ಬಂಗಾಳಕೊಲ್ಲಿಯಲ್ಲಿ ದಿತ್ವಾ ಚಂಡಮಾರುತ ಪರಿಚಲನೆಗೊಂಡಿದ್ದು, ತಮಿಳುನಾಡಿನ ಚೆನ್ನೈ ಮತ್ತು ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಚೆನ್ನೈನಲ್ಲಿ ಪ್ರವಾಹ ಉಂಟಾಗಿದೆ. ಇನ್ನೂ, ನಾಲ್ಕೈದು ದಿನ ಮಳೆ-ಗಾಳಿ ಆರ್ಭಟ ಮುಂದುವರೆಯಲಿದ್ದು, ಜನ ಜೀವನ ಅಸ್ತವ್ಯಸ್ತವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಅಬ್ಬರದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಮಳೆ ಅಬ್ಬರ ಇರಲಿದೆ. ಭಾನುವಾರದವರೆಗೆ ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕ್ರಮೇಣ ದುರ್ಬಲಗೊಂಡಿದೆ. ಚಂಡಮಾರುತ ವೇಗವಾಗಿ ಬೀಸುತ್ತಿದೆ. ಪರಿಣಾಮ, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು ಹಾಗೂ ತಿರುವಳ್ಳೂರು ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಅಂತೆಯೇ, ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ. ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಇನ್ನು, ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಸೋಮವಾರ, ಚೆನ್ನೈನಲ್ಲಿ 132 ಮಿ.ಮೀ. ಮಳೆಯಾಗಲಿದೆ. ಪ್ರವಾಹ ಸಂಭವಿಸಿದೆ. ವಾಹನ ಸಂಚಾರ ಸೇರಿದಂತೆ ಚೆನ್ನೈನ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು ಹಾಗೂ ತಿರುವಳ್ಳೂರು ಜಿಲ್ಲೆಗಳ ಶಾಲೆಗಳು ಮತ್ತು ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಿ ತಮಿಳುನಾಡು ಸರ್ಕಾರ ಆದೇಶಿಸಿದೆ.




