ಹಳೆಯ ವಿವಾದದ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಮುಸ್ಲಿಮರು ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 10 ಮನೆಗಳು ಮತ್ತು ನಾಲ್ಕು ವಾಹನಗಳು ಸುಟ್ಟುಹೋಗಿವೆ. ಪೊಲೀಸರು ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗರಿಯಾಬಂದ್ ಜಿಲ್ಲೆಯ ದುತ್ಕಾಯ ಗ್ರಾಮದಲ್ಲಿ ಭಾನುವಾರ ರಾತ್ರಿ ಹಿಂಸಾಚಾರ ನಡೆದಿದೆ. ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಮುಖ ಆರೋಪಿ ಆರಿಫ್‌ನನ್ನು ಶಿವ ದೇವಾಲಯಕ್ಕೆ ಹಾನಿ ಮಾಡಿದ ಆರೋಪ ಮತ್ತು ಗ್ರಾಮಸ್ಥರ ದೂರಿನ ಆಧಾರದ ಮೇಲೆ ಕಳೆದ ವರ್ಷ ಬಂಧಿಸಲಾಗಿತ್ತು. ಆತ ಇತ್ತೀಚೆಗೆ ಜಾಮೀನು ಪಡೆದು, ಜೈಲಿನಿಂದ ಹೊರಬಂದಿದ್ದ. ತನ್ನ ಬಂಧನಕ್ಕೆ ಕಾರಣರಾದವರ ವಿರುದ್ಧ ಆರಿಫ್ ಮತ್ತು ಆತನ ಸಹಚರರು ಆರಂಭದಲ್ಲಿ ಗಲಾಟೆ ನಡೆಸಿದ್ದಾರೆ. ಬಳಿಕ, ಪರಿಸ್ಥಿತಿ ಉದ್ವಿಘ್ನನಗೊಂಡಿದೆ. ಹಿಂದು ಸಮುದಾಯದ ಕೆಲವರು ಮುಸ್ಲಿಮರ ಮೇಲೆ ದಾಳಿ ನಡೆಸಿದ್ದಾರೆ. ಗಲಾಟೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ” ಎಂದು ಪೊಲೀಸರು ವಿವರಿಸಿದ್ದಾರೆ.
“ಆರಿಫ್ ಸುಮಾರು ಒಂದೂವರೆ ವರ್ಷಗಳ ಹಿಂದೆ ಗ್ರಾಮದ ಶಿವ ದೇವಾಲಯವನ್ನು ಧ್ವಂಸಗೊಳಿಸಿದ್ದ. ಆತ ಈಗ ಜಾಮೀನಿನ ಮೇಲೆ ಹೊರಗಿದ್ದಾನೆ. ಹಿಂದಿನ ವೈಷಮ್ಯದಿಂದ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾನೆ” ಎಂದು ಗ್ರಾಮದ ನಿವಾಸಿ ಜಿತೇಂದ್ರ ಕುಮಾರ್ ಯಾದವ್ ಹೇಳಿರುವುದಾಗಿ ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಗಂಭೀರತೆ ಕಳೆದುಕೊಂಡು ಮೀಮ್ಸ್ ಮಟ್ಟಕ್ಕಿಳಿಯಿತೇ ಕೇಂದ್ರ ಬಜೆಟ್!
ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಜರಿನಾಶಹನಾಜ್ ಮತ್ತು ದೌಲತ್ ಬಿ ಅವರು ಘಟನೆ ಬಗ್ಗೆ ವಿವರಿಸಿದ್ದು, “ಗ್ರಾಮದಲ್ಲಿ ನಡೆದ ಆರಂಭಿಕ ದಾಳಿಯ ನಂತರ, ಗುಂಪೊಂದು ವೇಗವಾಗಿ ಸೇರಲು ಪ್ರಾರಂಭಿಸಿತು. ಗುಂಪಿನಲ್ಲಿದ್ದವರು ನಮ್ಮ ಮನೆಗಳಿಗೆ ಹೋಗುವ ಎರಡೂ ರಸ್ತೆಗಳು ನಿರ್ಬಂಧಿಸಿದರು. ನಮ್ಮ ಮನೆಗಳಿಗೆ ಬೆಂಕಿ ಹಚ್ಚಿದರು. ನಾವು 112ಗೆ ಕರೆ ಮಾಡಿ ಪೊಲೀಸರನ್ನು ಸಂಪರ್ಕಿಸಿದೆವು. ಪೊಲೀಸರು ಬರುವಷ್ಟರಲ್ಲಿ ನಮ್ಮ ಮನೆಗಳು ಸುಟ್ಟುಹೋಗಿದ್ದವು. ಪೊಲೀಸರ ಸಹಾಯದಿಂದ ನಾವು ನಮ್ಮ ಜೀವಗಳನ್ನು ಉಳಿಸಿಕೊಂಡು ರಾಯ್‌ಪುರಕ್ಕೆ ತಲುಪಿದೆವು” ಎಂದು ಹೇಳಿದ್ದಾರೆ.
ಗುಂಪಿನಲ್ಲಿದ್ದವರು ಮಹಿಳೆಯರು, ಮಕ್ಕಳು ಹಾಗೂ ವೃದ್ಧರನ್ನೂ ಥಳಿಸಿದ್ದಾರೆ. ಮನೆಗಳಿಗೆ ಬೆಂಕಿ ಹಚ್ಚಿದಾಗ, ಮಹಿಳೆಯರು ಮತ್ತು ಮಕ್ಕಳು ಒಳಗೆ ಇದ್ದರು. ಪೊಲೀಸರು ಅವರೆಲ್ಲರನ್ನೂ ರಕ್ಷಿಸಿ, ಹೊರ ತಂದರು” ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗರಿಯಾಬಂದ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೇದ್‌ಬ್ರತ್ ಸಿರ್ಮೌರ್, “ಆರೋಪಿ ಆರಿಫ್ ಖಾನ್, ಇಮ್ರಾನ್ ಮತ್ತು ಸಲೀಂ ಅವರನ್ನು ಬಂಧಿಸಲಾಗಿದೆ. ಬೆಂಕಿ ಹಚ್ಚಿದ ಗುಂಪಿನಲ್ಲಿದ್ದವರನ್ನು ಗುರುತಿಸಲು ವೀಡಿಯೊ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಹಿಂಸಾಚಾರದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.





