ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಯು ಪರಿಶಿಷ್ಟ ಜಾತಿ (ಎಸ್‌ಸಿ) ಸ್ಥಾನಮಾನ ಹೊಂದಲು ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಪಡೆಯಲು ಅರ್ಹನಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಪಾಲಿಸುವ ವ್ಯಕ್ತಿಗಳು ಮಾತ್ರ ಎಸ್‌ಸಿ ಸ್ಥಾನಮಾನವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ಆ ಧರ್ಮವನ್ನು ಸಕ್ರಿಯವಾಗಿ ಪಾಲಿಸುವ ವ್ಯಕ್ತಿಯನ್ನು ಎಸ್‌ಸಿ ಸಮುದಾಯದ ಸದಸ್ಯನೆಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಆಂಧ್ರಪ್ರದೇಶ ಹೈಕೋರ್ಟ್‌ನ ತೀರ್ಪನ್ನು ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಎತ್ತಿಹಿಡಿದಿದೆ. ತನ್ನ ಮೇಲೆ ಕೆಲವು ವ್ಯಕ್ತಿಗಳು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಪಾಸ್ಟರ್ ಚಿಂತಾಡ ಆನಂದ್ ಎಂಬುವವರು, 2025ರ ಮೇ ತಿಂಗಳಿನಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಈ ಆದೇಶ ಹೊರಬಿದ್ದಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, “ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಪಾಲಿಸುವ ಯಾವುದೇ ವ್ಯಕ್ತಿಯು ಪರಿಶಿಷ್ಟ ಜಾತಿಯ ಸದಸ್ಯನಾಗಲು ಸಾಧ್ಯವಿಲ್ಲ. ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂದು ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ
ತನ್ನ ಗ್ರಾಮದಲ್ಲಿ ಭಾನುವಾರದ ಪ್ರಾರ್ಥನೆಗಳನ್ನು ನಡೆಸುತ್ತಿದ್ದ ಪಾಸ್ಟರ್ ಆನಂದ್, ಅಕ್ಕಲ ರಾಮಿರೆಡ್ಡಿ ಹಾಗೂ ಇತರರು ತನ್ನ ಮೇಲೆ ಪದೇ ಪದೇ ಹಲ್ಲೆ ನಡೆಸಿ, ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವಬೆದರಿಕೆ ಹಾಕಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಆನಂದ್ ಅವರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಆನಂದ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಪಾಸ್ಟರ್ ಆಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ಹೀಗಾಗಿ ಎಸ್‌ಸಿಗಳಿಗೆ ಮಾತ್ರ ಮೀಸಲಾಗಿರುವ ರಕ್ಷಣೆ ಪಡೆಯಲು ಅವರಿಗೆ ಹಕ್ಕಿಲ್ಲ ಎಂದು ಆರೋಪಿಗಳು ವಾದಿಸಿದ್ದರು.
ಇದನ್ನು ಓದಿದ್ದೀರಾ? 84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?
ತನಿಖೆ ಪೂರ್ಣಗೊಂಡು ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ, ತನ್ನ ಮೇಲಿನ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಆನಂದ್ ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. ದೂರುದಾರರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಎಸ್‌ಸಿ ಸ್ಥಾನಮಾನ ಕಳೆದುಕೊಂಡಿದ್ದಾರೆ, ಹಾಗಾಗಿ ಅವರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಮೂರ್ತಿ ಎನ್. ಹರಿನಾಥ್ ಅವರು ಎಫ್‌ಐಆರ್ ಅನ್ನು ರದ್ದುಗೊಳಿಸಿದ್ದರು. ಜಾತಿ ಭೇದಗಳನ್ನು ಗುರುತಿಸದ ಧರ್ಮಕ್ಕೆ ಮತಾಂತರಗೊಂಡಾಗ ಎಸ್‌ಸಿ ಸ್ಥಾನಮಾನವು ತನ್ನಿಂದ ತಾನೇ ರದ್ದಾಗುತ್ತದೆ. ಹೀಗಾಗಿ ಅವರ ಬಳಿ ಇರುವ ಎಸ್‌ಸಿ ಪ್ರಮಾಣಪತ್ರವು ಈ ಪ್ರಕರಣದಲ್ಲಿ ಯಾವುದೇ ನೆರವಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಗಮನಸೆಳೆದಿತ್ತು.
ತರುವಾಯ ಆನಂದ್ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ. “ಪ್ರಸ್ತುತ ಪ್ರಕರಣದಲ್ಲಿ, ಅರ್ಜಿದಾರರು ಕ್ರಿಶ್ಚಿಯನ್ ಧರ್ಮದಿಂದ ತನ್ನ ಮೂಲ ಧರ್ಮಕ್ಕೆ ಮರು-ಮತಾಂತರಗೊಂಡಿದ್ದಾರೆ ಅಥವಾ ಅವರನ್ನು ಮಡಿಗ (ಮಾದಿಗ) ಸಮುದಾಯ ಮರಳಿ ಸೇರಿಸಿಕೊಂಡಿದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಮೇಲ್ಮನವಿದಾರರು ದಶಕಕ್ಕೂ ಹೆಚ್ಚು ಕಾಲದಿಂದ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿದ್ದು, ಪಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಗ್ರಾಮದ ಮನೆಗಳಲ್ಲಿ ನಿಯಮಿತವಾಗಿ ಭಾನುವಾರದ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ ಎಂಬುದು ಸಾಬೀತಾಗಿದೆ,” ಎಂದು ಪೀಠ ಹೇಳಿದೆ.
”ಘಟನೆ ನಡೆದ ದಿನದಂದು ಸಹ ಅವರು ಮನೆಯಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಒಪ್ಪಿಕೊಳ್ಳಲಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.
ಎಸ್‌ಸಿ ಸ್ಥಾನಮಾನವು ಧಾರ್ಮಿಕ ಗುರುತಿನ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್‌ನ ಈ ತೀರ್ಪು ಪುನರುಚ್ಚರಿಸಿದೆ. ಅಲ್ಲದೆ, ಸಾಂವಿಧಾನಿಕ ರಕ್ಷಣೆಗಳ ಅರ್ಹತೆಯನ್ನು ನಿರ್ಧರಿಸುವಲ್ಲಿ ‘ಮತಾಂತರ’ವು ನಿರ್ಣಾಯಕ ಅಂಶವಾಗಿದೆ ಎಂಬುದನ್ನು ಇದು ಸ್ಪಷ್ಟಪಡಿಸಿದೆ.





