ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಮುಖ್ಯಸ್ಥ ಮತ್ತು ನಗೀನಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ರಾವಣ್ ರಾಜ್ಯಾದ್ಯಂತ ಮಾಡುತ್ತಿರುವ ‘ಸಂವಿಧಾನ ಅಧಿಕಾರ ಬಚಾವೊ‘ ರ್‍ಯಾಲಿಗೆ ಸಿಗುತ್ತಿರುವ ಜನ ಬೆಂಬಲದಿಂದ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳು ಗಾಬರಿಯಾಗಿವೆ.
ಉತ್ತರ ಪ್ರದೇಶದ ಕನ್ನೌಜ್, ಆಗ್ರಾ, ಸಂತ ಕಬೀರ್ ನಗರದಲ್ಲಿ ‘ಸಂವಿಧಾನ ಅಧಿಕಾರ ಬಚಾವೊ’ ಸಾರ್ವಜನಿಕ ರ್‍ಯಾಲಿಯನ್ನು ಆಜಾದ್ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯ, ಸಾಂವಿಧಾನಿಕ ಹಕ್ಕುಗಳು ಮತ್ತು ಉನ್ನತ ಶಿಕ್ಷಣದಲ್ಲಿನ ಸುಧಾರಣೆ ಉದ್ದೇಶಗಳು ರ್‍ಯಾಲಿಯ ಪ್ರಮುಖ ಬೇಡಿಕೆಯಾಗಿದೆ. ಈ ರ್‍ಯಾಲಿಯಲ್ಲಿ ಸ್ವಯಂ ಪ್ರೇರಿತರಾಗಿ ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ. ಇದೇ ಫೆ.11 ರಂದು ದೆಹಲಿಯಲ್ಲಿಯೂ ರ್‍ಯಾಲಿಯನ್ನು ನಡೆಸುವುದಾಗಿ ಘೋಷಿಸಿದ್ದಾರೆ.
ಇದನ್ನು ಓದಿ : ಮೆಟ್ರೋ ದರ ಏರಿಕೆ; ರಾಜ್ಯ ಅಥವಾ ಕೇಂದ್ರ ಯಾರು ಹೊಣೆ?
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ತಂದಿರುವ ಹೊಸ ನಿಯಮ ಜಾರಿಗೆ ಒತ್ತಾಯಿಸಿ ಚಂದ್ರಶೇಖರ್ ಆಜಾದ್ ಪ್ರತಿಭಟನಾ ರ್‍ಯಾಲಿಯನ್ನು ನಡೆಸುತ್ತಿದ್ದಾರೆ. ಬಹುತೇಕ ರಾಜಕೀಯ ಪಕ್ಷಗಳು ಯುಜಿಸಿ ನಿಯಮದ ಬಗ್ಗೆ ಮೌನವಹಿಸಿರುವ ಕುರಿತು ನೇರವಾಗಿ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಚಂದ್ರಶೇಖರ್ ಆಜಾದ್ ಅವರ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ರ್‍ಯಾಲಿ ಮುಂದಿನ ವಿಧಾನಸಭಾ ಚುನಾವಣೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.
”ಒಂದೆಡೆ ಯುಜಿಸಿಯ ಹೊಸ ನಿಯಮವನ್ನು ತಡೆಯಲು ಮೇಲ್ಜಾತಿಯ ಗುಂಪುಗಳು ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಸುತ್ತಿವೆ. ಇದರ ಬಗ್ಗೆ ಬಹುತೇಕ ಸಂಸದರು ಮೌನವಹಿಸಿದ್ದಾರೆ. ತಮ್ಮ ಪಕ್ಷ ಮಾತ್ರ ಬಹಿರಂಗವಾಗಿ ಯುಜಿಸಿ ನಿಯಮಾವಳಿಗಳನ್ನು ಬೆಂಬಲಿಸುತ್ತಿದೆ” ಎಂದು ಅಜಾದ್ ಸಾರ್ವಜನಿಕವಾಗಿ ಹೇಳಿದ್ದಾರೆ.
ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ‘ಯುಜಿಸಿ ಹೊಸ ನಿಯಮ -2026’ ಅನ್ನು ಜಾರಿಗೆ ತರಲು ಯುಜಿಸಿ ಹೊರಟಿತ್ತು. ಈ ಹೊಸ ನಿಯಮದ ಪ್ರಕಾರ ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಹಾಗೂ ಇತರ ಹಿಂದುಳಿದ ವರ್ಗದ(ಓಬಿಸಿ) ವಿದ್ಯಾರ್ಥಿಗಳಿಗೆ ಜಾತಿ ಹೆಸರಿನಲ್ಲಿ ನಡೆಯುವ ತಾರತಮ್ಯದ ದೂರುಗಳನ್ನು ಸಲ್ಲಿಸಲು ಮತ್ತು ಪರಿಹರಿಸುವ ಉದ್ದೇಶವನ್ನು ಹೊಂದಿತ್ತು. ನಿಯಮದ ಪ್ರಕಾರ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಅವಕಾಶಕ್ಕಾಗಿ ಈಕ್ವಿಟಿ ಸಮಿತಿ ಹಾಗೂ ಈಕ್ವಿಟಿ ಸದಸ್ಯರನ್ನು ಹೊಂದಿರುವುದು ಕಡ್ಡಾಯವಾಗಿತ್ತು.
ಆದರೆ, ಮೇಲ್ಜಾತಿಯ ಕೆಲ ಗುಂಪುಗಳು ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳು ಯುಜಿಸಿ ನಿಯಮವು ‘ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಕಿರುಕುಳ’ಕ್ಕೆ ಕಾರಣವಾಗುತ್ತದೆ ಎಂದು ವಿರೋಧಿಸುತ್ತಿದ್ದಾರೆ. ಬಲಪಂಥೀಯ ಸಂಘಟನೆಗಳ ಆರೋಪಗಳಲ್ಲಿ ಮುಖ್ಯ ಅಂಶವೆಂದರೆ, ‘ತಾರತಮ್ಯದ ಆಧಾರದ ಮೇಲೆ ಸುಳ್ಳು ದೂರುಗಳು ಸಲ್ಲಿಕೆಯಾಗಬಹುದು ಹಾಗೂ ಕ್ರಮಗಳನ್ನು ಕೈಗೊಳ್ಳದಿದ್ದರೆ ಸಂಸ್ಥೆಯ ಮೇಲೆ ಶಿಸ್ಥಿನ ಕ್ರಮ ಕೈಗೊಳ್ಳಬಹುದು’ ಎಂಬುದಾಗಿದೆ.
ಆದರೆ, ಚಂದ್ರಶೇಖರ್ ಆಜಾದ್ ತೆಗೆದುಕೊಂಡಿರುವ ನಿರ್ಧಾರವು ಉತ್ತರ ಪ್ರದೇಶದ ರಾಜಕೀಯದಲ್ಲಿ ಅಚ್ಚರಿ ಸೃಷ್ಟಿಸಿದೆ. ಬಿಜೆಪಿಯನ್ನು ತೀವ್ರವಾಗಿ ಟೀಕಿಸುವ ಅಜಾದ್ ಅವರು ಯುಜಿಸಿ ನಿಯಮದ ಪರ ದೃಢವಾಗಿ ನಿಂತಿದ್ದಾರೆ. ದಲಿತ ವರ್ಗದ ಅಭ್ಯರ್ಥಿಗಳು ಯುಜಿಸಿ ನಿಯಮದ ಪರ ನಿಲ್ಲಬೇಕು ಎಂದು ಕರೆಕೊಟ್ಟಿದ್ದಾರೆ. ಆಜಾದ್ ಅವರು ನಡೆಸುತ್ತಿರುವ ರ್‍ಯಾಲಿಯಲ್ಲಿ ಸಾವಿರಾರು ಜನರು ಸೇರುತ್ತಿದ್ದಾರೆ. ಅವರ ಭಾಷಣಕ್ಕೆ ಈಗಾಗಲೇ ಲಕ್ಷಾಂತರ ಜನರು ಅಭಿಮಾನಿಗಳಾಗಿದ್ದಾರೆ.
ಆದರೆ, ಮೇಲ್ಜಾತಿಗಳ ಪ್ರತಿಭಟನೆಯ ನಂತರ ಸುಪ್ರೀಂ ಕೋರ್ಟ್ ಜ.29 ರಂದು ತಾತ್ಕಾಲಿಕ ತಡೆ ನೀಡಿದೆ. ಯುಜಿಸಿ ಹೊಸ ನಿಯಮವು ‘ಸಮಾಜವನ್ನು ವಿಭಜಿಸಬಹುದು’ ಎಂದು ಅಭಿಪ್ರಾಯಪಟ್ಟಿದೆ.
2027ರ ವಿಧಾನಸಭಾ ಚುನಾವಣೆಗೂ ಮುನ್ನ ದಲಿತ ಮತದಾರರನ್ನು ಸೆಳೆಯುವ ತಂತ್ರ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿದ್ದರೂ, ಆಜಾದ್ ಅವರ ರ್‍ಯಾಲಿಗಳು ಸಾಕಷ್ಟು ಗಮನ ಸೆಳೆಯುತ್ತಿವೆ.





