ವಕೀಲ, ಮಾಜಿ ಕಾಂಗ್ರೆಸ್ ಕಾನೂನು ಘಟಕದ ಸಂಚಾಲಕ ಫಿರೋಜ್ ಪಠಾಣ್ ಅವರ ಮೃತದೇಹವು ಗುಜರಾತ್‌ನ ತಾಪಿ ನದಿಯ ದಡದಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಫಿರೋಜ್ ಪಠಾಣ್ ಅವರು ಗುಜರಾತ್‌ನ ಸೂರತ್‌ನ ಉದ್ನಾ ದರ್ವಾಜಾ ಪ್ರದೇಶದ ನಿವಾಸಿ. ಅವರು ‘ಮೋದಿ’ ಎಂಬ ಪದನಾಮವನ್ನು ರಾಹುಲ್ ಗಾಂಧಿ ನಿಂದಿಸಿದ್ದಾರೆಂದು ದಾಖಲಾಗಿದ್ದ ಪ್ರಕರಣದಲ್ಲಿ ರಾಹುಲ್ ಗಾಂಧಿ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದರು. ಅಲ್ಲದೆ, ಗುಜರಾತ್ ಕಾಂಗ್ರೆಸ್‌ನ ಕಾನೂನು ಘಟಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ತಿ ಮೇಲೆ ಸಾಲ ಮಾಡಿಕೊಂಡು, ಮರುಪಾವತಿ ಮಾಡಲಾಗದೆ, ಮಾನಸಿಕವಾಗಿ ನೊಂದಿದ್ದರು. ಖಿನ್ನತೆಗೂ ಒಳಗಾಗಿದ್ದರು ಎಂದು ಹೇಳಲಾಗಿದೆ.
ಭಾನುವಾರ ಅವರ ಮೃತದೇಹ ಉಭರತ್ ಪ್ರದೇಶದಲ್ಲಿ ತಾಪಿ ನದಿ ದಡದಲ್ಲಿ ಪತ್ತೆಯಾಗಿದೆ. ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ಶನಿವಾರ ಬಗ್ಗೆ ತಮ್ಮ ಸಹೋದ್ಯೋಗಿ ದೀಪಕ್ ಅವರಿಗೆ ಕರೆ ಮಾಡಿದ್ದ ಪಠಾಣ್, “ನನಗೆ ಏನಾದರೂ ಸಂಭವಿಸಿದರೆ, ನ್ಯಾಯಾಲಯದ ಸಮೀಪದಲ್ಲಿರುವ ಸೇತುವೆಯ ಮೇಲೆ ನನ್ನನ್ನು ಹುಡುಕಿ ಬನ್ನಿ” ಎಂದಿದ್ದರು. ಅವರ ಮಾತು ಕೇಳಿ, ಆಘಾತಗೊಂಡ ದೀಪಕ್ ತಕ್ಷಣವೇ ಸೇತುವೆ ಬಳಿ ಬಂದಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇಲ್ಲವೆಂದು ತಿಳದಿಬಂದಿದೆ.
ಬಳಿಕ, ದೀಪಕ್ ಅವರು ಪಠಾಣ್ ಅವರು ಕುಟುಂಬಸ್ಥರಿಗೆ ಕರೆ ಮಾಡಿ, ಮಾಹಿತಿ ತಿಳಿಸಿದ್ದಾರೆ. ಕುಟುಂಬಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸೇತುವೆ ಬಳಿ ಬಂದು, ಶೋಧ ನಡೆಸಿದ್ದಾರೆ. ನದಿ ತುಂಬಿ ಹರಿಯುತ್ತಿದ್ದರಿಂದ, ಅವರ ಕೊಚ್ಚಿ ಹೋಗಿರಬಹುದೆಂದು ಭಾವಿಸಿ, ಸೇತುವೆಯಂದ ಸುಮಾರು ದೂರದವರೆಗೆ ನದಿಯಲ್ಲಿ ಶೋಧ ನಡೆಸಲಾಗಿದೆ. ಅವರ ಮೃತದೇಹವು ಭಾನುವಾರ ಬೆಳಗ್ಗೆ ಉಭಾರತ್ ಬಳಿ ಪತ್ತೆಯಾಗಿದೆ.




