ಕೇರಳದ ವೆಲ್ಲಪ್ಪಳ್ಳಿ ನಟೇಶನ್ ಅವರಿಗೆ ಘೋಷಿಸಲಾಗಿರುವ ಪದ್ಮಭೂಷಣ ಪ್ರಶಸ್ತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ‘ಸೇವ್ ಯೂನಿವರ್ಸಿಟಿ’ ಅಭಿಯಾನವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ಸಲ್ಲಿಸಿದೆ. ದೂರನ್ನು ರಾಷ್ಟ್ರಪತಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ವರ್ಗಾಯಿಸಿದ್ದಾರೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
‘ಸೇವ್ ಯೂನಿವರ್ಸಿಟಿ’ ಅಭಿಯಾನ ಸಮಿತಿಯ ಅಧ್ಯಕ್ಷ ಆರ್.ಎಸ್. ಶಶಿಕುಮಾರ್ ಅವರು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದು, “ವೆಲ್ಲಪ್ಪಳ್ಳಿ ನಟೇಶನ್ ಅವರು ಈ ಹಿಂದೆ, ‘ಪದ್ಮ’ ಪ್ರಶಸ್ತಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಬಹಿರಂಗ ಹೇಳಿಕೆಗಳನ್ನು ನೀಡಿ ಅಪಹಾಸ್ಯ ಮಾಡಿದ್ದಾರೆ. ಅಲ್ಲದೆ, ಅವರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅವರಿಗೆ ಉನ್ನತ ನಾಗರಿಕ ಗೌರವ ನೀಡುವುದು ಪ್ರಶಸ್ತಿಯ ಘನತೆಯನ್ನು ಕುಗ್ಗಿಸುತ್ತದೆ” ಎಂದಿದ್ದಾರೆ.
“ಈ ಹಿಂದೆ, ಸಂವಾದವೊಂದರಲ್ಲಿ ಮಾತನಾಡಿದ್ದ ವೆಲ್ಲಪ್ಪಳ್ಳಿ ನಟೇಶನ್, ‘ಪದ್ಮ ಪ್ರಶಸ್ತಿಗಳನ್ನು ಹಣದ ಮೂಲಕ ಪಡೆಯಬಹುದು’ ಎಂದಿದ್ದರು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.




