ಕಾಂಗ್ರೆಸ್ ಪಕ್ಷ ಜನವರಿ 22ರಂದು ನಡೆಯುವ ರಾಮ ಮಂದಿರದ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿರುವುದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟೀಕಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತಮ್ಮ ಪಾಪಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇರುವ ಸುವರ್ಣಾವಕಾಶವನ್ನು ಕಳೆದುಕೊಂಡಿದೆ. ಅಲ್ಲದೆ ರಾಮ ಮಂದಿರ ಆಹ್ವಾನ ಸ್ವೀಕರಿಸಲು ಕಾಂಗ್ರೆಸ್ ಅರ್ಹತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
“ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗಿಯಾಗಿ ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ವಿಹೆಚ್‌ಪಿ ಕಾಂಗ್ರೆಸ್ ಪಕ್ಷಕ್ಕೆ ಸುವರ್ಣಾವಕಾಶವನ್ನು ನೀಡಿತ್ತು. ಆದಾಗ್ಯೂ ನನ್ನ ವಿನಮ್ರ ದೃಷ್ಟಿಯಲ್ಲಿ ಆರಂಭದಿಂದಲೂ ರಾಮ ಮಂದಿರದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಅವರು ಆಹ್ವಾನಕ್ಕೆ ಅರ್ಹರಲ್ಲ” ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಲ್ದೀವ್ಸ್ ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ
“ಒಂದು ವೇಳೆ ಆಹ್ವಾನ ಸ್ವೀಕರಿಸಿದ್ದರೆ ಅವರು ಹಿಂದೂ ಸಮಾಜಕ್ಕೆ ಸಾಂಕೇತಿಕವಾಗಿ ಕ್ಷಮೆ ಕೇಳಬಹುದಿತ್ತು. ಆದಾಗ್ಯೂ ಪಂಡಿತ್ ನೆಹರು ಅವರಂಥವರು ಸೋಮನಾಥ ದೇಗುಲಕ್ಕೆ ಮಾಡಿರುವ ರೀತಿಯಲ್ಲಿಯೆ ಕಾಂಗ್ರೆಸ್ ನಾಯಕರು ರಾಮ ಮಂದಿರಕ್ಕೂ ಮಾಡಿದ್ದಾರೆ. ಇತಿಹಾಸ ಯಾರು ಹಿಂದೂ ವಿರೋಧಿ ಎಂದು ನಿರ್ಣಯಿಸುತ್ತದೆ” ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ಬುಧವಾರದಂದು ಆರ್‌ಎಸ್‌ಎಸ್/ಬಿಜೆಪಿ ಕಾರ್ಯಕ್ರಮ ಎಂದು ರಾಮಮಂದಿರ ಆಹ್ವಾನವನ್ನು ತಿರಸ್ಕರಿಸಿತ್ತು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಈ ಕಾರ್ಯಕ್ರಮವನ್ನು ಚುನಾವಣೆಯಲ್ಲಿ ಲಾಭಗೊಳಿಸುವ ರಾಜಕೀಯ ಯೋಜನೆಯಾಗಿದೆ ಎಂದು ಟೀಕಿಸಿತ್ತು.
“ಧರ್ಮವು ವೈಯಕ್ತಿಕ ವಿಷಯ. ಆದರೆ ಆರ್‌ಎಸ್‌ಎಸ್/ಬಿಜೆಪಿ ಅಯೋಧ್ಯೆಯಲ್ಲಿನ ಮಂದಿರವನ್ನು ಬಹಳ ಹಿಂದಿನಿಂದಲೂ ರಾಜಕೀಯ ಯೋಜನೆಯನ್ನಾಗಿ ಮಾಡಿಕೊಂಡಿದೆ. ದೇಗುಲ ನಿರ್ಮಾಣ ಅಪೂರ್ಣಗೊಂಡಿದ್ದರೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಚುನಾವಣಾ ಲಾಭವನ್ನು ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಕೂಡ ರಾಮ ಮಂದಿರ ಆಹ್ವಾನವನ್ನು ತಿರಸ್ಕರಿಸಿದ್ದಾರೆ.





