ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬದ್ಧ ವೈರಿಗಳೆಂದೇ ಬಿಂಬಿತವಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್, ಸ್ಥಳೀಯ ಸಂಸ್ಥೆ ಅಧಿಕಾರದ ಚುಕ್ಕಾಣಿ ಹಿಡಿಯಲು ಒಂದಾಗಿರುವ ಅಚ್ಚರಿಯ ಘಟನೆ ಠಾಣೆ ಜಿಲ್ಲೆಯ ಅಂಬರನಾಥದಲ್ಲಿ ನಡೆದಿದೆ. ಮಾಜಿ ಸಿಎಂ ಹಾಗೂ ಹಾಲಿ ಡಿಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆಯನ್ನು ಅಧಿಕಾರದಿಂದ ದೂರವಿಡಲು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಜಿತ್ ಪವಾರ್ ಬಣದ ಎನ್‌ಸಿಪಿ ಜೊತೆಗೂಡಿ ‘ಅಂಬರನಾಥ ವಿಕಾಸ್ ಅಘಾಡಿ’ ರಚಿಸಿಕೊಂಡು ಪುರಸಭೆ ಅಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡಿವೆ.
ಇದು ಸಿಎಂ ಏಕನಾಥ್ ಶಿಂಧೆ ಅವರ ಪುತ್ರ, ಸಂಸದ ಶ್ರೀಕಾಂತ್ ಶಿಂಧೆ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರದೇಶವಾಗಿರುವುದರಿಂದ, ಶಿವಸೇನೆಗೆ ಉಂಟಾದ ಈ ಸೋಲು ಭಾರಿ ಮುಖಭಂಗ ಉಂಟುಮಾಡಿದೆ.
ಡಿಸೆಂಬರ್ 20ರಂದು ನಡೆದ 60 ಸದಸ್ಯ ಬಲದ ಅಂಬರನಾಥ ಪುರಸಭೆ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬರೋಬ್ಬರಿ 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ (ಮ್ಯಾಜಿಕ್ ನಂಬರ್ 31) ಕೇವಲ 4 ಸ್ಥಾನಗಳ ಕೊರತೆಯಿತ್ತು.
ಇತ್ತ ಬಿಜೆಪಿ 14, ಕಾಂಗ್ರೆಸ್ 12 ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿ 4 ಸ್ಥಾನಗಳನ್ನು ಗಳಿಸಿದ್ದವು. ಇಬ್ಬರು ಪಕ್ಷೇತರರು ಜಯಗಳಿಸಿದ್ದರು. ಶಿವಸೇನೆಯನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದ ಬಿಜೆಪಿ, ತನ್ನ 14 ಸದಸ್ಯರ ಜೊತೆಗೆ ಕಾಂಗ್ರೆಸ್‌ನ 12, ಎನ್‌ಸಿಪಿಯ 4 ಹಾಗೂ ಓರ್ವ ಪಕ್ಷೇತರ ಸದಸ್ಯನ ಬೆಂಬಲದೊಂದಿಗೆ ಒಟ್ಟು 32 ಸದಸ್ಯ ಬಲದ ‘ಅಂಬರನಾಥ ವಿಕಾಸ್ ಅಘಾಡಿ’ ಮೈತ್ರಿಕೂಟ ರಚಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವರಾಜ ಅರಸು ದಾಖಲೆ ದಾಟಿದರೇ ಸಿದ್ದರಾಮಯ್ಯ?
ಮಂಗಳವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿಯ ತೇಜಶ್ರೀ ಕಾರಂಜುಲೆ ಪಾಟೀಲ್ ಅವರು ಶಿವಸೇನೆಯ ಮನಿಷಾ ವಾಲೆಕರ್ ಅವರನ್ನು ಸೋಲಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿಯ ಅಭಿಕಿತ್ ಕಾರಂಜುಲೆ ಪಾಟೀಲ್ ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ನೇಮಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಕಿತ್ ಕಾರಂಜುಲೆ ಪಾಟೀಲ್, “ಶಿವಸೇನೆಯ ದೀರ್ಘಕಾಲದ ಆಳ್ವಿಕೆಯಲ್ಲಿ ಪುರಸಭೆಯಲ್ಲಿ ಭ್ರಷ್ಟಾಚಾರ ಮತ್ತು ಬೆದರಿಕೆ ಸಂಸ್ಕೃತಿ ತಾಂಡವವಾಡುತ್ತಿತ್ತು. ಆಡಳಿತವನ್ನು ಭಯಮುಕ್ತಗೊಳಿಸಿ ಅಭಿವೃದ್ಧಿ ತರುವ ಉದ್ದೇಶದಿಂದ ನಾವು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ,” ಎಂದು ಸಮರ್ಥಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಶಿವಸೇನೆ ಶಾಸಕ ಬಾಲಾಜಿ ಕಿಣಿಕರ್, “ರಾಷ್ಟ್ರಮಟ್ಟದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ ಎನ್ನುವ ಬಿಜೆಪಿ, ಕೇವಲ ಅಧಿಕಾರಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಮಡಿಲು ಸೇರಿದೆ. ಇದು ಅನೈತಿಕ ಮತ್ತು ಅವಕಾಶವಾದಿ ರಾಜಕಾರಣ,” ಎಂದು ಟೀಕಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. “ನಮಗೆ ಯಾವುದೇ ಅಧಿಕೃತ ಪ್ರಸ್ತಾಪ ಬಂದಿಲ್ಲ. ಸ್ಥಳೀಯ ನಾಯಕರು ಸ್ಥಳೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿರಬಹುದು” ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.





