ಚೇರನ್ 'ಅಯ್ಯಾ' ಸಿನಿಮಾದ ಮೂಲಕ 1987ರ ಕಾಲಘಟ್ಟದ ಹಿಂದುಳಿದ ವೆನ್ನಿಯಾರ್ ಸಮುದಾಯದ ಮೀಸಲಾತಿ ಚಳವಳಿಯನ್ನು ಅದು ಇದ್ದಂತೆಯೇ ನಿರೂಪಿಸುತ್ತಾರೆಯೆ, ಅಂದಿನ ಸತ್ಯಗಳನ್ನು ನಿಷ್ಠುರವಾಗಿ ದಾಖಲಿಸುತ್ತಾರೆಯೆ? ಇಲ್ಲವೇ ರಾಮದಾಸ್ ಅವರ ಸಾಕ್ಷ್ಯ ಚಿತ್ರವನ್ನಷ್ಟೇ ತೋರಿಸಿ ಕೈ ತೊಳೆದುಕೊಳ್ಳುತ್ತಾರೆಯೆ?
ಮೊನ್ನೆ ತಾನೇ (ಜುಲೈ 25) ನನ್ನಿಷ್ಟದ ತಮಿಳಿನ ನಿರ್ದೇಶಕ ಚೇರನ್ ಅವರ ಹೊಸ ಸಿನಿಮಾ ಸೆಟ್ಟೇರಿದೆ; ಹೆಸರು ‘ಅಯ್ಯಾ’. ತಮಿಳುನಾಡಿನ ಮೂರನೇ ತಲೆಮಾರಿನ ರಾಜಕೀಯ ನಾಯಕ, ಅಲ್ಲಿನ ಹಿಂದುಳಿದ ಸಮುದಾಯದ ವೆನ್ನಿಯಾರ್ ಜನಾಂಗದ ನೇತಾರ ಎಸ್. ರಾಮದಾಸ್ ಅವರ ‘ಬಯೋಪಿಕ್’ ಆದ ಈ ಚಿತ್ರ ಮತ್ತು ಇದನ್ನು ನಿರ್ದೇಶಿಸಲು ಹೊರಟಿರುವ ಚೇರನ್ ಅವರನ್ನು ಪ್ರೀತಿ ಮತ್ತು ಗುಮಾನಿಯ ಕಣ್ಣುಗಳಿಂದಲೇ ನೋಡುತ್ತಾ ಈ ವಿಶ್ಲೇಷಣೆಗಿಳಿದಿರುವೆ.
ತನ್ನ ಸಹಜ ಉಮ್ಮಳಿಕೆಯ ನಟನೆಯನ್ನೂ ಬದಿಗೊತ್ತಿ ನಿರ್ದೇಶನದ ಮುಳ್ಳಿನ ಹೆಮ್ಮರವೇರಿದವರು ಚೇರನ್. ಆತನ ಕೆರಿಯರ್ ಬಗ್ಗೆ ಅನೇಕರು ಮಾತನಾಡುವುದು ಅವನ ‘ಆಟೋಗ್ರಾಫ್’ ಸಿನಿಮಾದ ಸಕ್ಸಸ್‌ನ ಬಗ್ಗೆ ಮಾತ್ರ. ಅದಕ್ಕೂ ಮುಂಚೆ ಆತನೊಳಗೊಬ್ಬ ಸಂಕಟದ ಬರಹಗಾರನೊಬ್ಬನಿದ್ದ; ತಾನಿರುವ ಸ್ಥಿತಿಯಲ್ಲಿಯೇ ತಾನೇ ಮೇಲೆದ್ದು ನಿಲ್ಲಬೇಕೆಂಬ ‘ಛಲವಾದಿ’ ನಟನೊಬ್ಬನಿದ್ದ, ಭಾವುಕ ಶ್ರಮಿಕನೊಬ್ಬನಿದ್ದ ಎನ್ನುವುದು ನನ್ನೊಳಗಿನ ತಿಳಿವು.
ಕನ್ನಡನಾಡಿನಲ್ಲಿ ‘ಛಲವಾದಿ’ ಎಂದರೆ ದಲಿತ ಸಮುದಾಯಗಳಲ್ಲಿ ಊರೂರ ಸಂಕಟ, ನ್ಯಾಯಗಳನ್ನು ಸಾರುವಾತ. ಅಂತಹ ಸಮುದಾಯದಲ್ಲಿ ಹುಟ್ಟಿ ಬೆಳೆದ ಚೇರನ್ ದುಃಖಗಳನ್ನು ಉಂಡುಟ್ಟಿ ಬೆಳೆದಾತ. ಆತನ ಹುಟ್ಟೂರು ಮಧುರೈ ಆಸುಪಾಸು. ಮಧುರೈ ನೆಲ ಒನ್ಬಗೆಯಲ್ಲಿ ಭಾವಾವೇಶದ ಕೆಂಡವನ್ನು ಗರ್ಭದಲ್ಲಿಯೇ ಹುಟ್ಟಿಕೊಂಡ ಭೂಮಿ. ಅಲ್ಲಿನ ನೆಲದ ಕತೆಯನ್ನೇ ತನ್ನ ‘ಭಾರತಿ ಕಣ್ಣಮ್ಮ’ ಸಿನಿಮಾದ ಮೂಲಕ ಗುರುತಿಸಿಕೊಂಡ ಚೇರನ್ (ಮೊದಲನೇ ನಿರ್ದೇಶನದ ಚಿತ್ರ) ಅಲ್ಲಿ ಜಾತಿಯ ಮೇಲು-ಕೀಳುಗಳನ್ನು ಮುಂಚೂಣಿಗೆ ತಂದ ನಿರ್ದೇಶಕ(ಈ ಚಿತ್ರ ‘ಉಸಿರೇ’ ಎಂಬ ಹೆಸರಿನಲ್ಲಿ ಕನ್ನಡದಲ್ಲೂ ಬಂತು).
ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ
ನಾನು ಅವನ ಪ್ರೀತಿಗೆ ಮೊದಲು ಬಿದ್ದಿದ್ದು ‘ದೇಸೀಯಗೀತಂ’ ಸಿನಿಮಾದ ಮೂಲಕ. ಆಗ ಡಿಗ್ರಿಯ ಎರಡನೆಯ ವರ್ಷದಲ್ಲಿದ್ದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಾ, ನನ್ನ ಬ್ರಾಹ್ಮಣ ಗೆಳೆಯ ಕ್ಯಾಷಿಯರ್ ಆಗಿದ್ದ ಮಾಂಸಾಹಾರಿ ಹೋಟೆಲ್‌ನ ಸಣ್ಣ ಕೊಠಡಿಯೊಂದರಲ್ಲಿ ಉಳಿಯುತ್ತಿದ್ದಾಗ ಮೈಸೂರಿನ ಉಡ್ ಲ್ಯಾಂಡ್ಸ್ ಥಿಯೇಟರ್ ನಲ್ಲಿ ‘ದೇಸಿಯಗೀತಂ’ ನೋಡಿದ್ದೆ. ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದ ಯುವತಂಡ ಮುಖ್ಯಮಂತ್ರಿಯ ಕುಟುಂಬವನ್ನೇ ಅಪಹರಿಸುವ ‘ವ್ಯವಸ್ಥಾವಿರೋಧಿ’ ಕತೆಯಾಗಿತ್ತದು. ಕನ್ನಡದ ಸತ್ವಶಾಲಿ ನಿರ್ದೇಶಕ ಸಿದ್ದಲಿಂಗಯ್ಯನವರ ಮಗ ಮುರಳಿ ಆ ಚಿತ್ರದ ನಾಯಕ. ಡಿಗ್ರಿಯ ದಿನಗಳಲ್ಲಿ ನಮ್ಮಂತಹ ಯುವಕರಲ್ಲಿ ರೊಚ್ಚು ಎಬ್ಬಿಸಿದ್ದ ಚಿತ್ರ ಅದು.

ಮುಂದೆ ಚೇರನ್ ನನ್ನನ್ನು ಚುಚ್ಚಿದ್ದು ‘ತವಮೈಯ್ ತವಮಿರುಂದು’ ಚಿತ್ರದ ಭಾವುಕ ಫ್ಯಾಮಿಲಿ ಡ್ರಾಮಾ ಮೂಲಕ. ಅದು ರಾಷ್ಟ್ರೀಯ ಪ್ರಶಸ್ತಿ ಪಡೆದ ಮೇಲೆ ನಮಗೆಲ್ಲ ರೋಮಾಂಚನ! ‘ಆಟೋಗ್ರಾಫ್’ ಚಿತ್ರವನ್ನು ತನ್ನ ಸ್ವನಿರ್ದೇಶನದಲ್ಲಿ ‘ಮೈ ಆಟೋಗ್ರಾಫ್’ ಮಾಡಿದ ಸುದೀಪ್ ಅದೇ ಯಶಸ್ಸಿನ ಬೀಗಿನಲ್ಲಿ ‘ತವಮೈಯ್ ತವಮಿರುಂದು’ ಚಿತ್ರವನ್ನೂ ಕೂಡ ವಿಷ್ಣುವರ್ಧನ್ ಜೊತೆ ಮಾಡುವುದಾಗಿ ಘೋಷಿಸಿದ್ದರೂ ಕೂಡ; ಆತನ ಪಾಲಿಗೆ ಅದು ಕೈಗೂಡಲೇ ಇಲ್ಲ!
ಚೇರನ್ ಮತ್ತೆ ನನ್ನನ್ನು ಮೋಡಿಗೊಳಮಾಡಿದ್ದು ‘ಮಾಯಾಕನ್ನಾಡಿ'(2007) ಸಿನಿಮಾದಲ್ಲಿ. ಕ್ಷೌರಿಕನೊಬ್ಬ ಸಿನಿಮಾ ಕನಸು ಕಂಡು, ಅದರೊಳಗಿನ ಸಿಕ್ಕಿಗೆ, ಕ್ರೈಂಗೆ ಸಿಲುಕಿ ಮರಳಿ ತನ್ನದೇ ಕಾಯಕದಲ್ಲಿ ನೆಮ್ಮದಿ ಕಂಡುಕೊಳ್ಳುವ ಕಥೆಯ ಸಿನಿಮಾವದು.
ಅವನ ಸಿನಿಮಾ ಹುಚ್ಚಿಗೆ ಬಿದ್ದ ನಾನು 2009ರಲ್ಲಿ ಬಂದ ‘ಪೊಕ್ಕಿಶಂ’ ಹುಡುಕಿಕೊಂಡು ಅಲೆದದ್ದೇ ಅಲೆದೆ. ಆ ‘ನಿಧಿ’ ಕೊನೆಗೂ ನನಗೆ ಸಿಕ್ಕಿದ್ದು(‘ಪೊಕ್ಕಿಶಂ’ ಎಂದರೆ ಕನ್ನಡದಲ್ಲಿ ‘ನಿಧಿ’ ಎಂದರ್ಥ) ಒಂದು ಹಳೆಯ ಡಿವಿಡಿ ಅಂಗಡಿಯಲ್ಲಿ. ಈ ಹೊತ್ತಿನ ಸೋಶಿಯಲ್ ಮೀಡಿಯಾದ ಪ್ರೇಮ, ಹಳೆಗಾಲದ ಕಾಯುವಿಕೆಯ ಪ್ರೇಮವನ್ನು ತಣ್ಣಗಿನ ತಹತಹಿಕೆಯಲ್ಲಿ ಚೇರನ್ ಕಟ್ಟಿದ ಸಿನಿಮಾ ಅದು. ಹಿಂದೂ ಹುಡುಗನೊಬ್ಬ ಮುಸ್ಲಿಂ ಗೆಳತಿಯನ್ನು ತನ್ನದೇ ಮಿತಿಯಲ್ಲಿ ಹಂಬಲಿಸುವ ಅಪರೂಪದ ಕತೆ. ಕಲ್ಕತ್ತಾದಲ್ಲಿ ಬದುಕುತ್ತಾ ತನ್ನೂರಿನ ಮುಸ್ಲಿಂ ಸಂಗಾತಿಗೆ ಪುಟಗಟ್ಟಲೆ ಪತ್ರ ಬರೆಯುವ ಪ್ರೇಮಿಯ ಹೆಸರು ‘ಲೆನಿನ್’! ಆ ಸಿನಿಮಾ ಕಮರ್ಷಿಯಲ್ ಆಗಿ ಹೆಚ್ಚು ಸದ್ದು ಮಾಡದಿದ್ದರೂ ನನ್ನನ್ನು ಹೆಚ್ಚು ಕದಲುವಂತೆ ಮಾಡಿದ್ದು ಹೆಚ್ಚು ನಿಜ.
ಇದನ್ನು ಓದಿದ್ದೀರಾ?: ನೆನಪು | ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ಈ ಮಧ್ಯೆ ಆತನ ನಿರ್ದೇಶನ, ನಟನೆಯ ಒಂದೆರಡು ಸಿನಿಮಾಗಳು ಬಂದು ಹೋದವು, ಕಾಡದೆ ಉಳಿದವು. ಮತ್ತೂ ನಟನಾಗಿ ಚೇರನ್ ನನ್ನನ್ನು ಕಾಡಿ ಕಂಗೊಳಿಸಿದ್ದು ‘ಆಡೋಂ ಕೂತ್ತು’, ‘ಯುದ್ಧಂ ಸೈ’, ‘ಮುರನ್’ ಸಿನಿಮಾಗಳ ಮೂಲಕ. ಮಿಷ್ಕಿನ್ ನಿರ್ದೇಶನದ ‘ಯುದ್ಧಂ ಸೆಯ್’ ಚಿತ್ರವನ್ನು ನಾನು ಮೈಸೂರಿನ ರಾಜಕಮಲ್ ಥಿಯೇಟರ್‍ನಲ್ಲಿ ಮೊದಲ ಬಾರಿಗೆ ನೋಡಿ ಕಥೆಯ ‘ಥ್ರಿಲ್’ ಅರ್ಥವಾಗದೆ ಮತ್ತೊಮ್ಮೆ ನೋಡಿ ಅದರ ಶೈಲಿಗೆ ಬೆರಗುಗೊಂಡಿದ್ದಿದೆ(ಅದನ್ನೇ ಕನ್ನಡದಲ್ಲಿ ಮಾಲಾಶ್ರೀ ಅಭಿನಯದಲ್ಲಿ ‘ಘರ್ಷಣೆ’ ಎಂಬ ಸಿನಿಮಾದಲ್ಲಿ ಕೆಟ್ಟದಾಗಿ ರಿಮೇಕ್ ಮಾಡಲಾಗಿದೆ). ಚೇರನ್ ಅಭಿನಯಿಸಿರುವ ‘ಆಡೋಂ ಕೂತ್ತು’ ಚಿತ್ರದಲ್ಲಿ ದೊಂಬರಾಟದ ಸಮುದಾಯದ ನೋವು, ಅವಮಾನಗಳನ್ನು ಸಿನಿಮಾ ಕಂಡರಿಸಿರುವ ಬಗ್ಗೆ ತಮಿಳುನಾಡಿನಲ್ಲಿಯೂ ಚರ್ಚೆಯಾಗಿಲ್ಲ.
ನಟನಾಗಿ ಚೇರನ್ ‘ಮುರನ್’ ಸಿನಿಮಾದಲ್ಲಿ ಭಯಭೀತನಾಗಿ, ‘ರಾಮನ್ ತೇಡಿಯ ಸೀತೈನಲ್ಲಿ’ ಬಿಕ್ಕಲನಾಗಿ, ‘ಸೊಲ್ಲಾ ಮರಂದ ಕದೈ’ ಚಿತ್ರದಲ್ಲಿ ಅಸಹಾಯಕ ಅಳಿಯನಾಗಿ, ‘ರಾಜಾವುಕ್ಕು ಚೆಕ್’ ಸಿನಿಮಾದಲ್ಲಿ ಮಗುವೊಂದರ ಅಪ್ಪನಾಗಿ ಸಹಜಾಭಿನಯಕ್ಕೆ ಸಲ್ಲಿಸಿರುವ ನಟನೆ ಗಮನಾರ್ಹ.
ಇವೆಲ್ಲವೂ ಮುಗಿದು ನನ್ನ ಪ್ರೀತಿಯ ಚೇರನ್ ಅವರ ಹೊಸ ಚಿತ್ರಕ್ಕಾಗಿ ನಾನು ಕಾಯುತ್ತಲೇ ಇದ್ದೆ. 2023ರಲ್ಲಿ ಬಂದ ಆತನ ಅಭಿನಯದ ‘ತಮಿಳ್ ಕುಡಿಮಗನ್’ ಬಹಳ ಅಪರೂಪದ ಚಿತ್ರ. ಕ್ಷೌರಿಕ ಪದವೀಧರನೊಬ್ಬ ತನ್ನ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಹೊರಡುವ ಸಮಯದಲ್ಲೇ ಆತನನ್ನು ಸವರ್ಣೀಯರು ತಮ್ಮ ಕರ್ಮಠ ಕಾರ್ಯಗಳಿಗೆ ಹಿಡಿದಿಟ್ಟು ಕ್ರೌರ್ಯ ಮೆರೆಯುವ ಮೇಲ್ವರ್ಗದ ಜನರ ಮನಸ್ಥಿತಿಯನ್ನು ಅನಾವರಣಗೊಳಿಸುವ ಈ ಕಥನ ಚಿತ್ರವಾಗಿ ಹೆಚ್ಚು ಸದ್ದು ಮಾಡಲಿಲ್ಲ. ಮೊನ್ನೆ ತಾನೆ ಬಂದ ಮಲಯಾಳಂನ ‘ನರಿವೇಟ್ಟ’ದಲ್ಲಿಯೂ ಕೂಡ ಚೇರನ್ ಗೆ ಹೆಚ್ಚಿನ ‘ಕೋಟಾ’ ಸಿಕ್ಕಿದಂತಿಲ್ಲ. ಆದರೂ ನಾನು ‘ಚೇರನೀನ್ ಇಯಕ್ಕತ್ತೀಲೆ’ (ಚೇರನ್ ನಿರ್ದೇಶನದಲ್ಲಿ) ಎಂಬ ಟೈಟಲ್ ಕಾರ್ಡ್‌ಗಾಗಿ ಕಾಯುತ್ತಲೇ ಇದ್ದೆ.
ನಿರ್ದೇಶನಕ್ಕೆ ಮರಳಿರುವ ಚೇರನ್ ಮೇಲೆ ಒಂದಿಷ್ಟು ಭರವಸೆ, ಪ್ರೀತಿ, ಮತ್ತಿಷ್ಟು ಪ್ರಶ್ನೆಗಳು…
‘ತಿರುಮಣಂ’ ಎಂಬ ಸೊಗಸಾದ ಫ್ಯಾಮಿಲಿ ಡ್ರಾಮಾದ ನಂತರ ಚೇರನ್ ಕೈಗೆತ್ತಿಕೊಂಡಿರುವ ಸಿನಿಮಾ ‘ಅಯ್ಯಾ’. ತಮಿಳುನಾಡಿನಲ್ಲಿ 1987ರಲ್ಲಿ ಹಿಂದುಳಿದ ಜಾತಿಯಾದ ‘ವೆನ್ನಿಯಾರ್’ ಸಮುದಾಯಕ್ಕಾಗಿ ಹೋರಾಟ ನಡೆಸಿ ಮುಂಚೂಣಿಗೆ ಬಂದ ಎಸ್. ರಾಮದಾಸ್ ಅವರ ಬದುಕಿನ, ಹೋರಾಟದ ಕಥನವೇ ಈ ಸಿನಿಮಾದ ತಿರುಳು ಎಂಬುದನ್ನು ಚೇರನ್ ತಿಳಿಸಿದ್ದಾರೆ. ಅವರು ಬಿಡುಗಡೆ ಮಾಡಿರುವ ಪೋಸ್ಟರ್ ಗಳು ಕೂಡ ಇದನ್ನೇ ಹೇಳುತ್ತಿವೆ. ಸಿನಿಮಾದ ಸಬ್ ಟೈಟಲ್ ನಲ್ಲಿನ ‘ದಿ ಲಯನ್ ಆಫ್ ತಮಿಳುನಾಡು’ ಎಂಬ ಘೋಷ ವಾಕ್ಯ ನಮ್ಮಂಥ ಚೇರನ್ ಪ್ರಿಯರನ್ನು ಗಲಿಬಿಲಿಗೊಳಿಸುವಂತಿದೆ.

ಎಸ್. ರಾಮದಾಸ್ ಅವರು ತಮಿಳುನಾಡಿನ ಮೆಜಾರಿಟಿ ಜಾತಿಗಳಲ್ಲೊಂದಾದ ವೆನ್ನಿಯಾರ್ ಸಮುದಾಯವನ್ನು ದಲಿತ ವಿರೋಧಿ ಗುಂಪಾಗಿ ಕಟ್ಟಿದರೆಂದು ಇತಿಹಾಸ ವಿವರಿಸುತ್ತದೆ. ಹಿಂದುಳಿದ ಜಾತಿಗಳ ಸಮುದಾಯಗಳ ಮೀಸಲಾತಿಗಾಗಿ ‘ವೆನ್ನಿಯಾರ್ ಕ್ಷತ್ರಿಯ’ ಸಮುದಾಯವನ್ನು ಮುಂದಿಟ್ಟುಕೊಂಡು ಅವರು 1987ರಲ್ಲಿ ನಡೆಸಿದ ಹೋರಾಟದಲ್ಲಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಾಕಿದ್ದು, 20ಕ್ಕೂ ಹೆಚ್ಚು ದಲಿತರು ಕೊಲೆಗೀಡಾಗಿದ್ದು, ನೂರಾರು ಮರಗಳ ಮಾರಣಹೋಮ ನಡೆಸಿದ್ದು ಈ ಚಳವಳಿಯ ಒಂದು ಭಾಗ. ನೂರಾರು ಹಿಂದುಳಿದ ಜಾತಿಗಳನ್ನು ಓಲೈಸುತ್ತಾ, ಸಂಘಟಿಸುತ್ತಾ ದಲಿತ ಸಮುದಾಯಗಳನ್ನು ತುಳಿಯುತ್ತಾ ಮೇಲೆದ್ದು ಬಂದ ಪ್ರಬಲ ಕೋಮುಗಳ ರಾಜಕೀಯ ನೇತಾರಿಕೆಯನ್ನು ರಾಮದಾಸ್ ಅವರ ‘ಅಯ್ಯಾ’ ಕಥಾನಕ ಎತ್ತಿ ಹಿಡಿಯಲಿದೆಯೆ? ನಿರ್ದೇಶಕ ಚೇರನ್ 1987 ಚಳವಳಿಯನ್ನಷ್ಟೇ ಈ ಸಿನಿಮಾದಲ್ಲಿ ತರಲಿದ್ದಾರೆಯೆ? 2026ರಲ್ಲಿ ನಡೆಯಲಿರುವ ತಮಿಳುನಾಡಿನ ಚುನಾವಣೆಯ ಮುನ್ಸೂಚಿಕೆಯಾಗಿ, ರಾಮದಾಸ್ ಅವರನ್ನು ಮುನ್ನೆಲೆಗೆ ತರುವ ಭೂಮಿಕೆಯಾಗಿ ಈ ಚಿತ್ರ ರೂಪಿಸಲ್ಪಡುತ್ತಿದೆಯೆ? ಒಬ್ಬ ಸಿನಿಮಾ ನಿರ್ದೇಶಕನಾಗಿ ಬಸವಳಿದ ಕಾಲದಲ್ಲಿ ಚೇರನ್ ತನ್ನ ಅಸ್ತಿತ್ವಕ್ಕಾಗಿ ಕೈಗೆತ್ತಿಕೊಂಡಿರುವ ‘ಪ್ರಾಜೆಕ್ಟ್’ ಆಗಿರಬಹುದೆ ಇದು? ಅಥವಾ ಮತ್ತೆ ಎದ್ದು ಬರುವೆನೆಂಬ ‘ಛಲವಾದಿ’ಯ ನೋವೆ ಇದು?
-ಇವೆಲ್ಲ ಸದ್ಯಕ್ಕೀಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು. ಯಾಕೆಂದರೆ ಬಹುಕೋಟಿ ವೆಚ್ಚದ ಈ ಚಿತ್ರದ ನಿರ್ಮಾಪಕರು ರಾಮದಾಸ್ ಅವರು ಸ್ಥಾಪಿಸಿದ ‘ಪಟ್ಟಾಲಿ ಮಕ್ಕಳ್ ಕಾಚ್ಚಿ’ಯ ಗೌರವಾಧ್ಯಕ್ಷರ ಮಗ ತಮಿಳ್ ಕುಮಾರ್ ಅವರು.
ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ
ತಮ್ಮ ಸಿನಿಮಾಗಳ ಮೂಲಕ ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯವನ್ನು ಲೋಕಕ್ಕೆ ಕಾಣಿಸಿದ, ಮುಟ್ಟಿಸಿಕೊಳ್ಳದವರನ್ನೂ ಮುಟ್ಟಿಸಿಕೊಳ್ಳುವಂತೆ ಮಾಡಿದ ನನ್ನ ಪ್ರೀತಿಯ ಚೇರನ್ ‘ಅಯ್ಯಾ’ ಸಿನಿಮಾದ ಮೂಲಕ 1987ರ ಕಾಲಘಟ್ಟದ ಹಿಂದುಳಿದ ವೆನ್ನಿಯಾರ್ ಸಮುದಾಯದ ಮೀಸಲಾತಿ ಚಳವಳಿಯನ್ನು ಅದು ಇದ್ದಂತೆಯೇ ನಿರೂಪಿಸುತ್ತಾರೆಯೆ, ಅಂದಿನ ಸತ್ಯಗಳನ್ನು ನಿಷ್ಠುರವಾಗಿ ದಾಖಲಿಸುತ್ತಾರೆಯೆ? ಇಲ್ಲವೇ ರಾಮದಾಸ್ ಅವರ ಸಾಕ್ಷ್ಯ ಚಿತ್ರವನ್ನಷ್ಟೇ ತೋರಿಸಿ ಕೈ ತೊಳೆದುಕೊಳ್ಳುತ್ತಾರೆಯೆ?
ಅವೊತ್ತಿನಿಂದಲೂ ಚೇರನ್ ಸಿನಿಮಾಗಳನ್ನು ಪ್ರೀತಿಸುತ್ತಾ ಬಂದಿರುವ ಯಾವೊಬ್ಬ ಸಿನಿಮಾ ಪ್ರೇಮಿಯೂ ಕೇಳಬಹುದಾದ ಪ್ರಶ್ನೆಗಳು ಇವು.
ಪ್ರಶ್ನೆಗಳು ಏನೇ ಇರಲಿ, ಚೇರನ್ ಎಂಬ ನಿಜ ತಾಕತ್ತಿನ ನಿರ್ದೇಶಕನ ಮುಂದಿನ ಚಿತ್ರದಲ್ಲಿನ ಉತ್ತರಕ್ಕಾಗಿ ಸಿನಿಮಾ ಬರುವವರೆಗೂ ಕಾಯಬೇಕು.

ಮಂಜುನಾಥ್ ಲತಾ
'ಮಂಜುನಾಥ ಲತಾ' ಎಂಬ ಕಾವ್ಯನಾಮದಿಂದ ಬರೆಯುವ ಮಂಜುನಾಥ್ ಎಸ್. ಅವರು ಪತ್ರಿಕೋದ್ಯಮ, ಅಭಿವೃದ್ದಿಪರ ಚಟುವಟಿಕೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಣ್ಣ ಕಥೆಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ. ತೆಂಕಲಕೇರಿ, ಕತೆ ಎಂಬ ಇರಿವ ಅಲಗು, ಸ್ಟೋರಿ ಟೆಲ್ಲರ್ ಜವರ ಇನ್ನಿಲ್ಲ, ಕಥಾಗತ(ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ(ಕವನ ಸಂಕಲನಗಳು), ಪಲ್ಲಂಗ(ಕಾದಂಬರಿ), ಮಾತಿನ ಓದು(ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಗಳಿಸಿವೆ.




