ಹಿಂದುತ್ವ ಕೋಮುವಾದಿ ಸಂಘಟನೆಗಳ ಪುಂಡರಿಂದ ತಪ್ಪಿಸಿಕೊಳ್ಳಲು ಯುವಕ-ಯುವತಿ ಪಿಜ್ಜಾ ಅಂಗಡಿಯ 2ನೇ ಮಹಡಿಯಿಂದ ಜಿಗಿದಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ, ಪಿಜ್ಜಾ ಅಂಗಡಿಗೆ ನುಗ್ಗಿದ ಹಿಂದುತ್ವವಾದಿ ಪುಂಡರು ದಾಂಧಲೆ ನಡೆಸಿದ್ದು, ಅಲ್ಲಿದ್ದವರ ಮೇಲೆ ಹಲ್ಲೆಗೈದಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಜೋಡಿ, ಕಟ್ಟಡದಿಂದ ಜಿಗಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಹಜಹಾನ್‌ಪುರದ ಕಾಂತ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೇಲಿ ಮೋರ್‌ನಲ್ಲಿರುವ ಪಿಜ್ಜಾ ಅಂಗಡಿಲ್ಲಿ ಘಟನೆ ನಡೆದಿದೆ. 21 ವರ್ಷದ ಯುವಕ ಮತ್ತು 19 ವರ್ಷದ ಯುವತಿ ಪಿಜ್ಜಾ ತಿನ್ನಲು ಅಂಗಡಿಗೆ ತೆರಳಿದ್ದರು. ಇದೇ ವೇಳೆ, ಅಂಗಡಿಗೆ ನುಗ್ಗಿದ ಹಿಂದುತ್ವ ಪುಂಡರು ಅವರಿಬ್ಬರನ್ನೂ ಅವಾಚ್ಯವಾಗಿ ನಿಂದಿಸಿ, ಅವರ ಜಾತಿಗಳ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ. ತಾವಿಬ್ಬರೂ ಹಿಂದುಗಳು ಎಂದು ಜೋಡಿ ಹೇಳಿದೆ.
ಆದಾಗ್ಯೂ, ಅವರ ಮೇಲೆ ಪುಂಡರ ಗುಂಪು ಹಲ್ಲೆ ನಡೆಸಲು ಮುಂದಾಗಿದೆ. ಭಯಭೀತರಾದ ಜೋಡಿ, ಅವರಿಂದ ತಪ್ಪಸಿಕೊಳ್ಳಲು ಕಿಟಕಿಯ ಸರಳನ್ನು ಹೊರತೆಗೆದು ಎರಡನೇ ಮಹಡಿಯಿಂದ ಹಾರಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ತನಿಖೆ ನಡೆಸುತ್ತಿದೆ. ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ದೂರ ಬಂದ ತಕ್ಷಣವೇ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌ಪಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.




