ಪಹಲ್ಗಾಮ್ ದಾಳಿ ಬೆನ್ನಲ್ಲೇ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ವಿರುದ್ಧ ದೂರು ದಾಖಲಾಗಿದೆ. ರಾಹುಲ್ ಗಾಂಧಿ ಬಗ್ಗೆ ಸುಳ್ಳು ಸುದ್ದಿಯನ್ನು ಕರ್ನಾಟಕ ಬಿಜೆಪಿ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹರಡುತ್ತಿದೆ ಎಂದು ಕಾಂಗ್ರೆಸ್ ದೂರು ನೀಡಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಕನ್ನಡಿಗರು ಸೇರಿದಂತೆ ಒಟ್ಟು 28 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಕರ್ನಾಟಕ ಬಿಜೆಪಿ, “ರಾಹುಲ್ ಗಾಂಧಿ ದೇಶದಿಂದ ಹೊರ ಹೋದಾಗಲೆಲ್ಲಾ ಇಲ್ಲಿ ಏನಾದರೂ ಕೆಟ್ಟಲು ಸಂಭವಿಸುತ್ತದೆ” ಎಂದು ಬರೆದುಕೊಂಡಿದೆ. ಈ ಪೋಸ್ಟ್ ವಿವಾದಕ್ಕೀಡಾಗುತ್ತಿದ್ದಂತೆ ಡಿಲೀಟ್ ಮಾಡಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಮೂವರು ಭಯೋತ್ಪಾದಕರ ರೇಖಾಚಿತ್ರ ಬಿಡುಗಡೆ
ಈ ಪೋಸ್ಟ್ ಮಾಡಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ, ಮಾನವ ಹಕ್ಕುಗಳ ಘಟಕದ ಚೇರಮನ್ ಸಿ.ಎಂ ಧನಂಜಯ ಅವರು ದೂರು ನೀಡಿದ್ದಾರೆ. “ಪ್ರತಿ ಬಾರಿಯೂ ರಾಹುಲ್ ಹೊರದೇಶಕ್ಕೆ ಹೋದಾಗ ಇಂತಹ ಕೃತ್ಯಗಳು ಸಂಭವಿಸುತ್ತದೆ ಎಂದು ಬಿಜೆಪಿ ಪೋಸ್ಟ್ ಮಾಡಿದೆ. ಇದರಿಂದ ಸಮಾಜದಲ್ಲಿ ಶಾಂತಿ-ಸುವರ್ಧತೆ ಹಾಳಾಗಿ, ಸಮಾಜದಲ್ಲಿ ಗುಂಪುಗಳ ನಡುವೆ ಘರ್ಷಣೆಯನ್ನು ಉಂಟು ಮಾಡುವ ಉದ್ದೇಶದಿಂದ ಕೂಡಿರುತ್ತದೆ” ಎಂದು ದೂರಿನಲ್ಲಿ ಹೇಳಲಾಗಿದೆ.
“ರಾಹುಲ್ ಗಾಂಧಿಯವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಅವಹೇಳನಕಾರಿ ಪೋಸ್ಟ್ ಅನ್ನು ಹಾಕಿರುವ ಬಿಜೆಪಿ ಕರ್ನಾಟಕ ಐ.ಟಿ & ಸೋಷಿಯಲ್ ಮೀಡಿಯಾ ಎಂಬ ‘ಎಕ್ಸ್’ ಖಾತೆಯ ಮುಖ್ಯಸ್ಥರು ಮತ್ತು ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.





