ದಲಿತ ಯುವಕನ ಮದುವೆ ಮೆರವಣಿಗೆಯಲ್ಲಿ ಡಿಜೆ ಮ್ಯೂಸಿಕ್ ಹಾಕಿದ್ದಕ್ಕೆ ದಲಿತರ ಮೇಲೆ ಪ್ರಬಲ ಜಾತಿಯ ದುರುಳರ ಗುಂಪು ದಾಳಿ ನಡೆಸಿ, ಕಲ್ಲು ತೂರಾಟ ಡನೆಸಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸುನಾನಾ ಗ್ರಾಮದಲ್ಲಿ ಬುಧವಾರ ರಾತ್ರಿ ದಲಿತ ವರನ ಮೆರವಣಿಗೆ ನಡೆಸಲಾಗುತ್ತಿತ್ತು. ಮೆರವಣಿಗೆಯಲ್ಲಿ ಡಿಜೆ ಮ್ಯೂಸಿಕ್ ಹಾಕಲಾಗಿತ್ತು. ಈ ವೇಳೆ, ಜಾತಿ ಆಧಾರಿತ ಮತ್ತು ಆಕ್ಷೇಪಾರ್ಹ ಹಾಡನ್ನು ಹಾಕಲಾಗಿದೆ ಎಂದು ಆರೋಪಿಸಿ ಪ್ರಬಲ ಜಾತಿಗೆ ಸೇರಿದ ಗುಂಪು ದಾಂಧಲೆ ನಡೆಸಿದೆ. ಕೆಲವೇ ಕ್ಷಣಗಳಲ್ಲಿ ಗಲಾಟೆಯು ಹಿಂಸಾಚಾರಕ್ಕೆ ತಿರುಗಿದೆ. ಎರಡೂ ಸಮುದಾಯದವರು ಕೋಲು ಮತ್ತು ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಮೃಗಾಂಕ್ ಶೇಖರ್ ಪಾಠಕ್, “ಬರಾತ್‌ನ (ಮೆರವಣಿಗೆ) ಸದಸ್ಯರೊಬ್ಬರು ಜಾತಿ ಆಧಾರಿತ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಹಾಡನ್ನು ಹಾಕಿದಾಗ, ಅಲ್ಲಿದ್ದ ಇತರರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ತಲುಪಿ, ಎರಡೂ ಕಡೆಯವರನ್ನು ಸಮಾಧಾನಪಡಿಸಿ, ಮೆರವಣಿಗೆಗೆ ಭದ್ರತೆ ಒದಗಿಸಿದರು” ಎಂದು ತಿಳಿಸಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಘನಶ್ಯಾಮ್ ಸಿಂಗ್, “ಮೆರವಣಿಗೆಯಲ್ಲಿ ಹಾಕಿದ್ದ ಹಾಡು ಆಕ್ಷೇಪಾರ್ಹವಾಗಿತ್ತು ಎಂಬುದಾಗಿ ಕೆಲವರು ವಾದಿಸಿದ್ದಾರೆ. ಕೆಲವು ಅಪರಿಚಿತ ವ್ಯಕ್ತಿಗಳು ಪರಸ್ಪರ ದಾಳಿ ಮಾಡಿದರು, ಪರಸ್ಪರ ನಿಂದಿಸಿದರು, ಕೋಲುಗಳನ್ನು ಬಳಸಿದರು. ಹತ್ತಿರದ ಮನೆಗಳನ್ನು ಸಹ ಧ್ವಂಸಗೊಳಿಸಲಾಯಿತು. ಈ ಘಟನೆಯು ಭೀತಿಯನ್ನು ಸೃಷ್ಟಿಸಿತು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡಿತು” ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಲಾಗಿದ್ದು, ತನಿಖೆಗಾಗಿ ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿ ಮತ್ತು ಆಡಿಯೋ ಟ್ರ್ಯಾಕ್ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಜ್ಯ ಬಜೆಟ್ | ಯಾಲಕ್ಕಿ ನಾಡು ಹಾವೇರಿಯ ನಿರೀಕ್ಷೆಗಳೇನು?
“ಮೆರವಣಿಗೆಯ ಮೇಲೆ ಪ್ರಚೋದನೆಯಿಲ್ಲದೆ ದಾಳಿ ಮಾಡಲಾಗಿದೆ. ಹರಿತವಾದ ಆಯುಧಗಳನ್ನು ಹೊಂದಿದ್ದ ದುಷ್ಕರ್ಮಿಗಳು ಬರಾತ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಪೊಲೀಸರ ಮಧ್ಯಪ್ರವೇಶಿಕೆಯಿಂದಾಗಿ ಮದುವೆ ಮುಂದುವರಿಯಲು ಸಾಧ್ಯವಾಯಿತು” ಎಂದು ವಧುವಿನ ಸಹೋದರ ಅನೀಸ್ ಕುಮಾರ್ ಹೇಳಿದ್ದಾರೆ.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್ ಈ ಘಟನೆಯನ್ನು ಖಂಡಿಸಿದ್ದಾರೆ. ಮೆರವಣಿಗೆಯ ಮೇಲೆ ಕೋಲುಗಳು ಮತ್ತು ಇತರ ಆಯುಧಗಳಿಂದ ದಾಳಿ ಮಾಡಲಾಗಿದೆ, ಜಾತಿವಾದಿ ನಿಂದನೆಗಳನ್ನು ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಗ್ರಾಮದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತಿಯುತವಾಗಿದ್ದು, ಘರ್ಷಣೆಯಲ್ಲಿ ಭಾಗಿಯಾದವರನ್ನು ಗುರುತಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




