ಮುಂಬರುವ ಮಹತ್ವದ ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ, ಅಸ್ಸಾಂನ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದು, ಬಿಜೆಪಿಯ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ ಈ ಬಾರಿಯ ಚುನಾವಣೆಯನ್ನು ‘ಕುತೂಹಲಕಾರಿ ಚುನಾವಣೆ’ ಎಂದು ಹೇಳಿದ ಶಿವಕುಮಾರ್, ಪ್ರಸ್ತುತ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆಯಿದ್ದು, ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಮತದಾರರು ಸಜ್ಜಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
“ಜನರಿಗೆ ಬದಲಾವಣೆಯ ಅಗತ್ಯವಿದೆ ಮತ್ತು ಅವರು ಬಿಜೆಪಿ ವಿರುದ್ಧ ಮತ ಚಲಾಯಿಸುತ್ತಾರೆ. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ” ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…
ಪಕ್ಷದ ಚುನಾವಣಾ ಪ್ರಚಾರದ ಭಾಗವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಭೂಪೇಶ್ ಬಘೇಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಡಿ ಕೆ ಶಿವಕುಮಾರ್ ಇದೇ ವೇಳೆ ಘೋಷಿಸಿದರು. ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲು ಈಗಾಗಲೇ ಹಲವು ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
”ನಾನು ಸೇರಿದಂತೆ, ಪ್ರಿಯಾಂಕಾ ಗಾಂಧಿ, ಭೂಪೇಶ್ ಬಘೇಲ್ ಹಾಗೂ ಇತರ ನಾಯಕರು ಅಲ್ಲಿಗೆ ತೆರಳಲಿದ್ದೇವೆ. ಈಗಾಗಲೇ ಮೂರರಿಂದ ನಾಲ್ಕು ಸಭೆಗಳನ್ನು ನಡೆಸಲಾಗಿದೆ. ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ನನಗಿದೆ” ಎಂದು ಅವರು ಪುನರುಚ್ಚರಿಸಿದರು.
ಅಸ್ಸಾಂನಲ್ಲಿ ಬಿಜೆಪಿಯ ಹಿಡಿತವನ್ನು ಎದುರಿಸಲು ಮತ್ತು ವಿರೋಧ ಪಕ್ಷದ ಮತಗಳನ್ನು ಒಗ್ಗೂಡಿಸುವ ಗುರಿಯೊಂದಿಗೆ ಕಾಂಗ್ರೆಸ್ ತನ್ನ ತಳಮಟ್ಟದ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಉನ್ನತ ನಾಯಕರು ಅಖಾಡಕ್ಕಿಳಿಯುತ್ತಿದ್ದು, ಪ್ರಚಾರದ ಭರಾಟೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಕದನವು ತೀವ್ರ ಪೈಪೋಟಿಯ ರಾಜಕೀಯ ಸಮರವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.





