2020ರ ದೆಹಲಿ ಗಲಭೆ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ, ಯುವ ಹೋರಾಟಗಾರ ಉಮರ್ ಖಾಲಿದ್‌ಗೆ ಅಂತೂ ಮಧ್ಯಂತರ ಜಾಮೀನು ದೊರೆತಿದೆ. ತಮ್ಮ ಸಹೋದರಿಯ ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ಉಮರ್ ಖಾಲಿದ್‌ಗೆ 14 ದಿನಗಳ ಮಧ್ಯಂತರ ಜಾಮೀನನ್ನು ದೆಹಲಿ ನ್ಯಾಯಾಲಯ ನೀಡಿದೆ. ಆದಾಗ್ಯೂ, ಡಿಸೆಂಬರ್ 16ರಿಂದ ಡಿಸೆಂಬರ್ 29ರವರೆಗೆ ಜಾಮೀನು ನೀಡಲಾಗಿದ್ದು, ಹಲವು ಷರತ್ತುಗಳನ್ನು ವಿಧಿಸಿದೆ.
ಉಮರ್ ಖಾಲಿದ್ ಅವರ ಕೆಲವು ವಾಟ್ಸ್‌ಆ್ಯಪ್ ಸಂದೇಶಗಳನ್ನು ಆಧರಿಸಿ ದೆಹಲಿ ಗಲಭೆಗೆ ಉಮರ್ ಖಾಲಿದ್ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ 2020ರಲ್ಲಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಅಂದಿನಿಂದ ಸರಿಯಾದ ವಿಚಾರಣೆಯೂ ಇಲ್ಲದೆ, ಜಾಮೀನೂ ದೊರೆಯದೆ ಉಮರ್ ಖಾಲಿದ್ ಜೈಲಿನಲ್ಲಿಯೇ ಇದ್ದರು. ಇದೀಗ, ಅವರಿಗೆ ತಮ್ಮ ಸಹೋದರಿಯ ವಿವಾಹದಲ್ಲಿ ಭಾಗಿಯಾಗಲು 14 ದಿನಗಳ ಷರತ್ತುಬದ್ಧ ಜಾಮೀನು ನೀಡಿ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ಸಮೀರ್ ಬಾಜ್‌ಪೈ ಆದೇಶಿಸಿದ್ದಾರೆ.
ಖಾಲಿದ್ ಅವರ ಸಹೋದರಿಯ ವಿವಾಹವು ಡಿಸೆಂಬರ್ 27ರಂದು ನಡೆಯಲಿದೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಡಿಸೆಂಬರ್ 14 ರಿಂದ ಡಿಸೆಂಬರ್ 29ರವರೆಗೆ ಜಾಮಿನು ನೀಡಬೇಕೆಂದು ಕೋರಿ ಖಾಲಿದ್ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಡಿಸೆಂಬರ್ 14ರಿಂದ ಜಾಮೀನು ನೀಡುವ ಬದಲಾಗಿ, ಡಿಸೆಂಬರ್ 16ರಿಂದ ಜಾಮೀನು ಮಂಜೂರು ಮಾಡಿದೆ.
ಈ ಲೇಖನ ಓದಿದ್ದೀರಾ?: ಉಮರ್ ಖಾಲಿದ್ ಸೆರೆವಾಸಕ್ಕೆ ಐದು ವರ್ಷಗಳು: ಮುಕ್ತಿ ಎಂದು?
“ಜಾಮೀನು ಪಡೆದು ಜೈಲಿನಿಂದ ಹೊರಬಂದ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ. ಕುಟುಂಬ, ಸಂಬಂಧಿಕರು ಹಾಗೂ ಸ್ನೇಹಿತರನ್ನಲ್ಲದೆ ಬೇರೆ ಯಾರನ್ನೂ ಭೇಟಿ ಮಾಡುವಂತಿಲ್ಲ. ತಮ್ಮ ಮನೆಯಲ್ಲಿ ಅಥವಾ ಅವರು ನಿರ್ದಿಷ್ಟಪಡಿಸಿದಂತೆ ವಿವಾಹ ಸಮಾರಂಭಗಳು ನಡೆಯುವ ಸ್ಥಳದಲ್ಲಿ ಮಾತ್ರವೇ ಅವರು ಇರಬೇಕು” ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.




