ಭಾರತದ AI ಕನಸಿನ ಕಾಲಿಗೆ ಕಚ್ಚಿದ ಚೀನಾದ ʼರೋಬೋ ನಾಯಿʼ

Date:

ಈಗಾಗಲೇ ಹಲವು ಪ್ರಶ್ನೆಗಳ ನೆರಳಿನಲ್ಲಿ ನಿಂತಿರುವ ʼಮೇಡ್ ಇನ್ ಇಂಡಿಯಾʼ ಪರದೆಯ ಮೇಲೆ ಈ ಘಟನೆಗಳು ಮತ್ತಷ್ಟು ಕೆಸರೆರಚಿವೆ. ಸ್ವದೇಶಿ ಉತ್ಪಾದನೆ, ಆವಿಷ್ಕಾರ ಮತ್ತು ಆತ್ಮನಿರ್ಭರತೆಯನ್ನು ವಿಶ್ವದ ಮುಂದೆ ಸಾಕ್ಷಿ ಸಮೇತ ಸಾಬೀತುಪಡಿಸಬೇಕಾದ ಸಮಯದಲ್ಲಿ, ಇಂತಹ ಅಜಾಗರೂಕ ಅನಗತ್ಯ ಎಡವಟ್ಟುಗಳು ದೇಶದ ತೂಕವನ್ನು ಹಗುರಗೊಳಿಸಿವೆ.

ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಮಟ್ಟದ AI ಶೃಂಗಸಭೆ, ಭಾರತವನ್ನು ಕೃತಕ ಬುದ್ಧಿಮತ್ತೆಯ ಹೊಸ ಕೇಂದ್ರವಾಗಿ ಜಗತ್ತಿನ ಮುಂದೆ ನಿಲ್ಲಿಸುವ ಕನಸಿನ ವೇದಿಕೆ. ಜಗತ್ತಿನ ತಾಂತ್ರಿಕ ನೀತಿನಿರ್ಣಾಯಕರು, ತಂತ್ರಜ್ಞಾನ ನಾಯಕರು, ಸಂಶೋಧಕರ ಕಣ್ಣು ಈ ಶೃಂಗದ ಮೇಲೆ ನೆಟ್ಟಿದೆ. ಅದೇ ವೇದಿಕೆಯಲ್ಲಿ, ಒಂದು ʼರೋಬೋ ನಾಯಿʼ (robodog) ದೇಶವನ್ನೇ ಮುಜುಗರಕ್ಕೀಡು ಮಾಡಿದೆ.

ಏನಿದು ಕಥೆ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶೃಂಗಸಭೆಯ ಪ್ರದರ್ಶನ ಮಂಟಪದಡಿ ಉತ್ತರ ಪ್ರದೇಶದ Galgotias University ತನ್ನ ಸ್ಟಾಲ್ ಹಾಕಿತ್ತು. ಅಲ್ಲಿ ʼOrionʼ ಎಂಬ ಹೆಸರಿನ ರೋಬೋ ನಾಯಿಯನ್ನು ಪ್ರದರ್ಶಿಸಲಾಗುತ್ತಿತ್ತು. ನೂರಾರು ಕ್ಯಾಮೆರಾಗಳ ಎದುರು ವಿಶ್ವವಿದ್ಯಾಲಯದ ಪ್ರತಿನಿಧಿ ಪ್ರೊಫೆಸರ್ ನೇಹಾ ಸಿಂಗ್, ʼನಾಯಿʼಯನ್ನು ಪರಿಚಯಿಸಲು ಮುಂದಾದರು. “ಇದು ಭಾರತದಲ್ಲೇ ಅಭಿವೃದ್ಧಿಪಡಿಸಿದ ಅತ್ಯಾಧುನಿಕ AI ರೋಬೋ ಡಾಗ್, ಇದಕ್ಕೆ ಸುಮಾರು 350 ಕೋಟಿ ರೂಪಾಯಿ ವೆಚ್ಚವಾಗಿದೆ ಮತ್ತು ಇದು ʼಮೇಡ್ ಇನ್ ಇಂಡಿಯಾʼದ ಪ್ರತೀಕ” ಎಂದೆಲ್ಲಾ ಹೇಳಿದ ವಿಡಿಯೋವೊಂದು ಹೊರಬಂತು. ಅಲ್ಲಿ ನೆರೆದಿದ್ದವರು ವಾ! ಎಂದು ಹುಬ್ಬೇರಿಸುವ ಹೊತ್ತಿಗೆ ಆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಕೂಡ ಆಯಿತು. ಅಷ್ಟೇ! ನೆಟ್ಟಿಗರು ವಿಡಿಯೋ ನೋಡಿದ್ದೇ ಕಥೆ ಬೇರೆಯದೇ ದಿಕ್ಕಿಗೆ ತಿರುಗಿತು. ಕ್ಷಣಾರ್ಧದಲ್ಲೇ ಈ ವಿಷಯವನ್ನು ನೆಟ್ಟಿಗರು ಚರ್ಚೆಗೆ ಎಳೆದು ಕೂರಿಸಿದರು. ತಂತ್ರಜ್ಞಾನ ಕುರಿತ ಜ್ಞಾನವುಳ್ಳವರು ಆ ರೋಬೋ ನಾಯಿಯ ವಿನ್ಯಾಸ, ಚಲನೆ, ಸೆನ್ಸರ್ ವ್ಯವಸ್ಥೆ ನೋಡುತ್ತಲೇ ಅದರ ಜಾಡು ಹಿಡಿದುಬಿಟ್ಟರು. ಇದು ಭಾರತದದ್ದಲ್ಲ. ಇದು ಚೀನಾದ Unitree Robotics ನಿರ್ಮಿಸಿರುವ, ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ Unitree Go2. ಇದರ ಬೆಲೆ ಸುಮಾರು ಮೂರು ಲಕ್ಷ ರೂಪಾಯಿ ಎಂಬ ಸತ್ಯ ಜಗಜ್ಜಾಹೀರಾಯಿತು. ಭಾರತದ ಘನತೆ ಕೂಡ ಜಗತ್ತಿನ ಮುಂದೆ ಹಾಸ್ಯಾಸ್ಪದವಾಗಿ ಕಾಣುವಂತಾಯಿತು.

image 2026 02 19T170126.692

ಅದೊಂದು ಸಾಮಾನ್ಯ ವೇದಿಕೆಯಾಗಿರಲಿಲ್ಲ. India AI Impact Summit ಭಾರತ ತನ್ನ AI ಭವಿಷ್ಯವನ್ನು ಜಗತ್ತಿಗೆ ತೋರಿಸಬೇಕಿದ್ದ ವೇದಿಕೆ. ಅಲ್ಲಿ ಚೀನಾ ನಿರ್ಮಿತ ಉತ್ಪನ್ನವನ್ನು ಭಾರತೀಯ ಆವಿಷ್ಕಾರವೆಂದು ಹೇಳಿದ್ದು ವಿವಿ ಸಹಿತ ಇಡೀ ದೇಶಕ್ಕೆ ಅದೆಷ್ಟು ಆಭಾಸವಾಯಿತೆಂದರೆ, ಕೇಂದ್ರವನ್ನೂ, ಎಕ್ಸ್ಪೋದ ಲೋಪಗಳನ್ನೂ, ಕಾರ್ಯಕ್ರಮ ಸಂಘಟನೆಯ ಅವ್ಯವಸ್ಥೆಯನ್ನೂ ಸಮರ್ಥಿಸಿಕೊಳ್ಳುತ್ತಿದ್ದವರೂ ಕೂಡ ಮುಖ ಮುಚ್ಚಿಕೊಳ್ಳುವಂತಾಯಿತು.

ಕಥೆ ಇಲ್ಲಿಗೆ ಮುಗಿಯಲಿಲ್ಲ. ದೇಶದ ಪ್ರತಿಷ್ಠಿತ ಗಲ್ಗೋಟಿಯಾಸ್‌ ವಿವಿಯ ಭಯಂಕರ ಸುಳ್ಳು, ಮಹಾಮೋಸಗಳು ಬಟಾಬಯಲಾದ ಬಳಿಕ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಯಿತು. ವಿವಿ ಸ್ಟಾಲ್‌ನ್ನು ಶೃಂಗಸಭೆಯಿಂದ ಬಹಿಷ್ಕರಿಸಿತು. ʼತಪ್ಪು ಮಾಹಿತಿ ಪ್ರದರ್ಶನವನ್ನು ಸಹಿಸಲಾಗುವುದಿಲ್ಲʼ ಎಂದಿತು. ವಿಶ್ವವಿದ್ಯಾಲಯದಿಂದ ಕ್ಷಮಾಪಣೆಯೂ ಹೊರಬಂತು. ʼಇದು ಉದ್ದೇಶಪೂರ್ವಕವಲ್ಲ, ತಪ್ಪಾದ ನಿರೂಪಣೆʼ ಎಂದು ಸಮರ್ಥಿಸಿಕೊಳ್ಳಲು ಹೋಗಿ ಮತ್ತೊಮ್ಮೆ ನೆಟ್ಟಿಗರ ಸಿಟ್ಟಿಗೆ ಕಾರಣವಾಯಿತು. ಆದರೆ, ಹೋದ ಘನತೆ ಮರಳಿತೇ?

ಈ ಎಡವಟ್ಟುಗಳನ್ನು ನೋಡುತ್ತಲೇ ನೆಟ್ಟಿಗರು ತರಹೇವಾರಿ ಪೋಸ್ಟ್‌ ಹಂಚಿಕೊಳ್ಳತೊಡಗಿದರು. ಹಾಸ್ಯಭರಿತ ಮೀಮ್ಸ್‌ಗಳು ಸಾವಿರಾರು ಬಾರಿ ಶೇರ್‌ ಆಗತೊಡಗಿದವು.

ಎಕ್ಸ್‌ನ ಬಳಕೆದಾರರೊಬ್ಬರು ಹೀಗೆ ಬರೆದುಕೊಂಡಿದ್ದಾರೆ, “ಮತ್ತೊಂದು ಸುಳ್ಳು! ಮೊದಲನೆಯದಾಗಿ, ಅವರು ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸಂವಹನ ವಿಭಾಗದ ಮುಖ್ಯಸ್ಥೆ (ರೋಬೋನಾಯಿ ಪರಿಚಯಿಸಿದ ನೇಹಾ ಸಿಂಗ್). ಅವರನ್ನು ಕೆಲಸದಿಂದ ತೆಗೆದು ಹಾಕಿಲ್ಲವೆಂದರೆ, ಅವರ ಸಂಸ್ಥೆಯ ಪರವಾಗಿ ಮಾತನಾಡಲು ಅವರು ಅರ್ಹರೇ ಆಗಿದ್ದರು. ಎರಡನೆಯದಾಗಿ, ʼನಾವು ಸ್ವಯಂ ಇಚ್ಛೆಯಿಂದ ಪೆವಿಲಿಯನ್ ಖಾಲಿ ಮಾಡಿದ್ದೇವೆʼ ಎನ್ನುವುದು ಸತ್ಯವಲ್ಲ. ಮೋದಿ ಸರ್ಕಾರ ಮಾನ ಉಳಿಸಿಕೊಳ್ಳಲು ನಿಮ್ಮನ್ನು ಹೊರಹಾಕಿದೆ. ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ದೃಶ್ಯವನ್ನು ನಾವೆಲ್ಲರೂ ನೋಡಿದ್ದೇವೆ” ಎಂದು ಹಣೆ ಚಚ್ಚಿಕೊಂಡಿದ್ದಾರೆ.

ಮತ್ತೊಬ್ಬ ಬಳಕೆದಾರ, “ಇದು ಸಂಪೂರ್ಣ ಅನ್ಯಾಯ. ಕ್ಯಾಮೆರಾ ಮುಂದೆ ಡೊನಾಲ್ಡ್ ಟ್ರಂಪ್ ಪ್ರತಿದಿನ ಸುಳ್ಳು ಹೇಳುತ್ತಾರೆ, ಅದರಿಂದ ಯಾವುದೇ ಪರಿಣಾಮಗಳಲ್ಲ. ಇನ್ನೊಬ್ಬ ಮಹಾನುಭಾವರು ಪುಷ್ಪಕ ವಿಮಾನ ಮತ್ತು ಗಣೇಶನ ಉದಾಹರಣೆ ನೀಡಿ, ವಿಮಾನ ಹಾಗೂ ಪ್ಲಾಸ್ಟಿಕ್ ಸರ್ಜರಿಯನ್ನು ನಾವು ಕಂಡುಹಿಡಿದಿದ್ದೇವೆ ಎಂದು ಹೇಳುತ್ತಾರೆ. ಅವರನ್ನೇ ನೀವು ಪ್ರಧಾನಮಂತ್ರಿ ಮಾಡಿದ್ದೀರಿ. ಹಾಗಾದರೆ ಗಲ್ಗೋಟಿಯಾಸ್ ಮೇಲಷ್ಟೇ ಯಾಕೆ ಭೇದಭಾವ?” ಎಂದಿದ್ದಾರೆ.

ಎಕ್ಸ್ಪೋ ಶುರುವಾದ ಮೊದಲ ದಿನ (ಫೆ.16) ಬೆಂಗಳೂರಿನ AI ಸ್ಟಾರ್ಟ್‌ಅಪ್ ಸಂಸ್ಥೆಯೊಂದರ ಸಹ ಸಂಸ್ಥಾಪಕ ಧನಂಜಯ್‌ ಯಾದವ್‌ ಅವರು, ತಮ್ಮ ಮಳಿಗೆಯಲ್ಲಿ ಇರಿಸಿದ್ದ AI ಸಾಧನಗಳನ್ನು ಅಲ್ಲೇ ಬಿಟ್ಟು ಹೋಗುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ ಬಳಿಕ, ಮರಳಿ ಬಂದಾಗ ಅವು ಕಳವಾಗಿರುವುದನ್ನು ಕಂಡು ಬೆಚ್ಚಿಬಿದ್ದಿರುವುದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಆರೋಪ ಇವರೊಬ್ಬರದ್ದೇ ಅಲ್ಲ. ಅನೇಕ ಉದ್ಯಮಿಗಳು ಮತ್ತು ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಹೆಚ್ಚಿನ ಭದ್ರತಾ ವ್ಯವಸ್ಥೆಯ ನಡುವೆಯೇ ಕಳ್ಳತನ ನಡೆದಿರುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್‌ ಮ್ಯಾಕ್ರೋನ್ ಹಾಗೂ ಬ್ರೆಜಿಲ್ ಅಧ್ಯಕ್ಷ ಲೂಯಿಸ್‌ ಸಿಲ್ವ ಸೇರಿದಂತೆ ಜಾಗತಿಕ ಮಟ್ಟದ ಗಣ್ಯರು ಆಗಮಿಸಿದ್ದ ಸಮ್ಮಿಟ್‌ನಲ್ಲಿ ಅದೇ ಗಲ್ಗೋಟಿಯಾಸ್‌ ವಿವಿ ತನ್ನ ಇನ್ನೊಂದು ಪ್ರತಿಭಾ ಪ್ರದರ್ಶನಕ್ಕೆ ಮುಂದಾಯಿತು. ಈ ಬಾರಿ ಪ್ರದರ್ಶನಕ್ಕಿಟ್ಟಿದ್ದ ಡ್ರೋನ್ ಒಂದು ಉನ್ನುತ ಮಟ್ಟದ ತಂತ್ರಜ್ಞಾನ ಮಾದರಿಗಿಂತಲೂ ಶಾಲಾ ಮಟ್ಟದ ಪ್ರಾಜೆಕ್ಟ್‌ನಂತೆ ಕಾಣಿಸಿಕೊಂಡಿತು. ಥರ್ಮಕೋಲ್‌ನಿಂದ ಮಾಡಲ್ಪಟ್ಟಂತೆ ಕಾಣುವ ಈ ಡ್ರೋನ್‌ನ್ನು ಪ್ಲಾಸ್ಟಿಕ್ ಫಿಲ್ಮ್‌ನಿಂದ ಸುತ್ತಿ, ರಬ್ಬರ್ ಬ್ಯಾಂಡ್‌ಗಳಿಂದ ಕಟ್ಟಲಾಗಿತ್ತು. ಅಂತಾರಾಷ್ಟ್ರೀಯ AI ಶೃಂಗಸಭೆಯಂತಹ ಮಹತ್ವದ ವೇದಿಕೆಯಲ್ಲಿ ಇಂತಹ ತಾತ್ಕಾಲಿಕ, ಅಸಮರ್ಪಕ ಮಾದರಿಯನ್ನು ಪ್ರದರ್ಶಿಸಿರುವುದು ನೆಟ್ಟಿಗರನ್ನು ಅಕ್ಷರಶಃ ಬೆಚ್ಚಿಬೀಳಿಸಿತು.

ಎಕ್ಸ್ ಬಳಕೆದಾರರೊಬ್ಬರು ಈ ಡ್ರೋನ್ ಮಾದರಿಯ ವೀಡಿಯೊ ಹಂಚಿಕೊಂಡು, “ಗಲ್ಗೋಟಿಯಾದವರು ಅಂತಾರಾಷ್ಟ್ರೀಯ AI ಶೃಂಗಸಭೆಗೆ ಅಕ್ಷರಶಃ ಥರ್ಮಕೋಲ್‌ನಿಂದ ಮಾಡಿದ ಡ್ರೋನ್ ತಂದಿದ್ದಾರೆ. ಈ ವಿಶ್ವವಿದ್ಯಾಲಯದ UGC ಮಾನ್ಯತೆ ರದ್ದುಪಡಿಸಿ. ಇವರು ವಿದ್ಯಾರ್ಥಿಗಳ ಜೀವನ ಹಾಳು ಮಾಡುತ್ತಿದ್ದಾರೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಅಶುತೋಷ್ ಮಿಶ್ರಾ ಕೂಡ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, “ಗಲ್ಗೋಟಿಯಾದ ಡ್ರೋನ್ ಮಾದರಿ ನೋಡಿದ್ದೀರಾ? ಅಂತಾರಾಷ್ಟ್ರೀಯ AI ಕಾರ್ಯಕ್ರಮದಲ್ಲಿ ಥರ್ಮಕೋಲ್‌ನಿಂದ ಮಾಡಿದ, ಫಾಯಿಲ್ ಸುತ್ತಿದ, ರಬ್ಬರ್ ಬ್ಯಾಂಡ್‌ಗಳಿಂದ ಕಟ್ಟಿದ ಡ್ರೋನ್ ಪ್ರದರ್ಶಿಸಿದ್ದಾರೆ. ನಾಲ್ಕನೇ ತರಗತಿಯ ಮಕ್ಕಳು ಶಾಲಾ ಪ್ರಾಜೆಕ್ಟ್‌ಗೆ ಮಾಡುವ ಮಾದರಿಯಂತಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, “ಈ ಶೃಂಗಸಭೆಯೊಂದು ಅಸ್ತವ್ಯಸ್ತವಾದ ಪಿಆರ್‌ ಪ್ರದರ್ಶನ. ಭಾರತದ ಪ್ರತಿಭೆ ಮತ್ತು ಡೇಟಾವನ್ನು ಬಳಸಿಕೊಳ್ಳುವ ಬದಲು, ಶೃಂಗಸಭೆಯನ್ನು ಪಿಆರ್‌ ಪ್ರದರ್ಶನಕ್ಕೆ ಬಳಸಿಕೊಳ್ಳಲಾಗಿದೆ” ಎಂದು ಟೀಕಿಸಿದ್ದಾರೆ.

ಒಂದು ವೇಳೆ ಈ ಮಹಾಸುಳ್ಳನ್ನು ನಿಜವೆಂದು ಜಗತ್ತು ನಂಬಿಬಿಟ್ಟಿದ್ದರೆ ಏನಾಗುತ್ತಿತ್ತು? ಅಂತಾರಾಷ್ಟ್ರೀಯ ಮಾಧ್ಯಮಗಳು ಇದನ್ನು ಭಾರತದ ದೊಡ್ಡ AI ಸಾಧನೆ ಎಂದು ವರದಿ ಮಾಡಿದ್ದರೆ? ಹೂಡಿಕೆದಾರರು, ನೀತಿನಿರ್ಣಾಯಕರು ಆ ಸುಳ್ಳಿನ ಮೇಲೆ ನಿರ್ಧಾರ ಕೈಗೊಂಡಿದ್ದರೆ? ಆಗ ಸತ್ಯ ಹೊರಬಿದ್ದಿದ್ದರೆ? ಅದು ಭಾರತದ ತಂತ್ರಜ್ಞಾನ ಪ್ರಯತ್ನಗಳ ಮೇಲೆ ಕರಿನೆರಳು ಹರಡುತ್ತಿತ್ತು. ʼಭಾರತ ಸುಖಾಸುಮ್ಮನೆ ಅತಿರಂಜನೆ ಮಾಡುತ್ತದೆ, ಪ್ರಚಾರ ಪಡೆಯುತ್ತದೆʼ ಎಂಬ ಹಳೆಯ ಆರೋಪಗಳಿಗೆ ಇದು ಹೊಸ ಸಾಕ್ಷಿಯಾಗುತ್ತಿತ್ತು.

ಜಾಗತಿಕ ಮಟ್ಟದಲ್ಲಿ, ಭಾರತ AI ನಾಯಕತ್ವದ ಕನಸು ಕಾಣುತ್ತಿರುವಾಗ, ಇಂತಹ ಘಟನೆಗಳು ಆ ಕನಸಿನ ವಿಶ್ವಾಸಾರ್ಹತೆಯ ತಿಳಿಕೊಳಕ್ಕೆ ಕಲ್ಲೆಸೆಯುತ್ತವೆ. ಭಾರತ-ಚೀನಾ ತಂತ್ರಜ್ಞಾನ ಪೈಪೋಟಿಯ ಸಂದರ್ಭದಲ್ಲಿಯೇ, ಚೀನಾದ ಉತ್ಪನ್ನವನ್ನ ಭಾರತದ್ದೆಂದು ಹೇಳಿರುವುದು ವ್ಯಂಗ್ಯವಲ್ಲದೆ ಮತ್ತೇನು? ವಿರೋಧ ಪಕ್ಷಗಳಿಗೆ ಇದು ಸರ್ಕಾರದ ʼಎಐ ಪ್ರಚಾರʼದ ಮೇಲೆ ಪ್ರಶ್ನೆ ಎತ್ತಲು ಒಂದು ಅವಕಾಶ. ಆಡಳಿತಕ್ಕೆ ಇದು ಅನಗತ್ಯ ಡ್ಯಾಮೇಜ್ ಕಂಟ್ರೋಲ್ ಪರಿಸ್ಥಿತಿ.

ವಿದೇಶಿ ಪ್ರತಿನಿಧಿಗಳು, ಜಾಗತಿಕ ಮಾಧ್ಯಮಗಳು ಭಾರತದಿಂದ ಹೊರಟಾಗ ತಮ್ಮೊಟ್ಟಿಗೆ ಏನು ಒಯ್ಯಬಹುದು? AI ನೀತಿಗಳ ಭವಿಷ್ಯವನ್ನಾ ಅಥವಾ ಚೀನಾದ ರೋಬೋ ನಾಯಿಯನ್ನು ಭಾರತದ್ದೆಂದು ಘೋಷಿಸಿಕೊಂಡು ನಗೆಪಾಟಲಿಗೀಡಾಡ ದೃಶ್ಯವನ್ನಾ? ಇದೇ ಈ ಅನಾಹುತದ ಅತಿದೊಡ್ಡ ನಷ್ಟ. ಇದು ಆ ಒಂದು ವಿಶ್ವವಿದ್ಯಾಲಯದ ತಪ್ಪಂತೂ ಅಲ್ಲ. ಜಾಗತಿಕ ವೇದಿಕೆಯಲ್ಲಿ ಭಾರತದ ವಿಶ್ವಾಸಾರ್ಹತೆಯ ಗೋಡೆಗೆ ಬಿದ್ದ ದೊಡ್ಡ ಬಿರುಕು. ವಿವಿಯಿಂದಾದ ಎಡವಟ್ಟಿಗೆ ಅಷ್ಟೋ ದೊಡ್ಡ ಮಟ್ಟದಲ್ಲಿ ದೇಶ ಬೆಲೆ ತೆರಬೇಕಾಗಿದೆ.

ಇದನ್ನೂ ಓದಿ: AI ಶೃಂಗಸಭೆ-2026 | ಅವಕಾಶ-ಅಪಾಯಗಳ ಜಾಗತಿಕ ಚರ್ಚೆ

ಈಗಾಗಲೇ ಮಸುಕಾಗಿದ್ದ ‘ಮೇಡ್ ಇನ್ ಇಂಡಿಯಾ‘ ಪರದೆ ಮೇಲೆ ಈ ಘಟನೆಗಳು ಇನ್ನಷ್ಟು ಕೆಸರೆರಚಿವೆ. ಪ್ರಚಾರಕ್ಕಿಂತ ಪ್ರಾಮಾಣಿಕತೆ ದೊಡ್ಡದು ಎನ್ನುವ ನಿಜವನ್ನು ರೋಬೋ ನಾಯಿ ಮತ್ತೆ ನೆನಪಿಸಿದೆ.

ಆ ರೋಬೋ ನಾಯಿ ವೇದಿಕೆಯಲ್ಲಿ ಓಡಾಡಿದ್ದು ಕೆಲ ನಿಮಿಷಗಳಷ್ಟೇ. ಆದರೂ ಅದರ ನೆರಳು ದೇಶದ ಪ್ರತಿಷ್ಠೆಯ ಮೇಲೆ ಬಹುಕಾಲ ಉಳಿಯುವ ಅಪಾಯವಿದೆ. ಭಾರತ AI ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರುವ ಕನಸು ಕಾಣುತ್ತಿರುವಾಗ, ಆ ಕನಸುಗಳು ಸುಳ್ಳಿನ ಮೇಲೆ ಅಲ್ಲ, ಸತ್ಯದ ಮೇಲೆ ಕಟ್ಟಲ್ಪಡಬೇಕು. ಜಾಗತಿಕ ವೇದಿಕೆಯಲ್ಲಿ ಒಂದು ಸುಳ್ಳೂ ಇಡೀ ದೇಶವನ್ನು ಮುಜುಗರಕ್ಕೆ ತಳ್ಳಬಲ್ಲದು. ಈ ಶೃಂಗಸಭೆಯಲ್ಲಿ ನಡೆದ ಅನಾಹುತ ಅದಕ್ಕೆ ಸ್ಪಷ್ಟ, ಎಚ್ಚರಿಕೆಯ ಉದಾಹರಣೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...