ದಲಿತ ಸಮುದಾಯದ 16 ವರ್ಷದ ಬಾಲಕನನನ್ನು ಐವರು ಪ್ರಬಲ ಜಾತಿಯ ದುರುಳರು ಅಪಹರಿಸಿ, ವಿವಸ್ತ್ರಗೊಳಿಸಿ, ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಕ್ಯಾಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂತ್ರಸ್ತ ಬಾಲಕ ಮತ್ತು ಆರೋಪಿಗಳ ನಡುವೆ ವಾಗ್ವಾದ ನಡೆದಿತ್ತು. ಅದೇ ಕಾರಣಕ್ಕೆ, ಬಾಲಕನನ್ನು ಆರೋಪಿಗಳು ಅಪಹರಿಸಿ, ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕ ಕ್ಯಾಂಟ್ ಪ್ರದೇಶದ ವಾಲ್ಮೀಕಿ ಮೊಹಲ್ಲಾದ ನಿವಾಸಿಯಾಗಿದ್ದಾರೆ. ಸಂತ್ರಸ್ತನ ತಾಯಿ ಆರತಿ ದೇವಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಬಾಲಕ ತಮ್ಮ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಮುಕುಲ್ ಯಾದವ್, ಸುಭಾಷ್ ಯಾದವ್ ಅಲಿಯಾಸ್ ಎಡಿ, ಸುಲ್ತಾನ್, ಆಯುಷ್ ಮತ್ತು ಬಸು – ಮೋಟಾರ್ ಸೈಕಲ್‌ನಲ್ಲಿ ಬಂದು ಆತನನ್ನು ಅಪಹರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಆರೋಪಿಗಳು ಬಾಲಕನನ್ನು ನಿರ್ಜನ ಸ್ಥಳಕ್ಕೆ ಎಳೆದೊಯ್ದಿದ್ದಾರೆ. ಅಲ್ಲಿ ಆರೋಪಿಗಳು ದೇಶೀಯ ನಿರ್ಮಿತ ಪಿಸ್ತೂಲ್ ಮತ್ತು ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಆತನನ್ನು ವಿವಸ್ತ್ರಗೊಳಿಸಿ ನಿರ್ದಯವಾಗಿ ಥಳಿಸಿದ್ದಾರೆ. ಅಲ್ಲದೆ, ಇಡೀ ಕೃತ್ಯವನ್ನು ಚಿತ್ರೀಕರಿಸಿಕೊಂಡು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಹಸಿರು ಉಸಿರು ಕಸಿದ ‘ವಿಕಾಸ’: ಅದಾನಿ ಸಾಮ್ರಾಜ್ಯ ವಿಸ್ತರಣೆಗೆ ಬಲಿಯಾಗುತ್ತಿರುವ ಅರಣ್ಯ ಮತ್ತು ಪ್ರಜಾಪ್ರಭುತ್ವ
ಸಂತ್ರಸ್ತನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಐವರು ಆರೋಪಿಗಳ ವಿರುದ್ಧ ಬಿಎನ್‌ಎಸ್ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನುಷ್ ಪರೀಕ್ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ, “ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂತ್ರಸ್ತ ಬಾಲಕ ಮತ್ತು ಮುಕುಲ್ ಯಾದವ್ ನಡುವೆ ನಡೆದ ಸಣ್ಣ ವಿವಾದವೇ ಹಲ್ಲೆ ಕಾರಣವಾಗಿದೆ. ಜನವರಿ 15 ರೊಳಗೆ ಯಾದವ್ ಬಾಲಕನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ತಿಳಿದುಬಂದಿದೆ” ಎಂದು ಎಸ್‌ಪಿ ತಿಳಿಸಿದ್ದಾರೆ.
ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನಕ್ಕಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.




