ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಇನ್ನೂ ಬಿಡುಗಡೆಯಾಗದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಆತ್ಮಕಥನದ ವಿಚಾರವು ಮಂಗಳವಾರ ಲೋಕಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಅಶಿಸ್ತಿನ ವರ್ತನೆ ತೋರಿದ ಕಾಂಗ್ರೆಸ್ ಪಕ್ಷದ 8 ಮಂದಿ ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಮಂಗಳವಾರ ಸದನ ಆರಂಭವಾಗುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 2020ರ ಭಾರತ-ಚೀನಾ ಗಡಿ ಸಂಘರ್ಷದ ಕುರಿತು ಮಾತನಾಡಲು ಆರಂಭಿಸಿದರು. ಈ ವೇಳೆ ಅವರು ಜನರಲ್ ನರವಣೆ ಅವರ ಇನ್ನೂ ಪ್ರಕಟವಾಗದ ಪುಸ್ತಕದ ಆಯ್ದ ಭಾಗಗಳನ್ನು ಉಲ್ಲೇಖಿಸಿ, “ಗಡಿ ಸಂಘರ್ಷದ ವೇಳೆ ರಾಜಕೀಯ ನಾಯಕತ್ವ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿತ್ತು, ಪ್ರಧಾನಿ ಮತ್ತು ರಕ್ಷಣಾ ಸಚಿವರು ಸತ್ಯವನ್ನು ಮರೆಮಾಚುತ್ತಿದ್ದಾರೆ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಸದಸ್ಯರು, “ನಿಯಮಗಳ ಪ್ರಕಾರ ಸದನದಲ್ಲಿ ಇನ್ನೂ ಅಧಿಕೃತವಾಗಿ ಪ್ರಕಟವಾಗದ ಪುಸ್ತಕದ ಉಲ್ಲೇಖ ಮಾಡುವಂತಿಲ್ಲ,” ಎಂದು ಪಟ್ಟು ಹಿಡಿದರು.
ಈ ವಾಗ್ವಾದ ತಾರಕಕ್ಕೇರುತ್ತಿದ್ದಂತೆಯೇ, ಕಾಂಗ್ರೆಸ್ ಸಂಸದರು ಸ್ಪೀಕರ್ ಪೀಠದ ಮುಂದಿನ ಜಾಗಕ್ಕೆ ತೆರಳಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಗದ್ದಲದ ನಡುವೆಯೇ ಕೆಲ ಸಂಸದರು ಕಾಗದಗಳನ್ನು ಹರಿದು ಸ್ಪೀಕರ್ ಪೀಠದತ್ತ ತೂರಿದರು. ಇದು ಸದನದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಸ್ಪೀಕರ್ ಓಂ ಬಿರ್ಲಾ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಸದನದ ಕಲಾಪಕ್ಕೆ ಅಡ್ಡಿಪಡಿಸಿ, ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ 8 ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಹೈಬಿ ಈಡನ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಗುರ್ಜೀತ್ ಸಿಂಗ್ ಔಜ್ಲಾ, ಡೀನ್ ಕುರಿಯಾಕೋಸ್, ಕಿರಣ್ ಕುಮಾರ್ ರೆಡ್ಡಿ, ಎಸ್. ವೆಂಕಟರಾಮನ್, ಪ್ರಶಾಂತ್ ಪಡೋಲೆ ಅವರನ್ನು ಅಮಾನತುಗೊಳಿಸುವ ಪ್ರಸ್ತಾವವನ್ನು ಸಚಿವ ಕಿರಣ್ ರಿಜಿಜು ಮಂಡಿಸಿದರು. ಧ್ವನಿಮತದ ಮೂಲಕ ಇದನ್ನು ಅಂಗೀಕರಿಸಲಾಯಿತು.
ಸಂಸದರ ಅಮಾನತಿನ ಬಳಿಕವೂ ಗದ್ದಲ ಮುಂದುವರಿದಿದ್ದರಿಂದ ಲೋಕಸಭೆಯನ್ನು ಬುಧವಾರಕ್ಕೆ (ಫೆ. 4) ಮುಂದೂಡಲಾಯಿತು. ಅಮಾನತು ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್, “ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ನರವಣೆ ಅವರು ಪುಸ್ತಕದಲ್ಲಿ ಬರೆದಿರುವ ಸತ್ಯವನ್ನು ಮರೆಮಾಚಲು ಪ್ರತಿಪಕ್ಷದ ಬಾಯಿ ಮುಚ್ಚಿಸುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದೆ.





