ಗುರುವಾರ ಪ್ರಕಟವಾಗಬೇಕಿದ್ದ ಕೇಂದ್ರ ಸಾಹಿತ್ಯ ಅಕಾದೆಮಿಯ ಈ ವರ್ಷದ ಪ್ರಶಸ್ತಿಯನ್ನು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ತಡೆಹಿಡಿದಿದೆ. ಇದರೊಂದಿಗೆ ಅಕಾದೆಮಿಗಳಿಗಿದ್ದ ಸ್ವಾಯತ್ತ ಸ್ಥಾನಮಾನ ಇನ್ನು ಮುಂದೆ ಇರುವುದಿಲ್ಲ ಎನ್ನುವುದು ಖಚಿತವಾಗಿದೆ. ಅಧಿಕಾರ ಹಿಡಿದಿರುವ ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ತನ್ನ ಹಿಡಿತ ಸಾಧಿಸಿ, ಆ ಮೂಲಕ ತನ್ನ ಹಿಂದುತ್ವದ ಅಜೆಂಡಾವನ್ನು ಹೇರಲು ಯತ್ನಿಸುತ್ತಿದೆ. ಬಿಜೆಪಿ ಸರ್ಕಾರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳನ್ನು ತಮ್ಮ ಅಜೆಂಡಾದ ಒಳಕ್ಕೆ ತರಲು ಪ್ರಯತ್ನ ನಡೆಸುತ್ತಿದೆ. ದೇಶದ ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು ಚಲನಚಿತ್ರ ನಿರ್ದೇಶಕರು, ಈ ಬೆಳವಣಿಗೆಯ ಬಗ್ಗೆ ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದನ್ನು ಯಾಕೆ ಅವರೆಲ್ಲ ಸೇರಿ ಪ್ರತಿಭಟಿಸುತ್ತಿಲ್ಲ. ಮೌನವಾಗಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.
ಗುರುವಾರ ದೆಹಲಿಯ ಕೇಂದ್ರ ಸಾಹಿತ್ಯ ಅಕಾದೆಮಿಯಲ್ಲಿ ಮಧ್ಯಾಹ್ನ ಮೂರು ಗಂಟೆ ವೇಳೆಗೆ ವಾರ್ಷಿಕ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಿಸುವ ಕಾರ್ಯಕ್ರಮವಿತ್ತು.
ಕೇಂದ್ರ ಸಾಹಿತ್ಯ ಅಕಾದೆಮಿ ಪ್ರತಿವರ್ಷ ದೇಶದ 24 ಭಾಷೆಗಳಲ್ಲಿನ ಉತ್ತಮ ಕೃತಿಗಳಿಗೆ ಪ್ರಶಸ್ತಿಗಳನ್ನು ನೀಡುತ್ತದೆ. ಇದಕ್ಕೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆ ಕೂಡ ಪತ್ರಿಕಾ ಕಚೇರಿಗಳನ್ನು ತಲುಪಿತ್ತು. ಆದರೆ ಈ ಪ್ರಶಸ್ತಿಯನ್ನು ವರದಿ ಮಾಡಲು ತಲುಪಿದ ಪತ್ರಕರ್ತರಿಗೆ ನಿರಾಸೆ ಕಾದಿತ್ತು. ಇದ್ದಕ್ಕಿದ್ದಂತೆ ಪತ್ರಿಕಾಗೋಷ್ಠಿ ರದ್ದಾಯಿತು. ದೇಶಾದ್ಯಂತ ಪ್ರಶಸ್ತಿಯನ್ನು ನಿರೀಕ್ಷಿಸುತ್ತಿದ್ದ ಮಂದಿಗೂ ನಿರಾಸೆಯಾಯಿತು. ಇದಕ್ಕೆ ಕಾರಣ ಕೇಳಿದಾಗ ದೊರೆತ ಉತ್ತರ; ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ನಿರ್ದೇಶನದ ಮೇರೆಗೆ ಈ ಪ್ರಶಸ್ತಿ ಪ್ರಕಟಣೆಯನ್ನು ತಡೆಹಿಡಿಯಲಾಗಿದೆ. ಎಂಬಷ್ಟು ಮಾತ್ರ.
ತಡೆ ಹಿಡಿದ ಪ್ರಶಸ್ತಿ ಪ್ರಕಟಣೆ
ಈ ವೇಳೆಗೆ ಕೇಂದ್ರ ಸಾಹಿತ್ಯ ಅಕಾದೆಮಿಯ ಕಾರ್ಯಕಾರಿ ಮಂಡಳಿ ಸಭೆ ಸೇರಿ, ಪ್ರಶಸ್ತಿಗಳನ್ನು ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕೆಲವೇ ಕ್ಷಣಗಳ ಮುನ್ನ ಬಂದ ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ನಿರ್ದೇಶನದ ಆಧಾರದಲ್ಲಿ ಪ್ರಶಸ್ತಿ ಪ್ರಕಟಣೆಯನ್ನು ಸದ್ಯಕ್ಕೆ ತಡೆಹಿಡಿಯಲಾಯಿತು.
ಕೇಂದ್ರ ಸಾಹಿತ್ಯ ಅಕಾದೆಮಿಯ ಮೂಲಗಳ ಪ್ರಕಾರ, ಕೇಂದ್ರ ಸಾಂಸ್ಕೃತಿಕ ಸಚಿವಾಲಯವು ಈ ಸ್ವಾಯತ್ತ ಸಾಂಸ್ಕೃತಿಕ ಅಕಾದೆಮಿಗಳಿಗೆ ಟಿಪ್ಪಣಿಯೊಂದನ್ನು ಕಳುಹಿಸಿ, ಈ ಅಕಾದೆಮಿಗಳು ರಾಷ್ಟ್ರೀಯ ನಾಟಕ ಶಾಲೆ (National School of Drama), ಸಂಗೀತ ನಾಟಕ ಅಕಾದೆಮಿ (Sangeet Natak Akademyi) ಲಲಿತ ಕಲಾ ಅಕಾದೆಮಿ (Lalit Kala Akademi) ಹಾಗೂ ಸಾಹಿತ್ಯ ಅಕಾದೆಮಿ (Kendra Sahitya Akademi) ಗಳೊಂದಿಗೆ ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಈ ಅಕಾದೆಮಿಗಳು ನೀಡುವ ಪ್ರಶಸ್ತಿಯ ಮಾನದಂಡಗಳನ್ನು ಪುನರ್ ರಚನೆ (reconstruction) ಯನ್ನು ಕೇಂದ್ರ ಸಾಂಸ್ಕೃತಿಕ ಸಹಯೋಗದೊಂದಿಗೆ ಚರ್ಚಿಸಿ ಮಾಡಬೇಕೆಂದು ಜುಲೈ ತಿಂಗಳಲ್ಲಿ ಆಗಿರುವ ಒಡಂಬಡಿಕೆ ಒಪ್ಪಂದ (Memorandum of Understanding) ವನ್ನು ನೆನಪಿಸಿ, ಈ ತೀರ್ಮಾನವನ್ನು ಪ್ರಕಟಿಸಿದೆ ಎಂದು ತಿಳಿಸಿದೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಟಿಪ್ಪಣಿ
“2025-2026ರ ಸಂದರ್ಭದಲ್ಲಿ ಅಕಾದೆಮಿ ಮತ್ತು ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ನಡುವೆ ಆಗಿರುವ ಒಡಂಬಡಿಕೆ ಒಪ್ಪಂದದ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇವೆ. ಆ ಒಡಂಬಡಿಕೆಯ ಪ್ರಕಾರ ಅಕಾದೆಮಿಗಳು ಪ್ರಕಟಿಸುವ ಪ್ರಶಸ್ತಿಗಳನ್ನು ಮೊದಲು ಕೇಂದ್ರ ಸಾಂಸ್ಕೃತಿಕ ಸಚಿವಾಲಯದೊಂದಿಗೆ ಚರ್ಚಿಸಬೇಕೆಂಬ ನಿಯಮವಿದೆ. ಹಾಗಾಗಿ ಅಕಾದೆಮಿ ತಾನು ಪ್ರಕಟಿಸಲಿರುವ ಪ್ರಶಸ್ತಿಗಳ ಬಗ್ಗೆ ಸಚಿವಾಲದ ಗಮನಕ್ಕೆ ತರಬೇಕು ಎಂಬುದನ್ನು ನಾವು ಇಲ್ಲಿ ನೆನಪಿಸಲು ಬಯಸುತ್ತೇವೆ. ಅಷ್ಟೇ ಅಲ್ಲದೆ ಇದುವರೆಗೆ ಪ್ರಶಸ್ತಿಗಳನ್ನು ಕುರಿತು ನಡೆದಿರುವ ಎಲ್ಲ ಚರ್ಚೆಗಳನ್ನು ಸಚಿವಾಲಯಕ್ಕೆ ಮನವರಿಕೆ ಮಾಡಿಕೊಡಬೇಕೆಂದು ಬಯಸುತ್ತೇವೆ” ಎಂದು ಟಿಪ್ಪಣಿಯಲ್ಲಿ ಸೂಚಿಸಲಾಗಿದೆ. ಇದರ ಜೊತೆಯಲ್ಲಿ, ಕೇಂದ್ರ ಸಾಂಸ್ಕೃತಿಕ ಸಚಿವಾಲಯದೊಂದಿಗೆ ಚರ್ಚಿಸದೆ, ಸಂಪರ್ಕಿಸದೆ ಯಾವುದೇ ತೀರ್ಮಾನವನ್ನು ಅಕಾದೆಮಿಗಳು ತೆಗೆದುಕೊಳ್ಳಬಾರದು ಎಂದು ಹೇಳಿದೆ. ಈ ಟಿಪ್ಪಣಿ, ನಾಲ್ಕು ಸ್ವಾಯತ್ತ ಅಕಾಡೆಮಿಗೂ ನಿನ್ನೆ ಅಂದರೆ ಗುರುವಾರ ತಲುಪಿರುವುದಾಗಿ ವರದಿಯಾಗಿದೆ.
ಗೃಹ ಸಚಿವಾಲಯದ ಪಾತ್ರ?
ಈ ರೀತಿ ಟಿಪ್ಪಣಿ ಕಳುಹಿಸಲು ಕಾರಣ, ಕೇಂದ್ರ ಸಾಂಸ್ಕೃತಿಕ ಸಚಿವಾಲಯವನ್ನು ಗಣನೆಗೆ ತೆಗೆದುಕೊಳ್ಳದೆ, ಪ್ರಶಸ್ತಿ ಪ್ರಕಟಿಸಲು ಕೇಂದ್ರ ಸಾಹಿತ್ಯ ಅಕಾದೆಮಿ ಪತ್ರಿಕಾಗೋಷ್ಠಿ ಕರೆದ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಬೇಕಾಯಿತು ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ತಿಳಿಸಿದೆ. ಪ್ರಶಸ್ತಿಯನ್ನು ಪ್ರಕಟಿಸುವ ಮುನ್ನ ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸಾಂಸ್ಕೃತಿಕ ಸಚಿವಾಲಯವನ್ನು ಸಂಪರ್ಕಿಸಬೇಕು ಸಚಿವಾಲಯದ ಪ್ರತಿನಿಧಿಗಳೊಂದಿಗೆ ಚರ್ಚಿಸಬೇಕು ಎಂಬ ಒಪ್ಪಂದವನ್ನು ಅಕಾದೆಮಿಗಳು ಮರೆತಂತಿದೆ ಎಂದು ಸಚಿವಾಲಯದ ಮೂಲಗಳು ಹೇಳುತ್ತವೆ.
ಸ್ವಾಯತ್ತತೆ ಕಳೆದಕೊಂಡ ಅಕಾದೆಮಿಗಳು
ಇದೊಂದು ಆಘಾತಕಾರಿ ಬೆಳವಣಿಗೆ. ಇದರಿಂದ ಸಾಂಸ್ಕೃತಿಕ ವಲಯ ಬೆಚ್ಚಿಬಿದ್ದಿದೆ. ಈ ಮೂಲಕ ಕೇಂದ್ರ ಸಾಂಸ್ಕೃತಿಕ ಅಕಾದೆಮಿಗಳಿಗೆ ಇದುವರೆಗೆ ಇದ್ದ ಸ್ವಾಯತ್ತತೆ (autonomy) ಕಳೆದುಕೊಂಡಂತಾಗಿದೆ ಎಂಬುದು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಅಭಿಪ್ರಾಯ.
“ಕೇಂದ್ರ ಸಾಂಸ್ಕೃತಿಕ ಅಕಾದೆಮಿಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಿದ್ದು, ಸಂಸತ್ ನಲ್ಲಿ 1954ರಲ್ಲಿ ಅನುಮೋದನೆ ಪಡೆದ ಕಾನೂನಿನ ಅನ್ವಯ ಎಂಬುದನ್ನು ಇಲ್ಲಿ ಮರೆಯಬಾರದು. ಆಗ ಆರಂಭವಾದ ಕೇಂದ್ರ ಸಾಹಿತ್ಯ ಅಕಾದೆಮಿಯ ಮೊದಲ ಅಧ್ಯಕ್ಷರಾಗಿದ್ದವರು, ಪಂಡಿತ್ ಜವಾಹರಲಾಲ್ ನೆಹರೂ ಅವರು. ಕೆಲವು ದಿನಗಳಲ್ಲಿಯೇ ಅವರು ಆ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಅರ್ಹರು ಆ ಜಾಗದಲ್ಲಿ ಇರಬೇಕೆಂದು ಸೂಚಿಸಿದರು. ಆಗ ಈ ಸಂಸ್ಥೆಯನ್ನು ಗುರುತಿಸುತ್ತಿದ್ದುದು National Akademy of Letters ಎಂದು. ಇದು ಸಂಪೂರ್ಣವಾಗಿ ಸಾಹಿತ್ಯಕ್ಕೆ ಸೀಮಿತವಾದುದೆಂದು ಮಾರ್ಚ್ 12, 1954ರಲ್ಲಿ ಘೋಷಿಸಿ, ಭಾರತ ಸರ್ಕಾರದ ಯಾವುದೇ ಹಿಡಿತದಡಿಯಲ್ಲಿ ಬರದ ಸಂಪೂರ್ಣ ಸ್ವಾಯತ್ತ ಅಕಾದೆಮಿ ಎಂದು ನೆಹರೂ, ಸಂಸತ್‌ನಲ್ಲಿ ಪ್ರಕಟಿಸಿದ್ದು, ಇಂದು ಇತಿಹಾಸ. ನೆಹರೂ ಅವರ ಇಂಥ ಉತ್ತಮ ಸಾಂಸ್ಕೃತಿಕ ಪ್ರಯತ್ನಗಳಿಗೆಲ್ಲ ತಿಲಾಂಜಲಿ ಹಾಡಲು ಹೊರಟಿರುವ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಈ ಎಲ್ಲ ಅಕಾದೆಮಿಗಳ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆ” ಎಂದು ಇತ್ತೀಚಿನವರೆಗೂ, ಕೇಂದ್ರ ಸಾಹಿತ್ಯ ಅಕಾದೆಮಿಯೊಂದಿಗೆ ಕೆಲಸ ಮಾಡಿದ ಸಾಹಿತಿ ಮತ್ತು ವಿಮರ್ಶಕರೊಬ್ಬರು ʻಈ ದಿನʼದೊಂದಿಗೆ ಮಾತನಾಡುತ್ತಾ, ಅಲವೊತ್ತುಕೊಂಡಿದ್ದಾರೆ.
ಸಾಹಿತ್ಯಿಕ ಪರಂಪರೆಯ ಅಕಾದೆಮಿ
ನೆಹರೂ ಅದರ ಮೊದಲ ಅಧ್ಯಕ್ಷರಾಗಿದ್ದೂ ಕೂಡ ಅವರು ಪ್ರಧಾನ ಮಂತ್ರಿಯಾಗಿದ್ದರೆಂದಲ್ಲ. ಅವರು ನಿಜ ಅರ್ಥದ ಸಾಹಿತಿ, ಬರಹಗಾರರಾಗಿದ್ದರು. ಆದರೆ, ರಾಜಕಾರಣ, ರಾಜಕೀಯ ಮತ್ತು ಸರ್ಕಾರದ ವ್ಯವಸ್ಥೆಯಿಂದ ಅಕಾದೆಮಿ ಸ್ವತಂತ್ರವಾಗಿರಬೇಕೆಂದು ಅವರು ರಾಜಿನಾಮೆ ನೀಡಿದರು. ಅವರ ನಂತರ ಆ ಜಾಗಕ್ಕೆ ಆಯ್ಕೆಯಾದವರು, ತತ್ವಜ್ಞಾನಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರು. ಅವರ ನಂತರ, ಅಬುಲ್ ಕಲಂ ಅಜಾದ್, ಸಿ. ರಾಜಗೋಪಾಲಾಚಾರಿ, ಕೆ.ಎಂ. ಪಣಿಕ್ಕರ್, ಕೆ. ಎಂ. ಮುನ್ಷಿ, ಜಾಕೀರ್ ಹುಸೇನ್, ಉಮಾಶಂಕರ ಜೋಶಿ, ಮಹಾದೇವಿ ವರ್ಮ, ಡಿ.ವಿ. ಗುಂಡಪ್ಪ, ರಾಮದಾರಿ ಸಿಂಗ್ ದಿನಕರ್ ನಮ್ಮ ಕನ್ನಡದ ಮಹಾನ್ ಪ್ರತಿಭೆಗಳಲ್ಲಿ ಒಬ್ಬರಾದ ಡಾ. ಯು. ಆರ್. ಅನಂತಮುರ್ತಿ 1993ರಿಂದ 1998ರವರೆಗೆ ಅಕಾದೆಮಿಯ ಅಧ್ಯಕ್ಷರಾಗಿದ್ದರು. ಹಾಗೆಯೇ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಕೂಡ ಅದರ ಅಧ್ಯಕ್ಷರಾಗಿದ್ದವರು. ಆದರೆ, ಇಂದು ಬದಲಾದ ಸಂದರ್ಭದಲ್ಲಿ, ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ಮುಂದಕ್ಕೊಯ್ಯಬಲ್ಲವರನ್ನು ಅಧ್ಯಕ್ಷರನ್ನಾಗಿಯೂ, ಸದಸ್ಯರನ್ನಾಗಿಯೂ ಮಾಡಲಾಗುತ್ತಿದೆ. ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಕೇಂದ್ರ ಸಾಹಿತ್ಯ ಅಕಾದೆಮಿಯ ಸದಸ್ಯರೊಬ್ಬರು ಹೇಳುತ್ತಾರೆ.
ಗಾಂಧಿ-ನೆಹರೂ ಗುರುತು ಅಳಿಸುವ ಯತ್ನ
ಗುಜರಾತ್ ನಲ್ಲಿ ಬಹಳ ಹಿಂದೆಯೇ ಕೇಂದ್ರ ಸಾಹಿತ್ಯ ಅಕಾದೆಮಿ ತನ್ನ ಅಸ್ತಿತ್ವ ಮತ್ತು ಸ್ವಾಯತ್ತತೆಯನ್ನು ಕಳೆದುಕೊಂಡಿದೆ. ಅಲ್ಲಿ ಅಕಾಡೆಮಿಯನ್ನು ನಡೆಸುತ್ತಿರುವರು ಐಎಎಸ್ ಅಧಿಕಾರಿಗಳು. ಅವರಿಗೂ ಸಾಹಿತ್ಯಕ್ಕೂ ಯಾವುದೇ ಸಂಬಂಧವಿಲ್ಲ. ಗಾಂಧಿ, ನೆಹರೂ ಇಬ್ಬರನ್ನೂ ಭಾರತೀಯರ ಸ್ಮೃತಿಯಿಂದ ಅಳಿಸಿಹಾಕುವ ಯತ್ನ ಇದು ಎಂದು, ಗುಜರಾತಿನ ಸಾಹಿತಿಯೊಬ್ಬರು ಈ ಲೇಖಕನೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.
Political homogenizationಗೆ ದಾರಿ
ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಕಳೆದ ಹನ್ನೊಂದು ವರ್ಷದಿಂದ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದನ್ನು ಗಮನಿಸಿದರೆ, ದೇಶದ ಬಹುತ್ವ ಸಂಸ್ಕೃತಿಯನ್ನು ತನ್ನ ಸಂಕುಚಿತ ಹಿಂದುತ್ವ ಸಿದ್ದಾಂತಕ್ಕೆ ಒಗ್ಗಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎನ್ನದೆ ಬೇರೆ ದಾರಿ ಇಲ್ಲ. ಈ ಪ್ರಯತ್ನ ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ. ನೇಮಕಾತಿ, ಹಣ ಬಿಡುಗಡೆ, ಆಡಳಿತದಲ್ಲಿ ಮೂಗು ತೂರಿಸುವ ಮೂಲಕ ಯಾರ ಕಣ್ಣಿಗೂ ಬೀಳದಂತೆ ತನ್ನ ಹಿಂದುತ್ವದ ಅಜೆಂಡಾವನ್ನು ಎಲ್ಲ ಕಡೆಯಲ್ಲಿಯೂ ತೂರಿಸಲು ಸರ್ವ ಪ್ರಯತ್ನ ನಡೆಯುತ್ತಿದೆ. ಈ ರೀತಿ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಹತ್ತಿಕ್ಕುವ ಮೂಲಕ, ಸುಮಾರು 75 ವರ್ಷಗಳ ಕಾಲ ಈ ಸಂಸ್ಥೆಗಳು ಕಾಪಾಡಿಕೊಂಡು ಬಂದಿರುವ ಬಹುತ್ವ ಮೌಲ್ಯಕ್ಕೆ ಧಕ್ಕೆ ತರುತ್ತಿದೆ. ತೀರಾ ದುರಂತವೆಂದರೆ, ಈ ಸ್ವಾಯತ್ತ ಸಂಸ್ಥೆಗಳು ತಾನು ನಂಬಿದ ಮೌಲ್ಯಗಳಿಗೆ ಧಕ್ಕೆ ಬರುತ್ತಿರುವ ಇಂದಿನ ಸಂದರ್ಭದಲ್ಲಿ ಮೌನವಾಗಿ “ಉರಿಯುತ್ತಿರುವ ಮನೆಯ ಗಳ ಸೆಳೆದುಕೊಳ್ಳಲು ನೋಡುತ್ತಿರುವುದು. ಒಟ್ಟಾರೆಯಾಗಿ, A tool of political homogenization ಗೆ ದಾರಿಯಾಗುತ್ತಿದೆ.
ಚಿತ್ರೋತ್ಸವಕ್ಕೂ ತಗಲಿರುವ ಹಿಂದುತ್ವದ ರೋಗ
ಬಿಜೆಪಿ ಸರ್ಕಾರದ ಈ ಪ್ರಯತ್ನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೂ ಹೊರತಲ್ಲ ಎಂಬುದು ಈಗಾಗಲೇ ಗೊತ್ತಿರುವ ಸತ್ಯ. 2014 ರಿಂದ ಹಿಂದುತ್ವದ ಪ್ರತಿಪಾದನೆ ಮಾಡುವ, ಹುಸಿ ರಾಷ್ಟ್ರೀಯತೆಯನ್ನು ದೇಶಾಭಿಮಾನದ ಹೆಸರಲ್ಲಿ ಚಿತ್ರಗಳ ಪ್ರದರ್ಶನಕ್ಕೆ ಪ್ರಶಸ್ತಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. Directorate of Film Festivals ಪ್ರಶಸ್ತಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಅಡಿಯಲ್ಲಿಯೇ ಬರುವುದರಿಂದ International Film Festival of India (IffI) ಗೋವಾದಲ್ಲಿ ಆ ಸಚಿವಾಲಯದ ಆದೇಶದಂತೆಯೇ ನಡೆಯುತ್ತಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತನ್ನ ಅಜೆಂಡಾವನ್ನು ಅಂದು ಅಧ್ಯಕ್ಷರಾಗಿದ್ದ ಸುನಿಲ್ ಪುರಾಣಿಕ್ ಹೇಗೆ ನಡೆಸಿದರು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಕಳೆದ ಆವೃತ್ತಿಯಲ್ಲಿ ಆ ರೀತಿ ಆಗದಂತೆ ಪ್ರಯತ್ನ ನಡೆದರೂ, ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ, ಮೂಗು ತೂರಿಸದೆ ಬಿಡಲಿಲ್ಲ.
ಈ ಬಾರಿ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಅಂಥ ಪ್ರಯತ್ನ ನಡೆಸಿದೆ. ಸಚಿವಾಲಯ ತನಗೆ ʼರುಚಿಸದʼ 19 ಚಿತ್ರಗಳನ್ನು ಕೇರಳದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿಸಕೂಡದು ಎಂದು ತಾಕೀತು ಮಾಡಿತ್ತು.
ಮಲೆತು ನಿಂತ ಕೇರಳ ಸರ್ಕಾರ
ಚಿತ್ರೋತ್ಸವದ ಸಂಘಟಕರಿಗೆ ಸೂಚಿಸಿರುವುದು ಆಘಾತಕಾರಿಯಾಗಿದೆ. ಆದರೆ ಸಚಿವಾಲಯ ಮತ್ತು Directorate of Film Festivals ನೀಡುತ್ತಿರುವ ಕಾರಣಗಳಲ್ಲಿ ಹುರುಳೇ ಇಲ್ಲ ಎನ್ನುವುದು ಇಲ್ಲಿ ಮುಖ್ಯ. Geopolitics ಮತ್ತು ಮುಜುಗರ ಉಂಟುಮಾಡುವ ಸತ್ಯಗಳ ಕುರಿತ ಚಿತ್ರಗಳು ಪ್ರದರ್ಶನವಾಗದಂತೆ ನೋಡಿಕೊಳ್ಳುವುದು Directorate of Film Festivals ನ ಉದ್ದೇಶ ಎಂಬುದು ಢಾಳಾಗಿ ಕಾಣಿಸುತ್ತಿದೆ. ಆದರೆ ಇಲ್ಲಿ ಮೆಚ್ಚಬೇಕಾಗಿರುವ ಸಂಗತಿ ಎಂದರೆ, ಮುಖ್ಯಮಂತ್ರಿ ಪಿನರಾಯಿ ವಿಜಯನ್ ಇದಕ್ಕೆಲ್ಲ ಸೊಪ್ಪು ಹಾಕದೆ ಕೇರಳ ಚಿತ್ರೋತ್ಸವದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ತಡೆಹಿಡಿದಿರುವ ಚಿತ್ರಗಳನ್ನು ಪ್ರದರ್ಶಿಸುವುದಾಗಿ ಪ್ರಕಟಿಸಿ, ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ. ಕೆಲವು ಚಿತ್ರಗಳ ಪ್ರದರ್ಶನವನ್ನು ಕೇಂದ್ರ ಸರ್ಕಾರ ತಡೆಹಿಡಿದಿರುವುದು ಬಿಜೆಪಿ ಸರ್ಕಾರದ ಅಧಿಕಾರವಾದಿ (authoritarian) ನಿಲುವಿನ ಸ್ಪಷ್ಟ ನಿದರ್ಶನ. ಸಂಘ ಪರಿವಾರದ ಪ್ರಭಾವದಲ್ಲಿರುವ ಕೆಂದ್ರ ಸರ್ಕಾರ ವ್ಯವಸ್ಥೆಯ ವಿರುದ್ಧದ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಸುತ್ತಿದೆ. ಆದರೆ, ಇವೆಲ್ಲ ಅಜೆಂಡಾದ ಅರಿವಿರುವ ಕೇರಳದ ಜನತೆ ಇದನ್ನೆಲ್ಲ ಸಹಿಸುವುದಿಲ್ಲ. ಬರುವ ಎಲ್ಲ ತಡೆಗಳನ್ನು ಎದುರಿಸಲು ಸಜ್ಜಾಗಿದೆ” ಎಂದು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೇಳಿರುವುದು, ಮತ್ತಷ್ಟು ಮಂದಿಗೆ ಧೈರ್ಯ ತುಂಬಿದಂತಾಗಿದೆ.
ಕೇರಳದ ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ನ ಕೇಂದ್ರದ ಈ ನಿಲುವನ್ನು ತೀವ್ರವಾಗಿ ಖಂಡಿಸಿ, ವಾರ್ತಾ ಮತ್ತು ಪ್ರಸಾರ ಖಾತೆ ಅನುಮತಿ ನೀಡದ 19 ಚಿತ್ರಗಳನ್ನು ಪ್ರದರ್ಶಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನ ತಿರುವನಂತಪುರದ ಸಂಸತ್ ಸದಸ್ಯ ಹಾಗು, ಮೋದಿಗೆ ಮೆಚ್ಚಿಗೆಯಾಗಿರುವ ಲೇಖಕ ಶಶಿ ತರೂರ್ ಕೇಂದ್ರದ ನೀತಿಯನ್ನು ಖಂಡಿಸಿರುವುದು ಆಶ್ಚರ್ಯ ಹುಟ್ಟಿಸಿದೆ.
ಸೆರ್ಗೆಯಿ ಐಸೆನ್ಸ್ಟೈನ್ ಅವರ 1925ರ Battleship Potemkin ಹಾಗೂ, 1968 ನೇ ಇಸುವಿಯಲ್ಲಿ ಬಿಡುಗಡೆಯಾದ ಆಕ್ಟೇವಿಯೋ ಗೆಟಿನೋ ಮತ್ತು ಫೆರ್ನಾಂಡೋ ಸೊಲಾನ್ಸ್ ನಿರ್ದೇಶಿಸಿದ The Hour of Furnaces ನಿರ್ದೇಶಿಸಿದ ಚಿತ್ರಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡದಿರುವುದನ್ನು ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಕಟುವಾಗಿ ಟೀಕಿಸಿ, ಈ ಚಿತ್ರಗಳನ್ನು ಪ್ರದರ್ಶಿಸಲು ಧೈರ್ಯ ತೋರಿರುವ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ನಿಲುವನ್ನು ಮೆಚ್ಚಿಕೊಂಡಿದ್ದಾರೆ.
2026ರ ಜನವರಿ ಕೊನೆಯ ವಾರದಲ್ಲಿ ಆರಂಭವಾಗಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Biffes) ಇಂಥ ಸಂದರ್ಭ ಒದಗಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥಹುದೇ ನಿಲುವನ್ನು ತೆಗೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಚಲನಚಿತ್ರ, ದೃಶ್ಯ ಸಂಸ್ಕೃತಿ, ದೃಶ್ಯ ರಾಜಕಾರಣದ ಬಗ್ಗೆ ತೀವ್ರವಾಗಿ ಯೋಚಿಸುತ್ತಿರುವ ಮಂದಿಯನ್ನು ಕಾಡುತ್ತಿದೆ.




