ಪರಿಹಾರವು ಬರೀ ಆರ್ಥಿಕ ಸಹಾಯವಲ್ಲ, ಇದು ಸಾಮಾಜಿಕ ನ್ಯಾಯದ ಸಂಕೇತವಾಗಿದೆ ಎಂದು ಉತ್ತರಾಖಂಡ ಹೈಕೋರ್ಟ್ ಹೇಳಿದೆ. ಹಾಗೆಯೇ ಮೃತರ ಕುಟುಂಬಕ್ಕೆ ಪೂರ್ಣ ಪರಿಹಾರವನ್ನು ನೀಡುವಂತೆ ವಿಮಾ ಕಂಪನಿಗೆ ಸೂಚಿಸಿದೆ.
2024ರ ಅಪಘಾತ ಪ್ರಕರಣದಲ್ಲಿ ಮೃತ ವ್ಯಕ್ತಿಗೆ ಅಧಿಕ ಪರಿಹಾರವನ್ನು ಪ್ರಶ್ನಿಸಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಮೆಹ್ರಾ ಅವರ ಏಕ ಪೀಠವು ವಜಾಗೊಳಿಸಿದೆ. ಹಾಗೆಯೇ ಮೃತ ವ್ಯಕ್ತಿಯ ಕುಟುಂಬಕ್ಕೆ 53,93,600 ರೂ. ಪರಿಹಾರ ನೀಡುವುದು ನ್ಯಾಯಯುತ ಮತ್ತು ಸಮರ್ಥನೀಯ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಉತ್ತರಾಖಂಡ | ಪುರೋಲ ‘ಮಹಾಪಂಚಾಯತ್’; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ನೈನಿತಾಲ್‌ನ ಮೋಟಾರು ಅಪಘಾತ ಕ್ಲೈಮ್‌ಗಳ ನ್ಯಾಯಮಂಡಳಿ(MACT) ಮೃತರ ಕುಟುಂಬಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿಯೊಂದಿಗೆ 53.93 ಲಕ್ಷ ರೂ. ಪರಿಹಾರವನ್ನು ಪಾವತಿಸಬೇಕೆಂದು ವಿಮಾ ಕಂಪನಿಗೆ 2024ರ ನವೆಂಬರ್‌ನಲ್ಲಿ ನಿರ್ದೇಶಿಸಿತ್ತು. ಈ ಮೊತ್ತವು ಅತ್ಯಧಿ ಮತ್ತು ನ್ಯಾಯಸಮ್ಮತವಲ್ಲ ಎಂದು ಹೇಳಿರುವ ವಿಮಾನ ಕಂಪನಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, “ಮೋಟಾರು ವಾಹನ ಕಾಯ್ದೆಯು ಮೃತರ ಕುಟುಂಬಕ್ಕೆ ತ್ವರಿತ ಮತ್ತು ಸಾಕಷ್ಟು ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿರುವ ಕಲ್ಯಾಣ ಶಾಸನವಾಗಿದೆ. ಇದು ಕುಟುಂಬಕ್ಕೆ ಸಹಾಯವಾಗುತ್ತದೆ. ನ್ಯಾಯಮಂಡಳಿಯ ತೀರ್ಪು ಕಾನೂನುಬದ್ಧವಾಗಿ ಸದೃಢ ಮತ್ತು ಸಮತೋಲಿತವಾಗಿದೆ” ಎಂದು ಹೇಳಿದೆ.
ಹಾಗೆಯೇ ಅಪಘಾತ ಪರಿಹಾರ ನೀಡುವಾಗ ನ್ಯಾಯಾಲಯಗಳು ಉದಾರ ಮತ್ತು ಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದೂ ನ್ಯಾಯಮೂರ್ತಿಗಳು ಒತ್ತಿ ಹೇಳಿದರು.





