್ನು ತಡೆಯಲು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.





