ದೇಶದಲ್ಲಿ ಬ್ರಾಹ್ಮಣೇತರ ಸಮುದಾಯಗಳಾದ ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆ ಜಾತಿ ದೌರ್ಜನ್ಯಗಳು ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ, ಬೆಳಕಿಗೆ ಬರುತ್ತಿದೆ. ಕುದುರೆ ಸವಾರಿ ಮಾಡಿದ್ದಕ್ಕೆ, ಅದ್ದೂರಿಯಾಗಿ ವಿವಾಹವಾಗಿದ್ದಕ್ಕೆ ಹೀಗೆ ಕ್ಷುಲ್ಲಕ ಕಾರಣಕ್ಕೆ ಜಾತಿ ದೌರ್ಜನ್ಯ ನಡೆಯುತ್ತಿದೆ. ಇಂತಹುದ್ದೇ ಘಟನೆಯೊಂದು ಇತ್ತೀಚೆಗೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಯುವಕ ಜುಟ್ಟು ಬಿಟ್ಟಿದ್ದಕ್ಕೆ “ನೀನು ಗೊಲ್ಲ, ಜುಟ್ಟು ಬಿಡುವ ಹಕ್ಕು ನಿನಗಿಲ್ಲ” ಎಂದು ಹೇಳಿ ಬ್ರಾಹ್ಮಣನೋರ್ವ ಜುಟ್ಟು ಕತ್ತರಿಸಿದ್ದಾನೆ.
ದೀಪಕ್ ಪಾಂಡೆ ಎಂಬ ಬ್ರಾಹ್ಮಣ ಯುವಕ ತನ್ನ ಮೇಲೆ ಹಲ್ಲೆ ನಡೆಸಿ ತಾನು ಸುಮಾರು ಏಳು ವರ್ಷಗಳಿಂದ ಬೆಳೆಸಿದ್ದ 12 ಇಂಚು ಉದ್ದದ ಜುಟ್ಟನ್ನು ಬಲವಂತವಾಗಿ ಕತ್ತರಿಸಿದ್ದಾನೆ ಎಂದು ರೇವಾ ಜಿಲ್ಲೆಯ ಮಝಿಗವಾನ್ ಗ್ರಾಮದ ನಿವಾಸಿ ರೋಹಿತ್ ಯಾದವ್ ಆರೋಪಿಸಿದ್ದಾರೆ. ಪೊಲೀಸರು ಸದ್ಯ ದೂರು ದಾಖಲಿಸಿದ್ದು, ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಮೂತ್ರ ವಿಸರ್ಜಿಸಿ ವಿಕೃತಿ
“ನಾನು ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿರುವವನು, ಹನುಮಂತ ದೇವರನ್ನು ಭಕ್ತಿಯನ್ನು ಹೊಂದಿರುವವನು. ಈ ಭಕ್ತಿಯಿಂದ ಏಳು ವರ್ಷಗಳಿಂದ ಜುಟ್ಟು ಇಟ್ಟುಕೊಂಡಿದ್ದೇನೆ. ಆದರೆ ನಾನು ಬ್ರಾಹ್ಮಣನಲ್ಲದ ಕಾರಣ ಜುಟ್ಟು ಇಟ್ಟುಕೊಳ್ಳುವ ಹಕ್ಕಿಲ್ಲ ಎಂದು ಹೇಳಿ ನಿಂದಿಸಿ ಥಳಿಸಿ ಜುಟ್ಟು ಕತ್ತರಿಸಲಾಗಿದೆ” ಎಂದು ರೋಹಿತ್ ಯಾದವ್ ಹೇಳಿದ್ದಾನೆ.
ಅಷ್ಟು ಮಾತ್ರವಲ್ಲದೆ ಆರೋಪಿ ಪಾಂಡೆ, “ಇಂದು ನೀನು ಜುಟ್ಟು ಬೆಳೆಸುತ್ತಿ. ನಾಳೆ ನೀನು ಹರಿಕಥೆಯನ್ನೂ ಮಾಡಲ್ಲ ಎಂಬುದಕ್ಕೆ ಖಾತ್ರಿ ಏನು?” ಎಂದು ಹೇಳಿ ರೋಹಿತ್ ಮೇಲೆ ಕಾಲಿಟ್ಟು ಜುಟ್ಟು ಎಳೆದು ಥಳಿಸಲಾಗಿದೆ. ಇನ್ನು “ಘಟನೆ ನಂತರವೂ ಪಾಂಡೆ ನನಗೆ ಬೆದರಿಕೆ ಹಾಕುತ್ತಿದ್ದಾನೆ. ನನ್ನನ್ನು ಜೀವಂತವಾಗಿ ಸುಟ್ಟುಹಾಕುವುದಾಗಿ ಹೇಳುತ್ತಿದ್ದಾನೆ. ತನ್ನ ಪ್ರಭಾವ ಬಳಸಿ ವೈದ್ಯರು ಮತ್ತು ಪೊಲೀಸರ ಬಳಿ ದಾಖಲೆಗಳನ್ನು ನಾಶ ಮಾಡಿಸುವುದಾಗಿ ಹೇಳಿದ್ದಾರೆ. ಪಾಂಡೆ ವಿರುದ್ಧ ಈಗಾಗಲೇ ಬೇರೊಂದು ಕ್ರಿಮಿನಲ್ ಪ್ರಕರಣವಿದೆ. ಆದರೆ ಈವರೆಗೂ ಆತನಿಗೆ ಶಿಕ್ಷೆಯಾಗಿಲ್ಲ” ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ದೂರು ದಾಖಲಿಸದ ಪೊಲೀಸರು
ರೋಹಿತ್ ದೂರು ದಾಖಲಿಸಲು ಬೈಕುಂತ್‌ಪುರ ಪೊಲೀಸ್ ಠಾಣೆಗೆ ಹೋಗಿದ್ದು ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. “ಜುಟ್ಟನ್ನು ಕಸದ ಬುಟ್ಟಿಗೆ ಎಸೆ” ಎಂದಿದ್ದಾರೆ. ಇದನ್ನು ರೋಹಿತ್ ವಿರೋಧಿಸಿದ್ದು, ಸಾಕ್ಷ್ಯಕ್ಕಾಗಿ ಜುಟ್ಟನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಮಾಡಿ ಸವರ್ಣಿಯರ ವಿಕೃತಿ
ಇನ್ನು ರೋಹಿತ್ ದೂರು ದಾಖಲಿಸಿದ ಬಳಿಕ ಅವರ ಕುಟುಂಬವು ಸುರಕ್ಷತೆಯ ದೃಷ್ಟಿಯಿಂದ ಮಝಿಗವಾನ್ ಗ್ರಾಮದಿಂದ 20 ಕಿ.ಮೀ ದೂರದಲ್ಲಿರುವ ಕ್ಯೋಂಟಿ ಗ್ರಾಮಕ್ಕೆ ಸ್ಥಳಾಂತರಗೊಂಡಿದೆ. ಕಠಿಣ ಪೊಲೀಸ್ ಕ್ರಮ ಕೈಗೊಳ್ಳದಿದ್ದರೆ ತಮ್ಮ ಮೇಲೆ ಮತ್ತೆ ಹಲ್ಲೆಯಾಗುವ, ಜೀವಕ್ಕೆ ಅಪಾಯವಾಗುವ ಆತಂಕದಲ್ಲಿ ರೋಹಿತ್ ಇದ್ದಾರೆ.
ಇನ್ನು ಮಝಿಗವಾನ್ ಸರ್ಪಂಚ್ ರಾಹುಲ್ ಸಿಂಗ್ ಈ ಘಟನೆಯನ್ನು ಖಂಡಿಸಿದ್ದು “ಇದು ನಾಚಿಕೆಗೇಡಿನ ಘಟನೆ. ಈ ರೀತಿ ಮತ್ತೆ ನಡೆದರೆ ಪಾಂಡೆ ಮತ್ತು ಆತನ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಪೊಲೀಸರು ಆರೋಪಿ ಮೆಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯ ಒಬಿಸಿ, ದಲಿತ ಸಮುದಾಯವೇ ಅಧಿಕವಾಗಿರುವ ಮಝಿಗವಾನ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಬ್ರಾಹ್ಮಣ ಯುವಕನ ವಿರುದ್ಧ ಆಕ್ರೋಶಗೊಂಡಿದ್ದು ಊರಿನಿಂದ ಬಹಿಷ್ಕರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ಯಾದವ ಸಮುದಾಯವು ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಯಾದವ ಸಮುದಾಯದವರು ದಲಿತರ ಮೇಲೆ ಹಲ್ಲೆ ಜಾತಿ ದೌರ್ಜನ್ಯ ಎಸಗುತ್ತಾರೆ, ಯಾದವರ ಮೇಲೆ ಬ್ರಾಹ್ಮಣರು ಜಾತಿ ದಬ್ಬಾಳಿಕೆ ನಡೆಸುತ್ತಾರೆ. ಒಟ್ಟಿನಲ್ಲಿ ಹಿಂದೂ ನಾವೆಲ್ಲ ಒಂದು ಎಂಬುದು ರಾಜಕೀಯ ಘೋಷಣೆಯಷ್ಟೇ. ಬ್ರಾಹ್ಮಣ ಸಮುದಾಯದ ಕೆಲವರ ಪ್ರಕಾರ ಇತರ ಜಾತಿಯವರು ಹಿಂದೂಗಳಲ್ಲ” ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.





