ಪದೇ ಪದೆ ಚರ್ಚೆಗೆ ಬರುವ ಕೊರೋನ ಸಾವುಗಳು: ನಿಜ ದತ್ತಾಂಶ ತಿಳಿಯುವುದು ಯಾವಾಗ?

Date:

ಇವತ್ತಿನವರೆಗೂ ಕೊರೋನ ಮರಣಗಳ ವರ್ಗೀಕರಣ ಮತ್ತು ವರದಿಗಳು ಸಂಕೀರ್ಣವಾದ ಸಮಸ್ಯೆಯಾಗಿ ಉಳಿದಿವೆ. ಮರಣಗಳು ಮತ್ತು ಮರಣಗಳ ನಿರ್ದಿಷ್ಟ ಕಾರಣಗಳ ಕುರಿತು ವಿಶ್ವಾಸಾರ್ಹ ಡೇಟಾವನ್ನು ಸಂಗ್ರಹಿಸುವ, ದಾಖಲಿಸುವ ಹಾಗೂ ಪಾರದರ್ಶಕವಾಗಿ ಪ್ರಕಟಿಸುವ ಗಟ್ಟಿಯಾದ ವ್ಯವಸ್ಥೆಯ ಅಗತ್ಯವಿದೆ...

ಭಾರತದಲ್ಲಿ ಭೀಕರ ಆಕ್ರಮಣ ನಡೆಸಿದ ಕೊರೋನ (ಕೋವಿಡ್-19) ಸೋಂಕಿನಿಂದಾಗಿ, ದೇಶದಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ಪದೇ ಪದೆ ಚರ್ಚೆಯಾಗುತ್ತಿದೆ. ಎಂದಾದರೂ, ಕೊರೋನ ಸಾವುಗಳ ನಿಜವಾದ ಸಂಖ್ಯೆ ತಿಳಿಯಬಹುದೇ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ಈ ನೈಜ ದತ್ತಾಂಶ ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ಸವಾಲಿನ ವಿಷಯವಾಗಿ ಉಳಿದಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ. ಆರೋಪಗಳಿಗೆ ಪೂರಕವಾಗಿ, ಸರ್ಕಾರದ ಅಧಿಕೃತ ದಾಖಲೆಗಳು ದೇಶದಲ್ಲಿ ಕೇವಲ 5.33 ಲಕ್ಷ ಕೊರೋನದಿಂದ ಸಾವುಗಳು ಸಂಭವಿಸಿವೆ ಎಂದು ಹೇಳುತ್ತಿದೆ.

ಅಂದಹಾಗೆ, 2020 ಮತ್ತು 2021ರಲ್ಲಿ ಬಿಡುಗಡೆಯಾದ ನಾಗರಿಕ ದಾಖಲಾತಿ ವ್ಯವಸ್ಥೆ (CRS) ಮತ್ತು ಮಾದರಿ ದಾಖಲಾತಿ ವ್ಯವಸ್ಥೆ (SRS) ದತ್ತಾಂಶಗಳು ದೇಶದಲ್ಲಿ 22.91 ಲಕ್ಷ ಮರಣಗಳು ಸಂಭವಿಸಿದೆ ಎಂದು ಹೇಳಿದ್ದವು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಇದೇ ಸಿಆರ್‌ಸಿ ಮತ್ತು ಎಸ್‌ಆರ್‌ಎಸ್‌ ದತ್ತಾಂಶಗಳು ಭಾರತದಲ್ಲಿ ಕೇವಲ 5.33 ಲಕ್ಷ ಕೋವಿಡ್ ಸಾವುಗಳಾಗಿವೆ ಎಂದು ಹೇಳುತ್ತಿದೆ. ಅಂದರೆ, ಬರೋಬ್ಬರಿ 7 ಪಟ್ಟು ಕಡಿಮೆ ಅಂಕಿಅಂಶವನ್ನು ಈಗ ನೀಡುತ್ತಿವೆ. ಈ ವ್ಯತ್ಯಾಸವು ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಮಾತ್ರವಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಟಿಒ) ವರದಿಯು ಬರೋಬ್ಬರಿ 47 ಲಕ್ಷಕ್ಕೂ ಅಧಿಕ ಸಾವುಗಳಾಗಿವೆ ಎಂದು ಅಂದಾಜಿಸಿದೆ. ಇದೆಲ್ಲವೂ ಭಾರತದಲ್ಲಿ ನಿಜಕ್ಕೂ ಕೊರೋನದಿಂದ ಸಂಭವಿಸಿದ ಸಾವುಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿವೆ.

ಸರ್ಕಾರಿ ದತ್ತಾಂಶ ಏನು ಹೇಳುತ್ತದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾಗರಿಕ ದಾಖಲಾತಿ ವ್ಯವಸ್ಥೆಯು (CRS) ಭಾರತದಲ್ಲಿನ ಎಲ್ಲ ದಾಖಲಿತ ಜನನ ಮತ್ತು ಮರಣಗಳನ್ನು ದಾಖಲಿಸುತ್ತದೆ. ಇದಕ್ಕೆ ಪೂರಕವಾಗಿ, ಮಾದರಿ ದಾಖಲಾತಿ ವ್ಯವಸ್ಥೆಯು (SRS) ಸಮೀಕ್ಷೆ ಆಧಾರಿತ ವಿಧಾನವನ್ನು ಬಳಸಿಕೊಂಡು ದಾಖಲಾಗದ ಜನನ ಮತ್ತು ಮರಣಗಳನ್ನು ಅಂದಾಜಿಸುತ್ತದೆ. ಇದರಿಂದ ದಾಖಲಾತಿಯ ಕೊರತೆಯನ್ನು ಸರಿದೂಗಿಸಲು ಸಹಾಯವಾಗುತ್ತದೆ. 2021ರ CRS ವರದಿಯ ಪ್ರಕಾರ, 2019ರಲ್ಲಿ 76.41 ಲಕ್ಷ, 2020ರಲ್ಲಿ 81.16 ಲಕ್ಷ ಹಾಗೂ 2021ರಲ್ಲಿ 102.25 ಲಕ್ಷ ಮರಣಗಳು ದಾಖಲಾಗಿವೆ. ಅಂದರೆ, 2019ರಿಂದ 2020ರ ವೇಳೆಗೆ ಮರಣ ಸಂಖ್ಯೆಯಲ್ಲಿ 4.75 ಲಕ್ಷದಷ್ಟು ಹೆಚ್ಚಳವಾಗಿದೆ. 2020ಕ್ಕೆ ಹೋಲಿಸಿದರೆ, 2021ರಲ್ಲಿ 21 ಲಕ್ಷದಷ್ಟು ಹೆಚ್ಚುವರಿ ಸಾವುಗಳು ಸಂಭವಿಸಿವೆ. ಒಟ್ಟಾರೆ, 2019ರಿಂದ 2021ರ ವೇಳೆಗೆ ಮರಣ ಸಂಖ್ಯೆಯು 25.84 ಲಕ್ಷ (33.82%)ರಷ್ಟು ಏರಿಕೆಯಾಗಿದೆ.

SRS ವರದಿಯ ಪ್ರಕಾರ, ಭಾರತದ ಮರಣ ದರವು 2019ರಲ್ಲಿ 1,000 ಜನರಿಗೆ 6.0 ಮರಣಗಳಿದ್ದರೆ, 2021ರಲ್ಲಿ 7.5ಕ್ಕೆ ಏರಿಕೆಯಾಗಿದೆ. ಈ ದರವು 2019ಕ್ಕೆ ಮುಂಚೆ ಕ್ರಮೇಣ ಕಡಿಮೆ ಇತ್ತು ಎಂಬುದು ಗಮನಾರ್ಹ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಮರಣ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ:

  • ಗುಜರಾತ್: 5.6 (2019) ರಿಂದ 8.5 (2021)
  • ಛತ್ತೀಸ್‌ಗಢ: 7.3 (2019) ರಿಂದ 10.1 (2021)
  • ದೆಹಲಿ: 3.2 (2019) ರಿಂದ 5.4 (2021)
  • ಹರಿಯಾಣ: 5.9 (2019) ರಿಂದ 8.2 (2021)

ಹೆಚ್ಚುವರಿಯಾಗಿ, SRS ದತ್ತಾಂಶವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಮರಣ ಪ್ರಮಾಣದ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮರಣ ಪ್ರಮಾಣವು 7.9 ಆಗಿದ್ದರೆ, ನಗರ ಪ್ರದೇಶಗಳಲ್ಲಿ ಇದು 6.6 ಆಗಿತ್ತು.

ಹೆಚ್ಚುವರಿ ಮರಣಗಳು ಮತ್ತು ಕೋವಿಡ್ ಮರಣಗಳ ನಡುವಿನ ನೈಜ ಸಂಬಂಧ ಏನು?

ರೋಗಶಾಸ್ತ್ರದಲ್ಲಿ, ‘ಹೆಚ್ಚುವರಿ ಮರಣಗಳು’ ಎಂಬುದು ಒಂದು ನಿರ್ದಿಷ್ಟ ಸಮಯದಲ್ಲಿ ಅಥವಾ ಗುಂಪಿನಲ್ಲಿ ಸಾಮಾನ್ಯವಾಗಿ ನಿರೀಕ್ಷೆಕ್ಕಿಂತ ಹೆಚ್ಚಿನ ಮರಣಗಳ ಸಂಖ್ಯೆಯನ್ನು ಸೂಚಿಸುತ್ತದೆ. ಹಿಂದಿನ ವರ್ಷಗಳ ದಾಖಲಾತಿಗಳ ಆಧಾರದ ಮೇಲೆ ಒಂದು ಟ್ರೆಂಡ್ ಮಾದರಿಯನ್ನು ರಚಿಸುವ ಮೂಲಕ ಹೆಚ್ಚುವರಿ ಮರಣ ಪ್ರಮಾಣವನ್ನು ಅಳೆಯುತ್ತದೆ. ಅಂತೆಯೇ, 2020 ಮತ್ತು 2021ರಲ್ಲಿ ನಿರೀಕ್ಷಿತ ಮರಣ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಈ ಅಂದಾಜುಗಳನ್ನು ವಾಸ್ತವಿಕ ದತ್ತಾಂಶಗಳೊಂದಿಗೆ ಹೋಲಿಕೆ ಮಾಡುವುದರಿಂದ ಹೆಚ್ಚುವರಿ ಮರಣಗಳ ಸಂಖ್ಯೆ ದೊರೆಯುತ್ತದೆ.

ಇಂಗ್ಲಿಷ್‌ ಸುದ್ದಿಸಂಸ್ಥೆ ‘The Quint’ನ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ 2020ರಲ್ಲಿ ಸುಮಾರು 78.97 ಲಕ್ಷ ಮತ್ತು 2021ರಲ್ಲಿ 81.53 ಲಕ್ಷ ನಿರೀಕ್ಷಿತ ಮರಣಗಳು ಎಂದು ಗುರುತಿಸಲಾಗಿತ್ತು. ಆದರೆ, CRS ದತ್ತಾಂಶ ಹೇಳುವಂತೆ, 2020ರಲ್ಲಿ 2.19 ಲಕ್ಷ, 2021ರಲ್ಲಿ 20.72 ಲಕ್ಷ – ಒಟ್ಟು 22.91 ಲಕ್ಷ ಹೆಚ್ಚುವರಿ ಮರಣಗಳು ದಾಖಲಾಗಿವೆ.

ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ(WHO)ಯ 2022ರ ವರದಿಯನ್ನು ವಿಶ್ಲೇಷಿಸಿರುವ ಸಂಖ್ಯಾಶಾಸ್ತ್ರಜ್ಞ ಏರಿಯಲ್ ಕಾರ್ಲಿನ್ಸ್ಕಿ ಅವರು, ”2020-2021ರಲ್ಲಿ ಭಾರತದಲ್ಲಿ ಕನಿಷ್ಠ 20 ಲಕ್ಷ ಹೆಚ್ಚುವರಿ ಮರಣಗಳು ದಾಖಲಾಗಿವೆ” ಎಂದಿದ್ದಾರೆ.

ಆದರೆ, ಈ ಲೆಕ್ಕಾಚಾರವು ಕೇವಲ ದಾಖಲಿತ ಮರಣಗಳ ಮೇಲೆ ಆಧಾರಿತವಾಗಿದೆ. ಆದಾಗ್ಯೂ, ನಿಖರವಾದ ಚಿತ್ರಣ ಪಡೆಯಬೇಕೆಂದರೆ, ಒಟ್ಟು ಮರಣಗಳಲ್ಲಿ ಎಷ್ಟು ಪಾಲು ದಾಖಲಾಗಿದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಈ ದಾಖಲಾತಿಯಲ್ಲಿ ಯಾವ ಬದಲಾವಣೆಗಳಾಗಿವೆ ಎಂಬುದನ್ನು ವಿಶ್ಲೇಷಿಸಿ, ಪರಿಗಣಿಸಬೇಕು. ಆದರೆ, ಅದು ನಡೆದಿಲ್ಲ.

ಗಣಿತಜ್ಞ ಮುರಾದ್ ಬನಾಜಿ ಅವರು, ”ದಾಖಲಾತಿಯ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ದತ್ತಾಂಶ ಮೂಲಗಳ ಆಧಾರದ ಮೇಲೆ ಅಂದಾಜುಗಳು ತರ್ಕಕ್ಕೆ ಸಿಲುಕುತ್ತವೆ. SRS ದಾಖಲಾತಿಯ ಮಟ್ಟವನ್ನು ಉತ್ಪ್ರೇಕ್ಷಿಸುವ ಸಾಧ್ಯತೆಯಿದೆ” ಎಂದಿದ್ದಾರೆ.

ಕಾರ್ಲಿನ್ಸ್ಕಿ ಅವರ ಪ್ರಕಾರ, ಡೇಟಾ ಪರಿಪೂರ್ಣತೆ, ಜನಸಂಖ್ಯೆಯ ಗಾತ್ರ ಹಾಗೂ ಕೆಲವು ರಾಜ್ಯಗಳಲ್ಲಿ ದಾಖಲಾಗದ ಮರಣಗಳನ್ನು ಸರಿಪಡಿಸಿದರೆ, 2020-21ರಲ್ಲಿ ಭಾರತದ ಹೆಚ್ಚುವರಿ ಮರಣಗಳು 40ರಿಂದ 60 ಲಕ್ಷದವರೆಗೆ ಇರುವ ಸಾಧ್ಯತೆಗಳಿವೆ. ಇದು WHO ಅಂದಾಜಿಸಿರುವ 47.4 ಲಕ್ಷ ಹೆಚ್ಚುವರಿ ಮರಣಗಳ ಅಂದಾಜಿಗೆ ಹೊಂದಿಕೆಯಾಗುತ್ತದೆ.

20 ಲಕ್ಷಕ್ಕೂ ಹೆಚ್ಚಿನ ಹೆಚ್ಚುವರಿ ಮರಣಗಳಿಗೆ ಕಾರಣ ಏನು?

ಸರ್ಕಾರದ ಅಧಿಕೃತ ಅಂಕಿಅಂಶವು, ಕೋವಿಡ್-19 ಮರಣ ಸಂಖ್ಯೆ ಕೇವಲ 5.33 ಲಕ್ಷ ಎಂದು ಹೇಳುತ್ತಿದೆ. ಆದರೆ, ಈ ದತ್ತಾಂಶಗಳು ಕೋವಿಡ್ ಸಂಬಂಧಿತ ಮರಣಗಳನ್ನು ಗಣನೀಯವಾಗಿ ಕಡಿಮೆಯಾಗಿ ಸೂಚಿಸುತ್ತವೆ. ಸರ್ಕಾರವು ಹೆಚ್ಚುವರಿ ಮರಣಗಳೆಲ್ಲವೂ ಕೋವಿಡ್‌ಗೆ ಸಂಬಂಧಿಸಿಲ್ಲ ಎಂದು ವಾದಿಸುತ್ತದೆ. ಜನಸಂಖ್ಯೆಯ ವ್ಯಾಪ್ತಿಯ ವಿಸ್ತರಣೆ, ದಾಖಲಾತಿ ವ್ಯವಸ್ಥೆಯ ಸುಧಾರಣೆ ಹಾಗೂ ಹೆಚ್ಚಿನ ಜಾಗೃತಿಯಿಂದಾಗಿ ಹೆಚ್ಚಿನ ಮರಣಗಳು ದಾಖಲಾಗಿರಬಹುದು ಎಂದು ಸರ್ಕಾರ ವಾದಿಸುತ್ತಿದೆ.

ಕೋವಿಡ್ ಮರಣವನ್ನು ವ್ಯಾಖ್ಯಾನಿಸಲು ಒಂದೇ ರೀತಿಯ ವಿಧಾನವಿಲ್ಲ. ನಾನಾ ರಾಜ್ಯಗಳಲ್ಲಿ ವರ್ಗೀಕರಣ ಮತ್ತು ವರದಿಗಳ ವ್ಯವಸ್ಥೆಯಲ್ಲಿ ಅಸಮಂಜಸತೆ ಕಂಡುಬಂದಿದೆ. ಕೊರೋನದಿಂದ ಉಂಟಾಗುವ ಹೃದಯಾಘಾತ, ಶ್ವಾಸಕೋಶದ ವೈಫಲ್ಯ ಅಥವಾ ಸ್ಟ್ರೋಕ್‌ನಂತಹ ತೊಡಕುಗಳನ್ನು ಪ್ರಾಥಮಿಕ ಮರಣ ಕಾರಣವೆಂದು ದಾಖಲಿಸಿರಬಹುದು. ಕೆಲವು ರೋಗಿಗಳು ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ಕೋವಿಡ್ ಬಾಧಿತ ಸಮಸ್ಯೆಯಿಂದ ಮೃತಪಟ್ಟಿರಬಹುದು. ಇದೆಲ್ಲವೂ ನಿಖರ ಕಾರಣವನ್ನು ಗುರುತಿಸಲು ಕಷ್ಟವಾಗಿಸಿದೆ.

ಭಾರತದಲ್ಲಿ ಗಣನೀಯ ಸಂಖ್ಯೆಯ ಮರಣಗಳು ಆಸ್ಪತ್ರೆಗಳಿಂದ ಹೊರಗಡೆ ಸಂಭವಿಸುತ್ತವೆ. ಇದರಿಂದ ವೈದ್ಯಕೀಯ ಪ್ರಮಾಣೀಕರಣವು ಸವಾಲಿನ ಸಂಗತಿಯಾಗಿದೆ. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ, 2020 ಮತ್ತು 2021ರ ಎಲ್ಲ ಹೆಚ್ಚುವರಿ ಮರಣಗಳು ಕೋವಿಡ್‌ನಿಂದ ಉಂಟಾದ ಸಾವುಗಳು ಎಂದು ಖಚಿತವಾಗಿ ಹೇಳಲು ಕಷ್ಟ. ಆದರೆ, ಈ ಅವಧಿಯಲ್ಲಿ ಮರಣ ಪ್ರಮಾಣದಲ್ಲಿ ಗಣನೀಯ ಏರಿಕೆಯು ಸಾಂಕ್ರಾಮಿಕ ರೋಗದ ನೇರ ಅಥವಾ ಪರೋಕ್ಷ ಪ್ರಭಾವದಿಂದ ಸಂಭವಿಸಿವೆ ಎಂಬುದನ್ನು ಸೂಚಿಸುತ್ತದೆ.

ಈ ಲೇಖನ ಓದಿದ್ದೀರಾ?: ದೇಶಕ್ಕೆ ಎಚ್ಚರಿಕೆ ಗಂಟೆ ‘ಜಾಗತಿಕ ಲಿಂಗ ಅಂತರ ಸೂಚ್ಯಂಕ’ ವರದಿ: ಲಿಂಗ ಸಮಾನತೆಯಲ್ಲಿ ಕಳಪೆ ಸ್ಥಾನ

ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಹಿರಿಯ ವಿಜ್ಞಾನಿ ಪ್ರಭಾತ್ ಝಾ, ”2020 ಮತ್ತು 2021ರ ಹೆಚ್ಚಿನ ಹೆಚ್ಚುವರಿ ಮರಣಗಳು ಕೋವಿಡ್‌ಗೆ ಸಂಬಂಧಿಸಿವೆ. ಸಾಂಕ್ರಾಮಿಕ ರೋಗದ ಮಧ್ಯೆ ಭಾರತೀಯರು ಕೊರೋನವಲ್ಲದೆಯೇ ಹೆಚ್ಚಾಗಿ ಸಾವನ್ನಪ್ಪಿದ್ದಾರೆ ಎಂಬುದನ್ನು ಹೇಳುವುದು ಅಥವಾ ಭಾವಿಸುವುದು ತಾರ್ಕಿಕವಲ್ಲದ ವಾದ. ಹಾಗೆ ನೋಡಿದರೆ, ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದಿಂದಾಗಿ ರಸ್ತೆ ಅಪಘಾತಗಳು ಮತ್ತು ಇತರ ಸಾಂಕ್ರಾಮಿಕ ರೋಗಗಳಿಂದಾಗುವ ಮರಣಗಳು ಕಡಿಮೆಯಾಗಿರುತ್ತವೆಯೇ ಹೊರತು, ಹೆಚ್ಚಾಗಲು ಸಾಧ್ಯವಿಲ್ಲ” ಎಂದು ಅವರು ಗಮನ ಸೆಳೆದಿದ್ದಾರೆ..

ಭಾರತದ ಕೋವಿಡ್ ಮರಣ ಡೇಟಾ ಮತ್ತು ಕರಿನೆರಳು

ಭಾರತದಲ್ಲಿ ಕೊರೋನ ಮರಣ ಸಂಖ್ಯೆಯು ಆರಂಭದಿಂದಲೂ ವಿವಾದ ವಿಷಯವಾಗಿ ಉಳಿದಿದೆ. ಡೇಟಾದಲ್ಲಿ ಪಾರದರ್ಶಕತೆಯ ಕೊರತೆ, ಅಸಮಂಜಸತೆ ಹಾಗೂ ಗಣನೀಯ ಕೊರತೆಗಳಿಂದಾಗಿ ನಿಖರ ಅಂಕಿಅಂಶವನ್ನು ಇಟ್ಟುಕೊಳ್ಳಲಾಗಿಲ್ಲ. ಹೀಗಾಗಿ, ಸ್ವತಂತ್ರ ಸಂಶೋಧಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ನಿಜವಾದ ಜೀವ ಹಾನಿಯ ವೆಚ್ಚವನ್ನು ಅಂದಾಜಿಸಲು ಪ್ರಯತ್ನಿಸಿವೆ. WHOದ 2022ರ ವರದಿಯು 2020-21ರಲ್ಲಿ ಭಾರತದಲ್ಲಿ 47.4 ಲಕ್ಷ ಹೆಚ್ಚುವರಿ ಮರಣಗಳನ್ನು ಅಂದಾಜಿಸಿದೆ. ಆದರೆ ಭಾರತ ಸರ್ಕಾರವು ಈ ಅಂದಾಜನ್ನು ‘ತಪ್ಪು’ ಮತ್ತು ‘ವೈಜ್ಞಾನಿಕವಲ್ಲ’ ಎಂದು ಟೀಕಿಸಿದೆ.

”ಸರ್ಕಾರವು 5.3 ಲಕ್ಷ ಮರಣಗಳು ಸಂಭವಿಸಿವೆ ಎನ್ನುತ್ತಿರುವುದು ತಾಂತ್ರಿಕ ಮತ್ತು ರಾಜಕೀಯ ತಪ್ಪುಗಳಿಂದ ಕೂಡಿದೆ. ಬಹುವಿಧದ ಅಧ್ಯಯನಗಳು ಭಾರತದಲ್ಲಿನ ಕೋವಿಡ್-19 ಮರಣಗಳ ನಿಜವಾದ ಸಂಖ್ಯೆಯು ಸರ್ಕಾರ ನೀಡಿರುವ ಅಂಕಿಅಂಶಕ್ಕಿಂತ ಐದರಿಂದ ಏಳು ಪಟ್ಟು ಹೆಚ್ಚಿರಬಹುದು ಎಂಬುದನ್ನು ಸೂಚಿಸಿವೆ” ಎಂದು ಪ್ರಭಾತ್ ಝಾ ತಿಳಿಸಿದ್ದಾರೆ.

ಅಂಕಿಅಂಶಗಳ ಕೊರತೆಯು ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದಾದ್ಯಂತ, WHOಯ ಅಂದಾಜಿನ ವರದಿಯು ಸ್ಥಳೀಯ ಸರ್ಕಾರಗಳು ಅಧಿಕೃತವೆಂದು ಹೇಳಿಕೊಳ್ಳುವ ಸಂಖ್ಯೆಗಿಂತ ಗಣನೀಯವಾಗಿ ಹೆಚ್ಚಿದೆ. 2021ರ ಅಂತ್ಯದ ವೇಳೆಗೆ, ಜಗತ್ತಿನ ಎಲ್ಲ ರಾಷ್ಟ್ರಗಳ ಸರ್ಕಾರಗಳು ವಿಶ್ವದಾದ್ಯಂತ ಒಟ್ಟು ಸುಮಾರು 60 ಲಕ್ಷ ಕೋವಿಡ್-19 ಮರಣಗಳು ಸಂಭವಿಸವೆ ಎಂದು ಹೇಳಿಕೊಂಡಿದ್ದರೆ, ಡಬ್ಲ್ಯೂಎಚ್‌ಒ 149 ಲಕ್ಷ ಮರಣಗಳು ಸಂಭವಿಸಿವೆ ಎಂದು ಅಂದಾಜಿಸಿದೆ.

ಡೇಟಾ ಸಂಗ್ರಹದ ಅಗತ್ಯತೆ

ಕೊರೋನ ಮರಣಗಳ ವರ್ಗೀಕರಣ ಮತ್ತು ವರದಿಗಳು ಸಂಕೀರ್ಣವಾದ ಸಮಸ್ಯೆಯಾಗಿ ಉಳಿದಿವೆ. ‘ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌’ನ ಭ್ರಮರ್ ಮುಖರ್ಜಿ ಹೇಳುವಂತೆ, ”ನಿಖರವಾಗಿ ಮರಣಗಳನ್ನು ವರದಿ ಮಾಡದ ರಾಜ್ಯಗಳು ಮತ್ತು ದೇಶಗಳು ತಡೆಗಟ್ಟುವಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಹಿನ್ನಡೆ ಎದುರಿಸುತ್ತವೆ” ಎಂದು ತಿಳಿಸಿದ್ದಾರೆ. ಒಟ್ಟಾರೆ ಮರಣಗಳು ಮತ್ತು ಮರಣಗಳ ನಿರ್ದಿಷ್ಟ ಕಾರಣಗಳ ಕುರಿತು ವಿಶ್ವಾಸಾರ್ಹ ಡೇಟಾವನ್ನು ಸಂಗ್ರಹಿಸುವ, ದಾಖಲಿಸುವ ಹಾಗೂ ಪಾರದರ್ಶಕವಾಗಿ ಪ್ರಕಟಿಸುವ ಗಟ್ಟಿಯಾದ ವ್ಯವಸ್ಥೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...