ಒಂಭತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR), MGNREGA ಬದಲಿಗೆ ಬಂದಿರುವ ನೂತನ ಜಿ ರಾಮ್ ಜಿ ಕಾಯ್ದೆ ಹಾಗೂ ಬಾಂಗ್ಲಾದೇಶದಲ್ಲಿ ಪ್ರಸಕ್ತ ನೆಲೆಸಿರುವ ಅಶಾಂತಿ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಕಾಂಗ್ರೆಸ್ ಕ್ರಿಯಾ ಸಮಿತಿ ಸಭೆಯಲ್ಲಿ ಶನಿವಾರ ಚರ್ಚಿಸಲಾಯಿತು.
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ನಿರ್ಧಾರ ತೆಗೆದುಕೊಳ್ಳುವ ಪಕ್ಷದ ಅತ್ಯುನ್ನತ ಗುಂಪಿನ ಸಭೆಯಲ್ಲಿ ಭಾಗವಹಿಸಿದರು.
ಸಭೆಯ ಬಳಿಕ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷ ಖರ್ಗೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕೈಬಿಟ್ಟಿರುವುದಕ್ಕೆ ಜನರು ಕೋಪಗೊಂಡಿದ್ದಾರೆ ಎಂದು ಹೇಳಿದರು ಹಾಗೂ ಇದರ ಪರಿಣಾಮಗಳನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಅಜೀವಿಕಾ ಮಿಶನ್ (ಗ್ರಾಮೀಣ) ಕಾಯ್ದೆಯು ಯಾರೊಂದಿಗೂ ಸಮಾಲೋಚಿಸದ ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಖರ್ಗೆ ಆರೋಪಿಸಿದರು. ಈ ಕಾಯಿದೆಯು ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೊರಿಸುತ್ತದೆ ಎಂದು ಹೇಳಿದರು. ಮನ್‌ರೇಗ ಯೋಜನೆಯನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | SIR – ಬಿಜೆಪಿಗಾಗಿ ಚುನಾವಣಾ ಆಯೋಗ ನಡೆಸುತ್ತಿರುವ ರಕ್ತರಹಿತ ನರಮೇಧ
‘‘2026 ಜನವರಿ 5ರಿಂದ ‘ಮನ್‌ರೇಗ ಬಚಾವೊ ಆಂದೋಲನ’ವನ್ನು ಆರಂಭಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ’’ ಎಂದರು.
‘‘ಮನ್‌ರೇಗದಿಂದ ಮಹಾತ್ಮಾ ಗಾಂಧಿಯ ಹೆಸರನ್ನು ತೆಗೆದು ಹಾಕುವ ಪ್ರತಿ ಪಿತೂರಿಯನ್ನು ನಾವು ಪ್ರಜಾಸತ್ತಾತ್ಮಕವಾಗಿ ವಿರೋಧಿಸುವ ಪ್ರತಿಜ್ಞೆಯನ್ನು ನಾವು ತೆಗೆದುಕೊಂಡಿದ್ದೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟು ಮನ್‌ರೇಗವನ್ನು ರಕ್ಷಿಸುವ, ಕಾರ್ಮಿಕರ ಹಕ್ಕುಗಳನ್ನು ಉಳಿಸುವ ಮತ್ತು ಪ್ರತಿ ಗ್ರಾಮದಲ್ಲಿ ನಮ್ಮ ಧ್ವನಿಗಳನ್ನು ಎತ್ತುವ ಪ್ರತಿಜ್ಞೆಯನ್ನು ನಾವು ತೆಗೆದುಕೊಂಡಿದ್ದೇವೆ. ‘ಜೈ ಸಂವಿಧಾನ’ ಮತ್ತು ‘ಜೈ ಹಿಂದ್’ ಘೋಷಣೆಗಳೊಂದಿಗೆ ನಾವು ಈ ನಿರ್ಧಾರವನ್ನು ಸಾಮೂಹಿಕವಾಗಿ ತೆಗೆದುಕೊಂಡಿದ್ದೇವೆ’’ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.





