- ವಕೀಲ ರಾಜೇಶ್ ಜೋಶಿಯಿಂದ ದಿಗ್ವಿಜಯ್ ಸಿಂಗ್ ವಿರುದ್ಧ ದೂರು
- ಆರ್‌ಎಸ್‌ಎಸ್‌ನಲ್ಲಿ ಸುದೀರ್ಘ ಅವಧಿಯವರೆಗೆ ಗೋಲ್ವಾಲ್ಕರ್ ಸೇವೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥರಾಗಿದ್ದ ಎಂ ಎಸ್ ಗೋಲ್ವಾಲ್ಕರ್ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ (ಜುಲೈ 9) ಹೇಳಿದ್ದಾರೆ.
ದಿಗ್ವಿಜಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಗೋಲ್ವಾಲ್ಕರ್ ಕುರಿತು ವಿವಾದಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಈ ಸಂಬಂಧ ಸಂಘದ ಕಾರ್ಯಕರ್ತ ಹಾಗೂ ವಕೀಲ ರಾಜೇಶ್ ಜೋಶಿ ಎಂಬುವವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಶನಿವಾರ ರಾತ್ರಿ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತುವುದು), 500 (ಮಾನಹಾನಿ) ಮತ್ತು 505ಗಳಡಿ (ಸಾರ್ಜನಿಕ ಸ್ಥಳ ದುರ್ಬಳಕೆ) ಪ್ರಕರಣ ದಾಖಲಾಗಿದೆ.
ದಿಗ್ವಿಜಯ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಗೋಲ್ವಾಲ್ಕರ್ ವಿರುದ್ಧ ಹೆಸರು ಮತ್ತು ಗುರೂಜಿ ಎಂದು ಕರೆಯಲ್ಪಡುವ ಗೋಲ್ವಾಲ್ಕರ್ ಚಿತ್ರವುಳ್ಳ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
ಈ ಪೋಸ್ಟ್‌ನಿಂದ ದಲಿತರು, ಹಿಂದುಳಿದ ವರ್ಗ, ಮುಸ್ಲಿಂ ಹಾಗೂ ಹಿಂದೂಗಳ ನಡುವೆ ಪರಸ್ಪರ ದ್ವೇಷ ಭಾವನೆ ಮೂಡಲಿದೆ. ಜತೆಗೆ ಹಿಂದೂಗಳ ಭಾವನೆಗೆ ಮತ್ತು ಅರ್ಎಸ್ಎಸ್‌ನ ಕಾರ್ಯಕರ್ತರ ನಂಬಿಕೆಗಳಿಗೆ ಧಕ್ಕೆ ತಂದಿದೆ ಎಂದು ರಾಜೇಶ್ ಜೋಶಿ ಮಧ್ಯಪ್ರದೇಶ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದಿಗ್ವಿಜಯ್ ಅವರ ಗೋಲ್ವಾಲ್ಕರ್ ಕುರಿತ ಪೋಸ್ಟ್ ಅನ್ನು ಆರ್‌ಎಸ್‌ಎಸ್‌ನ ಸ್ಥಳೀಯ ಅಧಿಕಾರಿಯೊಬ್ಬರು ಖಂಡಿಸಿದ್ದು, “ಸಂಘದ ಘನತೆಗೆ ಕುಂದು ತರಲು ಗೋಲ್ವಾಲ್ಕರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯ ಪೋಸ್ಟ್ ಹಂಚಿಕೆಯಾಗಿದೆ” ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.
ಗುರೂಜಿ ಎಂದು ಕರೆಯಲ್‌ಪಡುತ್ತಿದ್ದ ಗೋಲ್ವಾಲ್ಕರ್ ಅವರ ಕುರಿತು ವಿವಾದಾತ್ಮಕ ಹೇಳಿಕೆಗಳುಳ್ಳ ಒಂದು ಪುಟದ ಚಿತ್ರವನ್ನು ಶನಿವಾರ ದಿಗ್ವಿಜಯ್ ಸಿಂಗ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶನಿವಾರ ಹಂಚಿಕೊಂಡಿದ್ದರು.
“ದಲಿತರು, ಹಿಂದುಳಿದವರ್ಗ, ಮುಸ್ಲಿಮರಿಗೆ ಸಮಾನ ಹಕ್ಕು ನೀಡುವ ಬದಲು ಬ್ರಿಟಿಷ್ ಆಡಳಿತದಲ್ಲಿ ಇರುವುದೇ ಲೇಸು” ಎಂದು ಗೋಲ್ವಾಲ್ಕರ್ ಹೇಳಿದ್ದರು ಎಂಬ ಮಾಹಿತಿಯ ಪೋಸ್ಟ್ ಅನ್ನು ದಿಗ್ವಿಜಯ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ₹ 6,100 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಚಾಲನೆ, ಕೆಸಿಆರ್ ವಿರುದ್ಧ ವಾಗ್ದಾಳಿ
ಈ ಹೇಳಿಕೆಗೆ ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. “ಆಧಾರ ರಹಿತ ಹೇಳಿಕೆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ದಿಗ್ವಿಜಯ್ ಕದಡುತ್ತಿದ್ದಾರೆ. ಸಮಾಜವನ್ನು ಒಡೆಯುವ ಇಂಥ ಹೇಳಿಕೆಗಳನ್ನು ‘ಗುರೂಜಿ’ (ಗೋಲ್ವಾಲ್ಕರ್) ಎಂದೂ ನೀಡಿಲ್ಲ.
ಗೋಲ್ವಾಲ್ಕರ್ ಅವರು 1940 ರಿಂದ 1973ರವರೆಗೆ ಸುದೀರ್ಘ ಅವಧಿಯವರೆಗೆ ಆರ್‌ಎಸ್‌ಎಸ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.





