ಸುಮಾರು 10 ಟನ್‌ಗಳಿಗಿಂತ ಹೆಚ್ಚು ತೂಕದ 70 ಅಡಿ ಉದ್ದದ ಕಬ್ಬಿಣದ ಸೇತುವೆ ರಾತ್ರೋರಾತ್ರಿ ಕಣ್ಮರೆಯಾಗಿರುವ ಘಟನೆ ಛತ್ತೀಸ್‌ಗಢದ ಕೊರ್ಬಾ ನಗರದಲ್ಲಿ ನಡೆದಿದೆ. ಖದೀಮರು ಬೃಹತ್ ಸೇತುವೆಯನ್ನೇ ಕದ್ದೊಯ್ದಿದ್ದು, ಸ್ಥಳೀಯ ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ಸ್ಡಿಯೊ ಎಡ ಕಾಲುವೆಗೆ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆ ಸೇತುವೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಕೃತ್ಯದಲ್ಲಿ 15 ಮಂದಿ ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಅವರು ಸೇತುವೆಯನ್ನು ಕತ್ತರಿಸಿ ಕದ್ದೊಯ್ದಿದ್ದಾರೆ. ರದ್ದಿಯಲ್ಲಿ ಮಾರಾಟ ಮಾಡಲು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಳ್ಳರ ಗುಂಪಿನ 5 ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮುಂಜಾನೆ ನೋಡಿದಾಗ ನಾಳೆ ಬಳಿ ಸೇತುವೆಯೇ ಇರಲಿಲ್ಲ. ಅದನ್ನು ಕಂಡ ನಿವಾಸಿಗಳು ಘಟನೆ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಗುರುತಿಸಲಾಗದ ಆರೋಪಿಗಳು ಸೇತುವೆಯ ಕಬ್ಬಿಣವನ್ನು ಕತ್ತರಿಸಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಪ್ರಕರಣದಲ್ಲಿ 15 ಆರೋಪಿಗಳನ್ನು ಗುರುತಿಸಿದ್ದಾರೆ. ಅವರಲ್ಲಿಲೋಚನ್ ಕೆವತ್ (20), ಜಯಸಿಂಗ್ ರಜಪೂತ್ (23), ಮೋತಿ ಪ್ರಜಾಪತಿ (27), ಸುಮಿತ್ ಸಾಹು (19) ಮತ್ತು ಕೇಶವಪುರಿ ಗೋಸ್ವಾಮಿ ಅಲಿಯಾಸ್ ‘ಪಿಕ್ಚರ್’ (22) ಎಂಬವರನ್ನು ಬಂಧಿಸಿದ್ದಾರೆ. ಈ ಐವರೂ ಸಿಎಸ್ಇಬಿ ಪೊಲೀಸ್ ಚೌಕಿ ಪ್ರದೇಶದ ನಿವಾಸಿಗಳಾಗಿದ್ದಾರೆ. ಉಳಿದ 10 ಮಂದಿಯ ಬಂಧನಕ್ಕಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಆರೋಪಿಗಳು ಕದ್ದಿದ್ದ 7 ಟನ್ ಕಬ್ಬಿಣ, ಅದರ ಸಾಗಾಟಕ್ಕೆ ಬಳಸಲಾಗಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




