ಯೂಟ್ಯೂಬ್ ವಿಡಿಯೋವೊಂದನ್ನು ನೋಡಿ ತೂಕ ಇಳಿಸಲು ಪ್ರಯತ್ನಿಸಿದ ಯುವತಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಸೆಲ್ಲೂರ್‌ನ ಮೀನಾಂಬಲ್‌ಪುರಂನಲ್ಲಿ ನಡೆದಿದೆ. ಕಾಲೇಜು ವಿದ್ಯಾರ್ಥಿ ಯೂಟ್ಯೂಬ್ ನೋಡಿ ಸ್ಥಳೀಯ ಅಂಗಡಿಯಿಂದ ‘ವೆಂಕಾರಂ’ (ಬೊರಾಕ್ಸ್) ಎಂಬ ವಸ್ತುವನ್ನು ಖರೀದಿಸಿ ಸೇವಿಸಿ ಸಾವನ್ನಪ್ಪಿದ್ದಾಳೆ.
ಮೀನಾಂಬಲ್‌ಪುರಂನ ಕಾಮರಾಜ್ ಕ್ರಾಸ್ ಸ್ಟ್ರೀಟ್‌ನ ದಿನಗೂಲಿ ಕಾರ್ಮಿಕ ವೇಲ್ ಮುರುಗನ್ ಮತ್ತು ವಿಜಯಲಕ್ಷ್ಮಿ ಅವರ ಪುತ್ರಿ ಕಲೈಯರಸಿ (19) ಮೃತ ವಿದ್ಯಾರ್ಥಿನಿ. ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಾಕ್ ಸೆಲೆಬ್ರಿಟಿಗಳ ಯೂಟ್ಯೂಬ್ ಚಾನೆಲ್‌ಗಳಿಗಿದ್ದ ನಿರ್ಬಂಧ ತೆರವು
ಆಕೆ ಸ್ವಲ್ಪ ಅಧಿಕ ತೂಕ ಇದ್ದ ಕಾರಣ ಆಗಾಗ್ಗೆ ತೂಕ ಇಳಿಸಲು ಪ್ರಯತ್ನಿಸುತ್ತಿದ್ದಳು. ಅದಕ್ಕಾಗಿ ಯೂಟ್ಯೂಬ್ ವಿಡಿಯೋಗಳನ್ನೂ ನೋಡುತ್ತಿದ್ದಳು. ಕಳೆದ ವಾರ ‘ಕೊಬ್ಬು ಕರಗಿಸಲು ಮತ್ತು ಸ್ಲಿಮ್ ದೇಹವನ್ನು ಹೊಂದಲು ವೆಂಕಾರಂ’ ಎಂಬ ಶೀರ್ಷಿಕೆಯ ಯೂಟ್ಯೂಬ್ ವಿಡಿಯೋವೊಂದನ್ನು ನೋಡಿದ್ದಳು. ಆ ವಿಡಿಯೋದಲ್ಲಿ ತಿಳಿಸಿದಂತೆ ಬೊರಾಕ್ಸ್ ಸೇವಿಸಿದ್ದಳು ಎನ್ನಲಾಗಿದೆ.
ಜನವರಿ 16ರಂದು ಸ್ಥಳೀಯ ಮೆಡಿಕಲ್‌ನಿಂದ ಯುವತಿ ಬೊರಾಕ್ಸ್ ಖರೀದಿಸಿದ್ದು, ಜನವರಿ 17ರಂದು ಸೇವಿಸಿದ್ದಾಳೆ. ಅದಾದ ಕೂಡಲೇ ಆಕೆಗೆ ವಾಂತಿ, ಅತಿಸಾರ ಶುರುವಾಗಿತ್ತು. ಆಕೆಯ ತಾಯಿ ಮುನಿಸಲೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಪಡೆದು ಆಕೆ ಮನೆಗೆ ಮರಳಿದ್ದಳು ಎಂದು ಹೇಳಲಾಗಿದೆ.
ಆದರೆ ಸಂಜೆಯಾಗುತ್ತಿದ್ದಂತೆ ಮತ್ತೆ ಅತಿಸಾರ ಶುರುವಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಆದರೆ ಮನೆಗೆ ಹಿಂದಿರುಗಿದ ಬಳಿಕ ತೀವ್ರ ಹೊಟ್ಟೆ ನೋವು ಮತ್ತು ಮಲದಲ್ಲಿ ರಕ್ತ ಬರಲು ಆರಂಭವಾಗಿತ್ತು. ರಾತ್ರಿ ಸುಮಾರು 11 ಗಂಟೆಗೆ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಆಸ್ಪತ್ರೆಗೆ ಹೋಗುವ ದಾರಿ ಮಧ್ಯದಲ್ಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದ್ನು ಓದಿದ್ದೀರಾ? ಬಾಡಿ ಶೇಮಿಂಗ್ : ʼಡಿಂಪಲ್ ಕ್ವೀನ್ʼ ರಚಿತಾ ರಾಮ್ ನೀಡಿದ ಎಚ್ಚರಿಕೆ ಏನು ಗೊತ್ತೇ?
ತೂಕ ಇಳಿಸಲು, ಮೊಡವೆ ಕಡಿಮೆ ಮಾಡಲು ಹೀಗೆ ಹಲವು ಕಾರಣಕ್ಕೆ ಯೂಟ್ಯೂಬ್ ವಿಡಿಯೋದಲ್ಲಿ ನೀಡಲಾಗುವ ಸಲಹೆಗಳನ್ನು ಪಾಲಿಸಿ ಆರೋಗ್ಯ ಕೆಡಿಸಿಕೊಳ್ಳುವ ಘಟನೆಗಳು ನಿರಂತರವಾಗಿ ವರದಿಯಾಗುತ್ತಿದೆ. ತೂಕ ಇಳಿಸಲು ಸರ್ಜರಿ ಮಾಡಿಸಿ, ಔಷಧಿ ಸೇವಿಸಿ ಪ್ರಾಣ ಕಳೆದುಕೊಂಡ ಹಲವು ಘಟನೆಗಳೂ ವರದಿಯಾಗಿದೆ.
2022ರಲ್ಲಿ ಕಿರುತೆರೆ ನಟಿ ಚೇತನಾ ರಾಜ್ ‘ಫ್ಯಾಟ್ ಸರ್ಜರಿ’ (ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆ) ಮಾಡಿಸಿಕೊಳ್ಳುವಾಗ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಮೃತಪಟ್ಟಿದ್ದರು. 2015ರಲ್ಲಿ ನಟಿ ಆರತಿ ಅಗರ್ವಾಲ್ ಅಮೆರಿಕಾದಲ್ಲಿ ‘ಲಿಪೊಸಕ್ಷನ್’ (Liposuction) ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕೆಲವು ದಿನಗಳ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಕಳೆದ ವರ್ಷ ಕೇರಳದ ಪತ್ತನಂತಿಟ್ಟ ಜಿಲ್ಲೆಯ 20 ವರ್ಷದ ಯುವತಿ ಆತಿರಾ ಯೂಟ್ಯೂಬ್ ನೋಡಿ ಕಟ್ಟುನಿಟ್ಟಿನ ಡಯಟ್ ಮಾಡಿ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಳು. ಡಯಟ್ ಆರಂಭಿಸಿದ ಕೆಲವೇ ದಿನಗಳಲ್ಲಿ ಆತಿರಾಗೆ ತೀವ್ರ ಸುಸ್ತು ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು.
ತಜ್ಞರ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಕೇವಲ ಇಂಟರ್ನೆಟ್ ನೋಡಿ ಮಾಡುವ ಇಂತಹ ಕಟ್ಟುನಿಟ್ಟಿನ ಆಹಾರ ಪದ್ಧತಿಗಳು ದೇಹದ ಅಂಗಾಂಗಗಳ ಮೇಲೆ ತೀವ್ರ ಒತ್ತಡ ಹೇರಿ ಸಾವಿಗೆ ಕಾರಣವಾಗಬಹುದು. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಡಯಟ್ ಮಾಡುವುದು ಅಪಾಯಕಾರಿ.





