ಕೇಂದ್ರ-ರಾಜ್ಯ ಸಂಬಂಧ, ರಾಜ್ಯಪಾಲರ ಅಧಿಕಾರ; ಕುರಿಯನ್ ಜೋಸೆಫ್ ಸಮಿತಿಯ ಶ್ವೇತಪತ್ರ ಹೇಳುವುದೇನು?

Date:

ಭಾರತದ ಪ್ರಜಾಪ್ರಭುತ್ವದ ಬೇರು ಇರುವುದೇ ಒಕ್ಕೂಟ ವ್ಯವಸ್ಥೆಯಲ್ಲಿ. ಆದರೆ, ಕಳೆದ 12 ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಒಕ್ಕೂಟ ವ್ಯವಸ್ಥೆಯ ಬುಡವನ್ನು ಪದೇ-ಪದೇ ಅಲುಗಾಡಿಸುತ್ತಿದೆ.  ಜಿಎಸ್‌ಟಿ, ರಾಜ್ಯಪಾಲರ ಹಸ್ತಕ್ಷೇಪ, ಶಿಕ್ಷಣ ನೀತಿ, ಭಾಷಾ ನೀತಿ ಹಾಗೂ ಹಣಕಾಸು ಹಂಚಿಕೆ ಇತ್ಯಾದಿ ವಿಷಯಗಳಲ್ಲಿ ಕೇಂದ್ರೀಕರಣದ ಪ್ರವೃತ್ತಿ ಹೆಚ್ಚಾಗಿದೆ. ‘ಒಂದು ರಾಷ್ಟ್ರ – ಒಂದು ಚುನಾವಣೆ, ಒಂದು ಭಾಷೆ, ಒಂದು ಶಿಕ್ಷಣ’ ಎಂಬಿತ್ಯಾದಿ ಏಕರೂಪತೆಯನ್ನು ಹೇರುವ ಮೂಲಕ ಬಹುತ್ವವನ್ನು ನಾಶಮಾಡುತ್ತಿದೆ. ರಾಜ್ಯಗಳ ಮೇಲೆ ಕೇಂದ್ರವು ದಬ್ಬಾಳಿಕೆ ನಡೆಸುತ್ತಿದೆ ಎಂಬ ಅರೋಪಗಳು ಹೆಚ್ಚಿವೆ. ಇದೆಲ್ಲವೂ ರಾಜ್ಯಗಳ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಗೆ ಧಕ್ಕೆ ತರುತ್ತಿವೆ ಎಂದು ರಾಜ್ಯಗಳು ಹೇಳುತ್ತಲೇ ಇವೆ.

ಈ ಹಿನ್ನೆಲೆ, ರಾಜ್ಯ ಸ್ವಾಯತ್ತತೆ, ಕೇಂದ್ರದ ಹಸ್ತಕ್ಷೇಪ ಹಾಗೂ ಕೇಂದ್ರದಿಂದ ನೇಮಕಗೊಳ್ಳುವ ರಾಜ್ಯಪಾಲರ ಅಧಿಕಾರಗಳ ಕುರಿತು ಅಧ್ಯಯನ ನಡೆಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು 2025ರ ಏಪ್ರಿಲ್ 15ರಂದು ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್‌ ನೇತೃತ್ವದಲ್ಲಿ ಐವರು ಸದಸ್ಯರ ‘ಹೈ-ಲೆವಲ್ ಕಮಿಟಿ ಆನ್ ಯೂನಿಯನ್-ಸ್ಟೇಟ್ ರಿಲೇಷನ್ಸ್’ ಸಮಿತಿ ರಚಿಸಿದ್ದರು. ಸಮಿತಿಯು ಸಂವಿಧಾನದ ಒಕ್ಕೂಟ ತತ್ವಗಳನ್ನು ಪರಿಶೀಲಿಸಿ, ರಾಜ್ಯ ಸ್ವಾಯತ್ತತೆಯನ್ನು ಬಲಪಡಿಸುವ ಅಗತ್ಯವಿರುವ ಶಿಫಾರಸುಗಳನ್ನು ಮಾಡಿದೆ. ಸಮಿತಿಯು ಇದೀಗ, ತನ್ನ ವರದಿಯನ್ನು ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಸಲ್ಲಿಸಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯ ವಸ್ತಿಲಿನಲ್ಲಿ ಸಲ್ಲಿಸಿಕೆಯಾಗಿರುವ ಈ ವರದಿಯು ರಾಜಕೀಯ ಪ್ರಾಮುಖ್ಯತೆಯನ್ನೂ ಪಡೆದುಕೊಂಡಿದೆ.

ತಮಿಳುನಾಡು ಸರ್ಕಾರದ ಪ್ರಕಟಣೆಯ ಪ್ರಕಾರ, ಸಮಿತಿಯು ತನ್ನ ವರದಿಯ ಪಾರ್ಟ್-1ಅನ್ನು ಸಲ್ಲಿಸಿದೆ. ಅದನ್ನು ಫೆಬ್ರವರಿ 18ರಂದು ಸದನದಲ್ಲಿ ಮಂಡಿಸಲಾಗಿದೆ. ಸಮಿತಿಯ ಶಿಫಾರಸುಗಳಲ್ಲಿ ಮುಖ್ಯವಾಗಿ 5 ಪ್ರಾಮುಖ್ಯತೆ ಒಡೆದುಕೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
  1. ಕೇಂದ್ರ ಸರ್ಕಾರವು ಅಧಿಕಾರ ಕೇಂದ್ರೀಕರಣವನ್ನು ನಿಲ್ಲಿಸಬೇಕು. ಸಹಕಾರಿ ಒಕ್ಕೂಟ ವ್ಯವಸ್ಥೇಯನ್ನು ಬಲಪಡಿಸಬೇಕು. ರಾಜ್ಯಗಳ ಸ್ವಾಯತ್ತತೆಯನ್ನು ಹೆಚ್ಚಿಸಿಬೇಕು.
  2. ರಾಜ್ಯಪಾಲರು ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪ ಮಾಡಬಾರದು. ರಾಜ್ಯ ವಿಧಾನಸಭೆಗಳು ಅಂಗೀಕರಿಸುವ ಮಸೂದೆಗಳ ವಿಲೇವಾರಿಗೆ ಸಮಯ ನಿಗದಿ ಮಾಡಬೇಕು. ರಾಜ್ಯಪಾಲರ ನೇಮಕಕ್ಕೆ ರಾಜ್ಯ ವಿಧಾನಸಭೆಯು ಸೂಚಿಸುವ 3 ಹೆಸರುಗಳ ಪೈಕಿ ಒಬ್ಬರನ್ನು ನೇಮಿಸಬೇಕು. ಅಧಿಕಾರಾವಧಿಯನ್ನು 5 ವರ್ಷಗಳಿಗೆ ನಿಗದಿ ಮಾಡಬೇಕು. ಅವರ ಮರುನೇಮಕವನ್ನು ನಿಷೇಧಿಸಬೇಕು.
  3. ಭಾಷಾ ನೀತಿಯ ವಿಚಾರದಲ್ಲಿ, ‘ಒಂದು ರಾಷ್ಟ್ರ, ಒಂದು ಭಾಷೆ’ ಎಂಬ ಏಕಪಕ್ಷೀಯತೆ ಮತ್ತು  ತ್ರಿಭಾಷಾ ಸೂತ್ರದ ಹೇರಿಕೆಯನ್ನು ನಿಲ್ಲಿಸಬೇಕು. ದ್ವಿಭಾಷಾ ನೀತಿಯನ್ನು ಅಳಿಸಬೇಕು. ಇಂಗ್ಲಿಷ್ ಅಧಿಕೃತ ಭಾಷೆಯಾಗಿ ಮುಂದುವರಿಯಬೇಕು.
  4. ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ರಾಜ್ಯಗಳ ಜನಸಂಖ್ಯಾ ನಿಯಂತ್ರಣವೇ ಶಿಕ್ಷೆಯಾಗದಂತೆ ಎಚ್ಚರಿಕೆ ವಹಿಸಬೇಕು. 2126ರವರೆಗೆ ಅಥವಾ ಫರ್ಟಿಲಿಟಿ ರೇಟ್ ಸಮಾನವಾಗುವವರೆಗೆ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಸ್ಥಗಿತಗೊಳಿಸಬೇಕು.
  5. ಕೇಂದ್ರ-ರಾಜ್ಯ ಸಂಬಂಧಗಳಲ್ಲಿ ಕೇಂದ್ರದ ಪದ ಬಳಕೆಗಳು ‘ಬಾಸ್-ವರ್ಕರ್’ ಮಾದರಿಯಿಂದ ‘ನಿಜವಾದ ಪಾಲುದಾರಿಕೆ’ಗೆ ಬದಲಾಗಬೇಕು.

ಜೊತೆಗೆ, ಚುನಾವಣಾ ಸುಧಾರಣೆ, ಶಿಕ್ಷಣ, ಆರೋಗ್ಯ, GST, ಸಂವಿಧಾನ ತಿದ್ದುಪಡಿಗಳಲ್ಲಿ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಬೇಕು., ರಾಜ್ಯಗಳ ಭೌಗೋಳಿಕ ಸಮಗ್ರತೆ ರಕ್ಷಣೆಗೆ ಆದ್ಯತೆ ನೀಡಬೇಕು. ರಾಜ್ಯ ಸ್ವಾಯತ್ತತೆಯನ್ನು ಮರುಸ್ಥಾಪಿಸಬೇಕು.

ಈ ಸಮಿತಿಯು ರಾಜ್ಯ ಮಟ್ಟದಲ್ಲಿ ರಚಿತವಾದ ಎರಡನೇ ಸಮಿತಿಯಾಗಿದೆ. ಈ ಹಿಂದೆ, ಅಂದರೆ, ಮೊದಲ ಬಾರಿಗೆ ರಚನೆಯಾಗಿದ್ದ ರಾಜಮನ್ನಾರ್ ಸಮಿತಿಯ ಶಿಫಾರಸುಗಳನ್ನೂ ಈ ಸಮಿತಿ ಮುಂದುವರಿಸಿದೆ. ಗಮನಾರ್ಹವಾಗಿ, 1969-71ರಲ್ಲಿ ಅಂದಿನ ಮುಖ್ಯಮಂತ್ರಿ, ಡಿಎಂಕೆ ಸಂಸ್ಥಾಪಕ ಸಿ,ಎನ್ ಅಣ್ಣಾದೊರೈ ಅವರು ಕೇಂದ್ರ-ರಾಜ್ಯಗಳ ಸಂಬಂಧ ಕುರಿತ ಅಧ್ಯಯನಕ್ಕಾಗಿ ರಾಜಮನ್ನಾರ್ ಸಮಿತಿಯನ್ನು ರಚಿಸಿದ್ದರು. ಆ ಸಮಿತಿಯೂ ಹಲವು ಶಿಫಾರಸುಗಳನ್ನು ಮಾಡಿತ್ತು.

ಅಂದರೆ, ಇದರರ್ಥ ಕೇಂದ್ರ ಮತ್ತು ರಾಜ್ಯಗಳ ಸಂಬಂಧವು 60ರ ದಶಕದಿಂದಲೂ ಚರ್ಚೆಯಲ್ಲೇ ಉಳಿದಿದೆ. ಗಮನಾರ್ಹವಾಗಿ, ಸಿ.ಎನ್ ಅಣ್ಣಾದೊರೈ ಅವರು, ‘ಉತ್ತರ ಬೆಳಗುತ್ತಿದೆ, ದಕ್ಷಿಣ ಸವೆಯುತ್ತಿದೆ… ಸಿಂದ್ರಿಯಲ್ಲಿ ಗೊಬ್ಬರದ ಕಾರ್ಖಾನೆ ಇದೆ. ಆದರೆ, ಇಲ್ಲಿ ಮಂತ್ರಿಯೂ (ಗೇರುಬೀಜದ ಕಾರ್ಖಾನೆ) ಇಲ್ಲ’ ಎಂದಿದ್ದರು. ಅವರ ಈ ಮಾತು ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಅಂತರವನ್ನು ಎತ್ತಿ ತೋರಿಸಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ದಕ್ಷಿಣ ಭಾರತದ ಹಿಂದುಳಿದಿರುವಿಕೆ ಜೊತೆಗೆ, ಹಣಕಾಸಿನ ವಿಷಯಗಳಲ್ಲಿನ ಇದ್ದ ಪಕ್ಷಪಾತ, ವಿತರಣಾ ನ್ಯಾಯದಲ್ಲಿ ಪಂಚವಾರ್ಷಿಕ ಯೋಜನೆಗಳ ವೈಫಲ್ಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿತ್ತು.

ಅಂದಹಾಗೆ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಕೇಂದ್ರ ಸರ್ಕಾರವು 60ರ ದಶಕದಲ್ಲಿ ಸಂವಿಧಾನದ 356ನೇ ವಿಧಿಯಡಿ ಚುನಾಯಿತ ರಾಜ್ಯ ಸರ್ಕಾರಗಳ ಮೇಲೆ ನಿಯಂತ್ರಣ ಹೇರಿತ್ತು. ನಂತರದಲ್ಲಿ, ರಾಜ್ಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರೂ, ಸಂಗ್ರಹಿಸಿದ ತೆರಿಗೆಗಳ ವಿತರಣೆಯ ಮೇಲೆ ಕೇಂದ್ರವು ಹೊಂದಿದ್ದ ಹಣಕಾಸಿನ ನಿಯಂತ್ರಣವು ರಾಜ್ಯಗಳಿಗೆ ಸಂಕಷ್ಟ ತಂದೊಡ್ಡಿತು. ಆದ್ದರಿಂದಲೇ, 1952 ರಿಂದ 1967 ರವರೆಗೆ ದೇಶಾದ್ಯಂತ ಏಕಸ್ವಾಮ್ಯದ ಅಧಿಕಾರವನ್ನು ಹೊಂದಿದ್ದ ಕಾಂಗ್ರೆಸ್‌, 1967ರ ಆಸುಪಾಸಿನಲ್ಲಿ ಮೊದಲ ಬಾರಿಗೆ ಎಂಟು ರಾಜ್ಯಗಳಲ್ಲಿ ಸೋಲನ್ನು ಅನುಭವಿಸಿತು.

ಆದಾಗ್ಯೂ, ರಾಜ್ಯಗಳ ಮೇಲೆ ಪರೋಕ್ಷವಾಗಿ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ, ‘ರಾಜ್ಯಪಾಲರ’ ನೇಮಕದ ತಂತ್ರವನ್ನು ಬಳಸಲಾರಂಭಿಸಿತು. ತಮಗೆ ಬೇಕಾದವರನ್ನು ರಾಜ್ಯಪಾಲರನ್ನಾಗಿ ನೇಮಿಸಿ, ರಾಜ್ಯಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಆರಂಭಿಸಿತು. ಅದರಲ್ಲೂ, ಸಾಮಾನ್ಯವಾಗಿ ರಾಜ್ಯದ ರಾಜಕೀಯಕ್ಕೆ ಅಪ್ರಸ್ತುತವಾದ, ತಮ್ಮ ಕೊನೆಯ ದಿನಗಳನ್ನು ರಾಜಭವನಗಳಲ್ಲಿ (ಲೋಕ ಭವನ) ಕಳೆಯಲು ಇಚ್ಛಿಸುವ 80 ವರ್ಷದ ವೃದ್ಧರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಯಿತು,. ಈ ಕ್ರಮವು ರಾಜ್ಯಗಳಲ್ಲಿ ಅಸ್ಥಿರತೆಯನ್ನು ಉಂಟುಮಾಡಿತು. ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನ ಸರ್ಕಾರಗಳು ಕೇಂದ್ರದ ಆಡಳಿತಾರೂಢ ಪಕ್ಷದ ಈ ಹೊಸ ಸಂಚಿನ ಬಗ್ಗೆ ಆಕ್ರೋಶಗೊಂಡವು, ಎಚ್ಚೆತ್ತುಕೊಂಡವು.

1960ರ ದಶಕದ ಆರಂಭದಲ್ಲಿ, ರಾಜ್ಯಗಳಿಗೆ ರಾಜ್ಯಪಾಲರ ಹುದ್ದೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಡಿಎಂಕೆ ಮುನ್ನೆಲೆಗೆ ತಂದಿತು. 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ, ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ದೊರೆಯಲು ಸಾಂವಿಧಾನಿಕ ಬದಲಾವಣೆಗಳನ್ನು ಶಿಫಾರಸು ಮಾಡಲು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ವಿ. ರಾಜಮನ್ನಾರ್ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿತು. ಸಮಿತಿಯು ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಲು ಶಿಫಾರಸು ಮಾಡಲಿಲ್ಲ. ಬದಲಾಗಿ, ಆಯ್ಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಇರಬೇಕೆಂದು ಸಲಹೆ ನೀಡಿತು. ಆದರೂ, ಜನಪ್ರಿಯ ಸರ್ಕಾರಗಳನ್ನು ಹೆದರಿಸಲು ಅಥವಾ ಅಸ್ಥಿರಗೊಳಿಸಲು ಕೇಂದ್ರವು ರಾಜ್ಯಪಾಲ ಹುದ್ದೆಯನ್ನು ಬಳಸಿಕೊಳ್ಳುತ್ತಿದೆ ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿತು.

ಇದೇ ಸಮಯದಲ್ಲಿ ಕೇಂದ್ರವು ರಾಷ್ಟ್ರೀಯ ತುರ್ತು ಪರಿಸ್ಥಿತಿ (ಜೂನ್ 1975-1977) ಹೇರಿದ ಬಳಿಕ, ರಾಜ್ಯಗಳ ನಾನಾ ಅಧಿಕಾರಗಳನ್ನು ಕೇಂದ್ರ ಕಸಿದುಕೊಂಡಿತು. ಆ ಸಮಯದಲ್ಲಿ, ಕೇರಳ ಮತ್ತು ಪಶ್ಚಿಮ ಬಂಗಾಳದ ಎಡರಂಗದ ಸರ್ಕಾರಗಳು ಮತ್ತು ತಮಿಳುನಾಡಿನ ಡಿಎಂಕೆ ಸರ್ಕಾರಗಳು ಕೇಂದ್ರ-ರಾಜ್ಯ ಸಂಬಂಧಗಳನ್ನು ಮರುಪರಿಶೀಲಿಸುವ ಅಗತ್ಯತೆ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದವು. 1983ರ ಅಕ್ಟೋಬರ್‌ನಲ್ಲಿ ಶ್ರೀನಗರದಲ್ಲಿ ನಡೆದ ಎಲ್ಲ ರಾಜಕೀಯ ಪಕ್ಷಗಳ ಮತ್ತು ಐವರು ಮುಖ್ಯಮಂತ್ರಿಗಳ ಸಭೆಯಲ್ಲಿ, ‘ಕೇಂದ್ರ-ರಾಜ್ಯ ಸಂಬಂಧ’ ಕುರಿತ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಬೆನ್ನಲ್ಲೇ, ಕೇಂದ್ರ ಸರ್ಕಾರವು ಕೇಂದ್ರ-ರಾಜ್ಯ ಸಂಬಂಧಗಳನ್ನು ಪರಾಮರ್ಶಿಸಲು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆರ್.ಎಸ್. ಸರ್ಕಾರಿಯಾ ಆಯೋಗವನ್ನು ನೇಮಿಸಿತು.

ಸರ್ಕಾರಿಯಾ ಅವರು ರಾಜ್ಯಪಾಲರ ಪಾತ್ರ ಮತ್ತು ಆಡಳಿತಾತ್ಮಕ ಹಾಗೂ ಹಣಕಾಸಿನ ಸಂಬಂಧಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಸುಧಾರಣೆಗಳನ್ನು ಸೂಚಿಸಿ 1988ರಲ್ಲಿ 1,600 ಪುಟಗಳ ವರದಿಯನ್ನು ಸಲ್ಲಿಸಿತು. ಆದರೆ, ಅದರಿಂದ ಸಾರ್ಥಕವಾದುದೇನೂ ಹೊರಬರಲಿಲ್ಲ.

ಈ ಲೇಖನ ಓದಿದ್ದೀರಾ?: ಕೇಂದ್ರದ ಜಾತಿವಾರು ಸಮೀಕ್ಷೆಯಲ್ಲಿ ಅಲೆಮಾರಿಗಳ ಪ್ರಶ್ನೆ

ಇದೀಗ, ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ತನ್ನ ಅಧಿಕಾರವನ್ನು ಮನಸೋಯಿಚ್ಛೆ ಬಳಸುತ್ತಿದೆ. ರಾಜ್ಯ-ಕೇಂದ್ರಗಳೊಂದಿಗೆ ಹಂಚಿಕೆಯಲ್ಲಿರುವ ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳಲ್ಲಿಯೂ ರಾಜ್ಯಗಳ  ಇಲ್ಲದೆಯೇ ಸಂಸದೀಯ ಶಾಸನಗಳನ್ನು ಜಾರಿಗೆ ತರುತ್ತಿದೆ. ಎಲ್ಲ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡಿದೆ. ಕೇಂದ್ರ-ರಾಜ್ಯ ಸಂಬಂಧಗಳ ಮೇಲೆ ಗಂಭೀರವಾದ ದಾಳಿಗಳನ್ನು ನಡೆಸಿದೆ. ಅದರಲ್ಲೂ, ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು, ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಸಾಧನಗಳಾಗಿ ಬಳಸಲಾಗುತ್ತಿದೆ ಎಂಬ ಆರೋಪಗಳಿವೆ.

ಇದೇ ಸಂದರ್ಭದಲ್ಲಿ, ಡಿಎಂಕೆ ಸರ್ಕಾರ ರಚಿಸಿದ್ದ ಕುರಿಯನ್ ಜೋಸೆಫ್ ನೇತೃತ್ವದ ಸಮಿತಿಯು ಕೇಂದ್ರ-ರಾಜ್ಯ ಸಂಬಂಧಗಳನ್ನು ವಿಶ್ಲೇಷಿಸಿ ವರದಿ ನೀಡಿದೆ. ಈ ಸಮಿತಿಯ ವರದಿಯು ಕೇಂದ್ರ-ರಾಜ್ಯಗಳ ನಡುವಿನ ವಿವಾದಗಳನ್ನು ಪರಿಹರಿಸಲು ಅಗತ್ಯ ಶಿಫಾರಸುಗಳನ್ನು ಮಾಡಿದೆ. ರಾಜ್ಯಪಾಲರ ನೇಮಕಾತಿಯ ವಿಷಯದಲ್ಲಿ 1971ರ ರಾಜಮನ್ನಾರ್ ಸಮಿತಿಯ ವರದಿಯನ್ನು ಮುಂದುವರೆಸಿ, ನವೀಕರಿಸಿದೆ.

ಕೇಂದ್ರದ ಸರ್ವಾಧಿಕಾರಿ ಧೋರಣೆಗಳನ್ನು ನಿಯಂತ್ರಿಸಲು ಕಾನೂನುಬದ್ಧ ಆಯ್ಕೆಗಳೊಂದಿಗೆ ವಿರೋಧ ಪಕ್ಷಗಳು ಕೇಂದ್ರ-ರಾಜ್ಯ ಸಂಬಂಧದ ವಿಷಯವನ್ನು ಜನರ ಬಳಿಗೆ ಕೊಂಡೊಯ್ದಿವೆ. ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ವಿಪಕ್ಷಗಳು ಅಧಿಕಾರದಲ್ಲಿದ್ದು, ಚುನಾವಣೆಗೆ ಹೋಗುತ್ತಿವೆ ಎನ್‌ಡಿಎ ವಿರುದ್ಧ ಸ್ಪರ್ಧಿಸುತ್ತಿವೆ. ಈ ಸರ್ಕಾರಗಳು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಸಮಿತಿಯ ಶಿಫಾರಸುಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯ ಕೇಂದ್ರ ಬಿಂದುವನ್ನಾಗಿ ಮಾಡುವ ಸಾಧ್ಯತೆಯಿದೆ. ಸುಧಾರಣೆಗಳು ಅತ್ಯಗತ್ಯ ಮತ್ತು ಅರ್ಥಪೂರ್ಣ ಪ್ರಜಾಪ್ರಭುತ್ವಕ್ಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ನೈಜ ಅಧಿಕಾರ ಹಂಚಿಕೆ ಅಗತ್ಯ ಎಂಬುದು ವಿಪಕ್ಷಗಳ ವಾದವೂ ಆಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...