ಮುಂಬರುವ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಮೇಯರ್ ಹುದ್ದೆ ದೊರೆಯದಂತೆ ಕಟ್ಟಿಹಾಕಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಜಂಟಿ ಕಾರ್ಯತಂತ್ರ ರೂಪಿಸಲು ಎದುರು ನೋಡುತ್ತಿವೆ. ಎರಡೂ ಪಕ್ಷಗಳು ಮೇಯರ್ ಚುನಾವಣೆಯಲ್ಲಿ ಮತ್ತೆ ಒಗ್ಗೂಡಲಿವೆ ಎಂದು ಉಭಯ ಪಕ್ಷಗಳ ನಾಯಕರು ಹೇಳಿಕೊಂಡಿದ್ದಾರೆ.
ಚಂಡೀಗಢ ಮೇಯರ್ ಹುದ್ದೆಗೆ ಜನವರಿ 29 ರಂದು ಚುನಾವಣೆ ನಿಗದಿಯಾಗಿದೆ. ಮೇಯರ್ ಸ್ಥಾನವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯಿಂದ ಮೇಯರ್ ಹುದ್ದೆ ಕಸಿದುಕೊಳ್ಳಲು ಕಾಂಗ್ರೆಸ್-ಎಎಪಿ ನಾನಾ ಮಾರ್ಗಗಳನ್ನು ಹುಡುಕುತ್ತಿವೆ ಎಂದು ವರದಿಯಾಗಿದೆ.
ಎರಡೂ ಪಕ್ಷಗಳು ಔಪಚಾರಿಕ ಮೈತ್ರಿಯನ್ನು ಘೋಷಿಸಿಲ್ಲವಾದರೂ, ಕಾಂಗ್ರೆಸ್ ನಾಯಕರು ಎಎಪಿ ಜೊತೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿಕೊಂಡಿದ್ದಾರೆ. “ಈಗ ಎಎಪಿ ಜೊತೆ ಔಪಚಾರಿಕ ಮೈತ್ರಿ ಇಲ್ಲ. ಆದರೆ ಬಿಜೆಪಿಯನ್ನು ತಡೆಯಲು ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಉಭಯ ಪಕ್ಷಗಳು ಸಭೆ ಸೇರಲಿವೆ” ಎಂದು ಚಂಡೀಗಢ ಕಾಂಗ್ರೆಸ್ ಅಧ್ಯಕ್ಷ ಹರ್ಮೊಹಿಂದರ್ ಸಿಂಗ್ ಲಕ್ಕಿ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ‘ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡ ಟ್ರಂಪ್’; ಆಮದು ಸುಂಕದಲ್ಲಿ 96% ಹೊರೆ ಅಮೆರಿಕನ್ನರೇ ಹೊರುತ್ತಿದ್ದಾರೆ!
ಇತ್ತೀಚೆಗೆ, ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದ ಚಂಡೀಗಢ ಎಎಪಿ ಉಸ್ತುವಾರಿ ಜರ್ನೈಲ್ ಸಿಂಗ್, “ಅಧಿಕಾರ ಹಂಚಿಕೆಗಾಗಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ” ಎಂದಿದ್ದರು. ಈ ಆರೋಪವು ಕಾಂಗ್ರೆಸ್ ಮತ್ತು ಎಎಪಿ ನಡುವೆ ಮತ್ತಷ್ಟು ಜಠಿಲತೆ ಹುಟ್ಟುಹಾಕಿತ್ತು. ಆದಾಗ್ಯೂ, ಇದೀಗ, ಎರಡೂ ಪಕ್ಷಗಳು ಮಾತುಕತೆಗೆ ಮುಂದಾಗಿವೆ.
35 ಸದಸ್ಯರ ಚಂಡೀಗಢ ಪಾಲಿಕೆಯಲ್ಲಿ ಎಎಪಿಯ ಇಬ್ಬರು ಕೌನ್ಸಿಲರ್‌ಗಳನ್ನು ಸೆಳೆದುಕೊಂಡಿರುವ ಬಿಜೆಪಿ 18 ಕೌನ್ಸಿಲರ್‌ಗಳನ್ನು ಹೊಂದಿದೆ. ಎಎಪಿ 11, ಕಾಂಗ್ರೆಸ್ 6 ಕೌನ್ಸಿಲರ್‌ಗಳನ್ನು ಹೊಂದಿದೆ. ಕಾಂಗ್ರೆಸ್ ಸಂಸದರ ಪದನಿಮಿತ್ತ ಮತಗಳೊಂದಿಗೆ, ಎರಡೂ ಪಕ್ಷಗಳು ಒಗ್ಗೂಡಿದರೆ ವಿರೋಧ ಪಕ್ಷದ ಸಂಖ್ಯೆ 18 ಆಗುತ್ತದೆ. ಹೀಗಾಗಿ, ಬಿಜೆಪಿ ಮತ್ತು ವಿಪಕ್ಷಗಳ ಮತಬಲ 18ರಲ್ಲಿ ಸಮವಾಗಿದೆ. ಮೇಯರ್ ಹೆದ್ದೆಯನ್ನು ಗೆಲ್ಲಲು 19 ಮತಗಳ ಅಗತ್ಯವಿದೆ.
2024ರಲ್ಲಿ ನಡೆದಿದ್ದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಎಎಪಿ ಒಟ್ಟು 19 ಸದಸ್ಯರನ್ನು ಹೊಂದಿದ್ದರೂ ಮೇಯರ್ ಹುದ್ದೆಯು ಬಿಜೆಪಿ ಪಾಲಾಗಿತ್ತು. ಇದರಲ್ಲಿ, ಚುನಾವಣಾ ಅಧಿಕಾರಿಗಳ ಕುತಂತ್ರವಿದೆ ಎಂದು ಆರೋಪಿಸಲಾಗಿತ್ತು.




