ಮುಂಬೈನ ವಾಯು ಗುಣಮಟ್ಟವು ‘ಅಪಾಯಕಾರಿ’ ಹಂತಕ್ಕೆ ತಲುಪಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ದೀಪಿಕಾ, “ಈ ನಗರ (ಮುಂಬೈ ಮತ್ತು ಇಲ್ಲಿನ ಮಕ್ಕಳು ಉಸಿರುಗಟ್ಟುತ್ತಿದ್ದಾರೆ! ಇದು ಹೇಗೆ ಸರಿಯಾಗುತ್ತದೆ!? ಬಿಎಂಸಿ ಮತ್ತು ಬಿಎಂಸಿ ಆರೋಗ್ಯ ವಿಭಾಗವು ನಗರವಾಸಿಗಳಿಗೆ ಅಗತ್ಯ ನೆರವು ನೀಡಬೇಕು. ಹೆಚ್ಚುತ್ತಿರುವ ಮಾಲಿನ್ಯದ ಬಿಕ್ಕಟ್ಟನ್ನು ಪರಿಹರಿಸಲು ಅಧಿಕಾರಿಗಳು ಮಧ್ಯಪ್ರವೇಶಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಅವರ ಮಗಳು ಒಂದೂವರೆ ವರ್ಷದ ‘ದುವಾ’ ಸೇರಿದಂತೆ ಮುಂಬೈನಲ್ಲಿ ಬೆಳೆಯುತ್ತಿರುವ ಸಣ್ಣ ಮಕ್ಕಳ ಮೇಲೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವು ಹೇಗೆ ಪರಿಣಾಮ ಬೀರಬಹುದು ಎಂಬ ಕುರಿತು ದೀಪಿಕಾ ಚಿಂತಿತರಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮುಂಬೈನ ಗಾಳಿಯ ಗುಣಮಟ್ಟ ಹದಗೆಡುತ್ತಿದೆ. ನಗರದ ಹಲವು ಪ್ರದೇಶಗಳಲ್ಲಿ AQI ಮಟ್ಟವು ಕಳಪೆಯಿಂದ ಅತ್ಯಂತ ಕಳಪೆ ವರ್ಗಕ್ಕೆ ಕುಸಿದಿದೆ. 2026ರ ಫೆಬ್ರವರಿಯಲ್ಲಿ, ನಗರದಾದ್ಯಂತ AQI ಮಟ್ಟವು 230 ರಿಂದ 250ರ ನಡುವೆ ವರದಿಯಾಗಿದ್ದರೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC), ಘಾಟ್ಕೋಪರ್ ಮತ್ತು ಮುಲುಂಡ್‌ನಂತಹ ಸ್ಥಳಗಳಲ್ಲಿ 290ಕ್ಕೆ ತಲುಪಿತ್ತು. ಇದು ‘ತೀವ್ರ’ ವರ್ಗಕ್ಕೆ ಸಮೀಪದಲ್ಲಿದೆ.
ನಗರದಾದ್ಯಂತ ನಡೆಯುತ್ತಿರುವ ಬೃಹತ್ ನಿರ್ಮಾಣ ಮತ್ತು ಪುನರ್ ಅಭಿವೃದ್ಧಿ ಯೋಜನೆಗಳಿಂದ ಉಂಟಾಗುವ ಧೂಳೇ ಈ ಮಾಲಿನ್ಯದ ಏರಿಕೆಗೆ ಪ್ರಮುಖ ಕಾರಣ ಎಂದು ಪರಿಸರ ತಜ್ಞರು ಹೇಳುತ್ತಾರೆ. ಉತ್ಖನನ, ಕಟ್ಟಡಗಳ ಧ್ವಂಸ ಹಾಗೂ ಅವಶೇಷಗಳ ಸಾಗಣೆಯಂತಹ ಚಟುವಟಿಕೆಗಳು PM10 ಮತ್ತು PM2.5 ನಂತಹ ಹಾನಿಕಾರಕ ಕಣಗಳನ್ನು ಗಾಳಿಗೆ ಬಿಡುಗಡೆ ಮಾಡುತ್ತಿವೆ ಎಂದು ವರದಿಯಾಗಿದೆ.
ವಾಯುಮಾಲಿನ್ಯದ ವಿಚಾರದಲ್ಲಿ ನಟಿ ದೀಪಾಕಾ ಮಾತ್ರವಲ್ಲದೆ, ಹಲವಾರು ನಟಿಯರು ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ನಟಿ ಸಯಾಮಿ ಖೇರ್ ಕೂಡ ಮುಂಬೈನ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಬಗ್ಗೆ ಅಸಮಾಧಾನ ಹಂಚಿಕೊಂಡಿದ್ದರು. ತಮ್ಮ ದೈನಂದಿನ ಓಟದ ಅಭ್ಯಾಸವನ್ನು ನೆನಪಿಸಿಕೊಂಡ ಅವರು, “ಹತ್ತು ವರ್ಷಗಳ ಹಿಂದೆ ನಾನು ಓಡುವುದನ್ನು ಪ್ರಾರಂಭಿಸಿದೆ… ಪ್ರತಿದಿನ ಬೆಳಿಗ್ಗೆ ನಾನು ಕಾರ್ಟರ್ ರಸ್ತೆಯಲ್ಲಿ ಸಮುದ್ರದ ತಂಗಾಳಿಯನ್ನು ಆಸ್ವಾದಿಸುತ್ತಾ ಓಡುತ್ತಿದ್ದೆ. ಇಂದು ಬೂಟು ಧರಿಸುವ ಮೊದಲು ಮಾಸ್ಕ್ ಧರಿಸುತ್ತಿದ್ದೇನೆ. ಇದು ಮತ್ತೆ ಸಾಂಕ್ರಾಮಿಕ ರೋಗದ ಕಾಲದಂತೆ ಭಾಸವಾಗುತ್ತಿದೆ. ವ್ಯತ್ಯಾಸವೆಂದರೆ ಈ ಬಾರಿ ಗಾಳಿಯೇ ನಮ್ಮನ್ನು ಕೊಲ್ಲಬಹುದು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಇಸ್ರೇಲ್ ದೋಸ್ತಿ; ಎಫೆಕ್ಟ್ ಮಾತ್ರ ಭಾರತಕ್ಕೆ!
ನಟಿ ರಿಚಾ ಚಡ್ಡಾ ಕೂಡ ಗಾಳಿಯ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬೈನ ಮಾಲಿನ್ಯವನ್ನು ‘ಮಾನವ ನಿರ್ಮಿತ ದುರಂತ’ ಎಂದು ಕರೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಜನರು ಧ್ವನಿ ಎತ್ತುತ್ತಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ನಿರ್ಮಾಣ ಕಾಮಗಾರಿಗಳ ಧೂಳು ಮತ್ತು ಧೂಳು-ನಿಯಂತ್ರಣ ನಿಯಮಗಳ ಉಲ್ಲಂಘನೆಯೇ ಮಾಲಿನ್ಯಕ್ಕೆ ಪ್ರಮುಖ ಕಾರಣ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪರಿಸರ ಮಾರ್ಗಸೂಚಿಗಳನ್ನು ಪಾಲಿಸಲು ವಿಫಲವಾದ ನಿರ್ಮಾಣ ಸ್ಥಳಗಳಿಗೆ ಬಿಎಂಸಿ ಈಗಾಗಲೇ ನೂರಾರು ನೋಟಿಸ್‌ಗಳನ್ನು ಮತ್ತು ಕೆಲಸ ತಡೆಯುವ ಆದೇಶಗಳನ್ನು ನೀಡಿದೆ ಎಂದು ವರದಿಯಾಗಿದೆ.




