ವಿಶ್ವವಿಖ್ಯಾತ ಚಾರ್ ಧಾಮ್ ಯಾತ್ರೆ ಆರಂಭವಾದ ಈ 16 ದಿನಗಳಲ್ಲಿ 58 ಯಾತ್ರಿಕರು ಸಾವನ್ನಪ್ಪಿದ್ದು ಈ ಪೈಕಿ ಹೆಚ್ಚಿನ ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭಕ್ತರ ಆರೋಗ್ಯದ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಹೆಚ್ಚು ಕಟ್ಟುನಿಟ್ಟಾಗಿ ಸ್ಕ್ರೀನಿಂಗ್ ನಡೆಸುತ್ತಿದೆ ಎಂದು ಉತ್ತರಾಖಂಡದ ಆರೋಗ್ಯ ಇಲಾಖೆ ತಿಳಿಸಿದೆ.
ಚಾರ್ ಧಾಮ್ ಯಾತ್ರೆ ಆರಂಭವಾದ 16 ದಿನಗಳಲ್ಲಿ, 50 ವರ್ಷಕ್ಕಿಂತ ಮೇಲ್ಪಟ್ಟ 40 ಯಾತ್ರಿಗಳು ಸೇರಿ ಒಟ್ಟು 58 ಯಾತ್ರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಹೃದಯಾಘಾತ ಮತ್ತು ಪಲ್ಮನರಿ ಎಡಿಮಾ ಕಾರಣ 47 ಯಾತ್ರಿಕರು ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಚಾರ್ ಧಾಮ್ ಯಾತ್ರೆ| ಯಾತ್ರಿಕರ ಸಂಖ್ಯೆ ದುಪ್ಪಟ್ಟು; ಮೊದಲ ಐದು ದಿನಗಳಲ್ಲಿ 11 ಸಾವು
ಈ ಬಗ್ಗೆ ಮಾಹಿತಿ ನೀಡಿದ ಗರ್ವಾಲ್ ಕಮಿಷನರ್ ವಿನಯ್ ಶಂಕರ್ ಪಾಂಡೆ, “52 ಯಾತ್ರಾರ್ಥಿಗಳ ಸಾವನ್ನು ದೃಢಪಡಿಸಿದ್ದಾರೆ. ಮೃತರ ಪೈಕಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು. ಯಾತ್ರಾ ಮಾರ್ಗದಲ್ಲಿ ನಿಯಮಿತವಾಗಿ ಯಾತ್ರಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
2023ರಲ್ಲಿ, ಚಾರ್‌ಧಾಮ್ ಯಾತ್ರೆಯಲ್ಲಿ ಸಾವಿನ ಸಂಖ್ಯೆ 250ಕ್ಕೆ ಏರಿಕೆಯಾಗಿದ್ದು ಪ್ರತಿ ಲಕ್ಷಕ್ಕೆ 4.5 ಅನುಪಾತದಲ್ಲಿತ್ತು. 2022ರಲ್ಲಿ ಸಾವಿನ ಅನುಪಾತವು ಪ್ರತಿ ಲಕ್ಷಕ್ಕೆ 7.5 ಆಗಿತ್ತು. ಇನ್ನು ಯಾತ್ರಿಕರ ಸಂಖ್ಯೆ ದುಪ್ಪಟ್ಟಾದ ಕಾರಣದಿಂದಾಗಿ ಮೊದಲ ಐದು ದಿನಗಳಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.





